ಹೊಸದಿಲ್ಲಿ: ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ನಿಂದಿಸಿದ್ದ ಕಾಶ್ಮೀರಿ ಫೈಲ್ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ, ಆನಂದ್ ರಂಗನಾಥನ್ ಮತ್ತು ಸ್ವರಾಜ್ ನ್ಯೂಸ್ ಪೋರ್ಟಲ್ ವಿರುದ್ಧ ದಿಲ್ಲಿ ಹೈಕೋರ್ಟ್ ಕಾನೂನು ಕ್ರಮ ಕೈಗೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಅಗ್ನಿಹೋತ್ರಿ ಕ್ಷಮೆ ಯಾಚಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಕೀಳುಮಟ್ಟದ ಟೀಕೆಯನ್ನು ಮಾಡಿದ್ದರು. ಗೌತಮ್ ನವ್ಲಾಖಾ ಅವರು ನ್ಯಾಯಾಧೀಶರ ಪತ್ನಿಯ ಸ್ನೇಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಉದಾರತನ ತೋರಿ ಜಾಮೀನು ನೀಡಲಾಗಿದೆ ಎಂದು ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ್ದ ಟ್ವಿಟರ್ ಈ ಟ್ವೀಟನ್ನು ಅಳಿಸಿಹಾಕಿತ್ತು.
ನ್ಯಾಯಮೂರ್ತಿ ಎಸ್. ಮುರುಳೀಧರ್ ಅವರನ್ನು ನಿಂದಿಸಿದ ಟ್ವೀಟ್ ಅನ್ನು ತಾನು ಈಗಾಗಲೇ ಡಿಲೀಟ್ ಮಾಡಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಅಗ್ನಿಹೋತ್ರಿ ನೀಡಿರುವ ಪ್ರಮಾಣಪತ್ರವೂ ಸುಳ್ಳಾಗಿದ್ದು, ನಿಂದನೆಯ ಟ್ವೀಟ್ ಅನ್ನು ಅಗ್ನಿಹೋತ್ರಿ ಡಿಲೀಟ್ ಮಾಡಿಲ್ಲ, ಬದಲಾಗಿ ಟ್ವಿಟರ್ ಸಂಸ್ಥೆ ಡಿಲೀಟ್ ಮಾಡಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಮತ್ತು ನ್ಯಾಯಮೂರ್ತಿ ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯವು ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಮುಂದಿನ ವಿಚಾರಣೆ ಸಂದರ್ಭದಲ್ಲಿ ಹಾಜರಿರುವಂತೆ ಅಗ್ನಿಹೋತ್ರಿಗೆ ಆದೇಶಿಸಿದೆ.
ಪ್ರಕರಣದ ಮುಂದಿನ ವಿಚಾರಣೆ 2023ರ ಮಾರ್ಚ್ 16ರಂದು ನಡೆಯಲಿದೆ.