Monday, June 17, 2024

ಸತ್ಯ | ನ್ಯಾಯ |ಧರ್ಮ

ಬಿ ವಿ ಕಕ್ಕಿಲ್ಲಾಯ ಉಪನ್ಯಾಸ ಕಾರ್ಯಕ್ರಮ: ಡಾ.ಶಂಸುಲ್‌ ಇಸ್ಲಾಂ ಉಪನ್ಯಾಸ ವಿರೋಧಿಸಿ ನಡೆದ ಎಬಿವಿಪಿ ಪ್ರತಿಭಟನೆ ವಿಫಲ.

ಮಂಗಳೂರು: ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಂಸುಲ್‌ ಇಸ್ಲಾಂ ಉಪನ್ಯಾಸವನ್ನು ವಿರೋಧಿಸಿ ಕಾಲೇಜಿನ ಆವರಣದಲ್ಲಿ ಎಬಿವಿಪಿಯವರು ಪ್ರತಿಭಟನೆ ನಡೆಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮ- 1857- ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ ವಿಷಯದಲ್ಲಿ ಉಪನ್ಯಾಸವಿತ್ತು.

ʼಗೋ ಬ್ಯಾಕ್‌ ಶಂಸುಲ್‌ʼ ಎಂದು ಘೋಷಣೆ ಕೂಗಿದ ಎಬಿವಿಪಿಯ ಕಾರ್ಯಕರ್ತರ ಪ್ರತಿಭಟನೆ  ಪೊಲೀಸರ ಬಿಗಿ ಬಂದೋಬಸ್ತು ಮತ್ತು ಸಮಯಪ್ರಜ್ಞೆಯೊಂದಿಗೆ  ಕೇವಲ ಘೋಷಣೆ ಕೂಗುವುದಕ್ಕಷ್ಟೇ  ಸೀಮಿತವಾಗಿ ಕಾರ್ಯಕ್ರಮ ಯಶಸ್ವಿಯಾಯಿತು.

ಪ್ರತಿಭಟನೆ ಯಾಕೆ ಎಂದು ಎಬಿವಿಪಿಯ ನಾಯಕರಲ್ಲೊಬ್ಬರಾದ ಪ್ರಜ್ವಲ್‌ ಅವರನ್ನು ಪೀಪಲ್‌ ಮೀಡಿಯಾ ಮಾತಾಡಿಸಿದಾಗ ಅವರು “ಶಂಸುಲ್‌ ಇಸ್ಲಾಂ ಅವರ ಎಲ್ಲಾ ಪುಸ್ತಕಗಳು ರಾಷ್ಟ್ರೀಯತೆಯ ಚಿಂತನೆಗಿಂತ ಜಾಸ್ತಿ ಇಸ್ಲಾಂ ಪರ ಅಜೆಂಡಾವನ್ನು ಹೊಂದಿರುವಂತವು. ಸಾವರ್ಕರ್‌ ಅನ್‌ ಮಾಸ್ಕ್ ಡ್ ಪುಸ್ತಕ ನಾನು ಓದಿರುವೆ, ವಿಮರ್ಶೆ ನೋಡಿರುವೆ. ಇದರಲ್ಲಿ ಸಾವರ್ಕರ್‌ ಬಗ್ಗೆ ಅವರು ಅತಿ ಕೀಳಾಗಿ ಮಾತಾಡಿದ್ದಾರೆ. ಕಾಲಾಪಾನಿ ಶಿಕ್ಷೆಯನ್ನು  ಅತಿ ತುಚ್ಚವಾಗಿ, ಹಾಸ್ಯಾಸ್ಪದವಾಗಿ ಕಾಮಿಡಿ ರೀತಿ ನೋಡಿದ್ದಾರೆ. 1857 ನೇ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕದ ಮೊದಲ ಸಾಲಿನಲ್ಲಿ ಭಾರತವನ್ನು ಜಾತ್ಯತೀತವಾದ ರಾಷ್ಟ್ರ ಎಂದಿದ್ದಾರೆ. ಭಾರತದ ಬಗ್ಗೆ ಅವರಿಗೆ ಗೌರವವೇ ಇಲ್ಲದಿರುವಾಗ ಅಕಾಡೆಮಿಕ್‌ ಕ್ಷೇತ್ರದಲ್ಲಿ ಲೆಕ್ಚರ್‌ ಡೆಲಿವರಿ ಮಾಡುವುದು ಸರಿಯಲ್ಲ. ಇತಿಹಾಸವನ್ನು ತುಂಡು ತುಂಡು ಮಾಡಿ ವಿದ್ಯಾರ್ಥಿಗಳ ಬ್ರೈನ್‌ ವಾಶ್‌ ಮಾಡುವುದು ತಪ್ಪು. ಕಲಿಯಲು ಬಂದಿರುವ ನಮ್ಮಲ್ಲಿ ರಾಷ್ಟ್ರೀಯತೆಯ ಚಿಂತನೆಯನ್ನು ಬಿತ್ತಬೇಕೇ ಹೊರತು ಬೇರೇನೂ ಅಲ್ಲ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೊಸತು ಪತ್ರಿಕೆಯ ಸಿದ್ಧನ ಗೌಡ ಪಾಟೀಲ ಅವರನ್ನು ಮಾತಾಡಿಸಿದಾಗ  “ಎಬಿವಿಪಿಯವರ ಪ್ರತಿಭಟನೆ ಮಂಗಳೂರಿಗೆ  ಒಂದು ಕಪ್ಪು  ಚುಕ್ಕೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಬಗ್ಗೆ ಮಾಡಿದ ಕಾರ್ಯಕ್ರಮಕ್ಕೇ ಮಂಗಳೂರಲ್ಲಿ ಅಡ್ಡಿ ಮಾಡಿದ್ದಾರೆ ಅಂದರೆ ಬಿಜೆಪಿ, ಆರ್‌ ಎಸ್‌ ಎಸ್‌, ಇವರ್ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಅಲ್ಲ. ಇದರ ಹಿಂದೆ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಉದ್ದೇಶ, ಕರ್ನಾಟಕದಲ್ಲಿ ʼಅವರುʼ ಚುನಾವಣೆ ಸೋತಿದ್ದಾರೆ, ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಅವರು ತಮ್ಮ ಅಸಹನೆಯನ್ನು ಹೊರಹಾಕ್ತಾ ಇದ್ದಾರೆ ಅಷ್ಟೆ. ಇಷ್ಟಕ್ಕೂ ವಿದ್ಯಾರ್ಥಿಗಳಿಗೆ ಸಮಸ್ಯೆ ಇತ್ತೂ ಅಂದ್ರೆ ಸಭೆಯ ಹೊರಗೆ ಕೂತು ಚರ್ಚೆ ಮಾಡಬಹುದಿತ್ತು. ಚರ್ಚೆಯ ಮೂಲಕ ಕ್ಯಾಂಪಸ್‌ ಕಟ್ಟಬೇಕೇ ಹೊರತು ಗೂಂಡಾಗಿರಿಯ ಮೂಲಕ ಅಲ್ಲ” ಎಂದು ಅವರು ಪ್ರತಿಕ್ರಿಯಿಸಿದರು.

ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಕ್ಕೆ ವಿಶ್ವ ವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗವಿತ್ತು.

Related Articles

ಇತ್ತೀಚಿನ ಸುದ್ದಿಗಳು