ದೆಹಲಿ: ಸಂವಿಧಾನಬದ್ಧ ಮೀಸಲಾತಿ ವ್ಯವಸ್ಥೆಯನ್ನು ತಾವು ಬೆಂಬಲಿಸುವುದಾಗಿಯೂ ಮತ್ತು ಸಮಾಜದ ಎಲ್ಲ ವರ್ಗಗಳು ಒಟ್ಟಾಗಿ ಮುನ್ನಡೆಯಲು ಮೀಸಲಾತಿ ಮುಂದುವರಿಯುವುದು ಅತ್ಯಗತ್ಯ ಎಂದೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸ್ಪಷ್ಟಪಡಿಸಿದೆ.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೋಲಂಕಿ, ಸಂವಿಧಾನ ನೀಡಿರುವ ಮೀಸಲಾತಿಯನ್ನು ಸಂಘಟನೆ ಮೊದಲಿನಿಂದಲೂ ನಿರಂತರವಾಗಿ ಬೆಂಬಲಿಸಿಕೊಂಡು ಬಂದಿದೆ ಎಂದಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಅದು ಮುಂದುವರಿಯಬೇಕು; ದೇಶದಲ್ಲಿ ಮೀಸಲಾತಿ ವ್ಯವಸ್ಥೆಯು ಅತ್ಯಗತ್ಯ ಎಂದು ಎಬಿವಿಪಿ ಯಾವಾಗಲೂ ಪ್ರತಿಪಾದಿಸಿದೆ ಎಂದು ಅವರು ಹೇಳಿದರು.
ಪ್ರಸ್ತುತ ಇರುವ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಅಥವಾ ಅದನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಕೆಲ ಗುಂಪುಗಳು ಮಾಡುತ್ತಿರುವ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಸೋಲಂಕಿ, ಇಂತಹ ಬೇಡಿಕೆಗಳನ್ನು ಇಡುತ್ತಿರುವವರಿಗೆ ಈ ವಿಷಯದ ಬಗ್ಗೆ ಆಳವಾದ ತಿಳಿವಳಿಕೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದೇಶಕ್ಕೆ ಪ್ರಸ್ತುತ ಏನು ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದ ಅವರು, ಸಾಮಾಜಿಕ ಸಾಮರಸ್ಯ ಮತ್ತು ಸಮಾಜದ ವಿವಿಧ ವರ್ಗಗಳು ಒಟ್ಟಾಗಿ ಪ್ರಗತಿ ಸಾಧಿಸಬೇಕೆಂಬ ಪರಿಕಲ್ಪನೆಯ ಮೇಲೆ ಎಬಿವಿಪಿಯ ನಿಲುವು ನಿಂತಿದೆ, ಹೀಗಾಗಿ ಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
‘ರಿಸರ್ವೇಶನ್ ಹಟಾವೋ ಆಂದೋಲನ’ ಎಂಬ ಇನ್‌ಸ್ಟಾಗ್ರಾಮ್ ಪುಟ ನೀಡಿದ್ದ ಕರೆಯ ಮೇರೆಗೆ ಮೀಸಲಾತಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಆಗಸ್ಟ್ 21 ರಂದು ದೆಹಲಿಯಲ್ಲಿ ಕೆಲವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೋಲಂಕಿ ಅವರ ಈ ಹೇಳಿಕೆ ಹೊರಬಿದ್ದಿದೆ. ಸರ್ಕಾರಿ ಸೌಲಭ್ಯಗಳು ಮತ್ತು ಮೀಸಲಾತಿಯನ್ನು ನಿರ್ಧರಿಸುವಲ್ಲಿ ಜಾತಿಗಿಂತ ಆರ್ಥಿಕ ಮಾನದಂಡಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಪ್ರತಿಭಟನಾಕಾರರು ವಾದಿಸಿದ್ದರು. ಈ ಗುಂಪಿನ ಮುಖಂಡರೊಂದಿಗೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸೌಹಾರ್ದಯುತ ಮಾತುಕತೆಯನ್ನೂ ನಡೆಸಿದ್ದರು.
ಬಿಜೆಪಿ ಅಧಿಕಾರದಲ್ಲಿರುವಾಗ ಎಬಿವಿಪಿ ಸರ್ಕಾರದ ವಿರುದ್ಧ ನಿಲುವು ತಳೆಯಲು ಹಿಂದೇಟು ಹಾಕುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಲಂಕಿ, ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿರಲಿ ಅಥವಾ ಇತರ ಪಕ್ಷಗಳ ಸರ್ಕಾರವಿರಲಿ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ಎಬಿವಿಪಿಯ ನಿಲುವು ಬಹಳ ಸ್ಪಷ್ಟವಾಗಿದೆ ಎಂದರು. ತಾವು ವಿದ್ಯಾರ್ಥಿಗಳ ಸಮಸ್ಯೆಗಳ ಮೇಲೆ ಪ್ರಬಲವಾಗಿ ಮತ್ತು ಆಕ್ರಮಣಕಾರಿಯಾಗಿ ಹೋರಾಟ ನಡೆಸುವುದಾಗಿ ಹೇಳಿದ ಅವರು, ಎಲ್ಲ ಸಂದರ್ಭಗಳಲ್ಲೂ ಕೇವಲ ಸಂಘರ್ಷವನ್ನೇ ನೆಚ್ಚಿಕೊಳ್ಳದೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡುತ್ತೇವೆ ಎಂದರು. ಮಾತುಕತೆಯಿಂದ ಪರಿಹಾರ ಸಿಗದಿದ್ದರೆ ಹೋರಾಟ ನಡೆಸಲು ಎಬಿವಿಪಿ ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ ಅವರು, ವಿದ್ಯಾರ್ಥಿ ಸಮಸ್ಯೆಗಳ ವಿಚಾರದಲ್ಲಿ ಯಾವುದೇ ರಾಜಕೀಯ ಕಾರ್ಯಸೂಚಿಯಿಲ್ಲದೆ ಕೇವಲ ಪರಿಹಾರದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.
