ಬೆಂಗಳೂರು: ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಮತ್ತು ಅದಕ್ಕೆ ಅನುಮತಿ ನೀಡಿದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂವರು ಕೇಂದ್ರ ಸಚಿವರಿಗೆ ಪತ್ರ ಬರೆದಿದೆ.
ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಆಯೋಜಕರು ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಈ ಹಿಂದೆ ತಾತ್ಕಾಲಿಕವಾಗಿ ಮುಂದೂಡಿದ್ದರು.
ಲಲಿತ್ ವಾಚಾನಿ ನಿರ್ದೇಶನದ ‘ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್’ (Prisoner No. 626710 is Present) ಸಾಕ್ಷ್ಯಚಿತ್ರ ಪ್ರದರ್ಶನವನ್ನು ಕೇವಲ ಮುಂದೂಡಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಎಬಿವಿಪಿ ಬೆಂಗಳೂರು ಘಟಕ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಅಧಿಕೃತ ಇಮೇಲ್ ಮೂಲಕ ಮನವಿ ಸಲ್ಲಿಸಿದೆ. ಸಾರ್ವಜನಿಕರ ಆಕ್ರೋಶ ತಣ್ಣಗಾಗುವಂತೆ ಮಾಡಲು ಕಾರ್ಯಕ್ರಮವನ್ನು ಕೇವಲ ಮುಂದೂಡಲಾಗಿದ್ದು, ಇದು ತಂತ್ರಗಾರಿಕೆಯಷ್ಟೇ ಎಂದು ವಿದ್ಯಾರ್ಥಿ ಸಂಘಟನೆ ಆಪಾದಿಸಿದೆ.
ಈ ಕುರಿತು ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹಿಸಿರುವ ಎಬಿವಿಪಿ, ಯಾವುದೇ ನೆಪದಲ್ಲೂ ಕ್ಯಾಂಪಸ್‌ನಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸದಂತೆ ಅಥವಾ ಪ್ರಚಾರ ಮಾಡದಂತೆ ಎಲ್ಲಾ ಅನುಮತಿಗಳನ್ನು ರದ್ದುಗೊಳಿಸಲು NLSIU ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ. ವಿದ್ಯಾರ್ಥಿ ಸಂಘಟನೆಗಳು ನೀಡಿದ ದೂರುಗಳನ್ನು ಕಡೆಗಣಿಸಿ, ದೇಶವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ವ್ಯಕ್ತಿಯನ್ನು ವೈಭವೀಕರಿಸುವ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಆಡಳಿತ ಮಂಡಳಿ ಮತ್ತು ಸಂಘಟನಾ ಸಮಿತಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.
