ಸಿಡಿಲಿನ ಆರ್ಭಟಕ್ಕೆ ಕಾರ್ಮಿಕ ಬಲಿ: ಕುಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ವೇಳೆ ದುರ್ಘಟನೆ

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಬಳಿ ಗುರುವಾರ ಸಂಜೆ ಸಂಭವಿಸಿದ ಸಿಡಿಲು ದುರಂತದಲ್ಲಿ ಸೇತುವೆ ದುರಸ್ತಿ ಕಾಮಗಾರಿಯಲ್ಲಿ ನಿರತನಾಗಿದ್ದ ಪಂಜಾಬ್ ಮೂಲದ ಕಾರ್ಮಿಕನೋರ್ವ ಮೃತಪಟ್ಟು, ಮತ್ತೊಬ್ಬ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮೃತರು ಪಂಜಾಬ್ ಮೂಲದ ಅಶುತೋಷ್ (35) ಎಂದು ಗುರುತಿಸಲಾಗಿದ್ದು, ಅವರ ಸಹೋದ್ಯೋಗಿ ಲವಜೋತ್ ಸಿಂಗ್ (28) ಗಾಯಗೊಂಡು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ದಿನಗಳಿಂದ ಅರಾಟೆ ಹಳೆ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಗುರುವಾರ ಸಂಜೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದ ವೇಳೆ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತಾದರೂ, ಅಶುತೋಷ್ ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆ ಪ್ರಾಣ ಬಿಟ್ಟರು.

ರಾಜ್ಯದಲ್ಲಿ ಆರೆಂಜ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ (IMD) ಇಂದು (ಮೇ 15) ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ರಾಜ್ಯದಾದ್ಯಂತ ಭಾರಿ ಮಳೆ, ಗುಡುಗು ಮತ್ತು ಸಿಡಿಲಿನ ಮುನ್ಸೂಚನೆ ನೀಡಿದೆ. ಗುರುವಾರ ಸಂಜೆಯಿಂದಲೇ ಹಲವು ಕಡೆ ಬಿದ್ದ ಬಾರಿ ಮಳೆ ಹಿನ್ನೆಲೆಯಲ್ಲಿ ಈ ವರದಿ ಬಿಡುಗಡೆ ಆಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 4-5 ದಿನ ಗಂಟೆಗೆ 40 ರಿಂದ 50 ಕಿ.ಮೀ. ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ನದಿಗಳು ಮತ್ತು ಜಲಪಾತಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ನೈರುತ್ಯ ಮುಂಗಾರು ಮಾರುತಗಳು ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದ ಮೇಲೆ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು ನಿಗದಿತ ಅವಧಿಗಿಂತ ಮುನ್ನವೇ ಆಗಮಿಸಬಹುದು ಎಂದು IMD ತಿಳಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು