Friday, June 14, 2024

ಸತ್ಯ | ನ್ಯಾಯ |ಧರ್ಮ

ಸೌಜನ್ಯ ಹತ್ಯೆ ಪ್ರಕರಣದ ಆರೋಪಿ ಖುಲಾಸೆ : ಸಿಬಿಐ ಮರು ತನಿಖೆಗೆ ಕುಟುಂಬಸ್ಥರ ಒತ್ತಾಯ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಏಕೈಕ ಆರೋಪಿಯನ್ನೂ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ ಒಂದು ದಿನದ ನಂತರ, ಇಂತಹ ಅಪರಾಧದ ಹಿಂದಿರುವ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ.

2012ರಲ್ಲಿ ಧರ್ಮಸ್ಥಳದ ನಿರ್ಜನ ಸ್ಥಳದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳನ್ನು ಕತ್ತು ಹಿಸುಕಿ ಶಾಲಿನಿಂದ ಕೈ ಕಟ್ಟಿ ಅಮಾನುಷವಾಗಿ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್​ನನ್ನು ಬಂಧಿಸಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆ ನಂತರ ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ 11 ವರ್ಷಗಳ ನಂತರ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿದೆ.

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಸೌಜನ್ಯ ತಾಯಿ ಕುಸುಮಾವತಿ ಪ್ರತಿಕ್ರಿಯಿಸಿದ್ದು “ನ್ಯಾಯಾಲಯದ ತೀರ್ಪಿನಿಂದ ನಮಗೆ ಕೊಂಚ ಮಟ್ಟಿಗೆ ಸಮಾಧಾನವಿದೆ. ನಿಜವಾದ ಅಪರಾಧಿ ಸಂತೋಷ್ ರಾವ್ ಅಲ್ಲ ಎಂಬುದನ್ನು ನಾವು ಕಳೆದ 11 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಅವನು ಅತ್ಯಾಚಾರಿ ಅಥವಾ ಕೊಲೆಗಾರನೂ ಅಲ್ಲ. ಈ ಮೂಲಕ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಹೊರಹಾಕಿದೆ. ಆದರೆ ನಿಜವಾದ ಅಪರಾಧಿ ಯಾರು ಎಂಬುದನ್ನು ಸಿಬಿಐ ಮರು ತನಿಖೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

“ಈಗಾಗಲೇ ನಾವು ಶಂಕಿತರ ನಾಲ್ಕು ಹೆಸರುಗಳನ್ನು ನೀಡಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು. ನನ್ನ ಮಗಳ ನಿಜವಾದ ಕೊಲೆಗಾರರು ಯಾರೆಂದು ತಿಳಿಯಲು ನಾವು ಬಯಸುತ್ತೇವೆ. ನನ್ನ ಮಗಳ ಹತ್ಯೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಮೃತ ಸೌಜನ್ಯ ತಾಯಿ ಕುಸುಮಾವತಿ ಪ್ರತಿಕ್ರಿಯಿಸಿದ್ದಾರೆ.

“ನನ್ನ ಮಗಳು ಸೌಜನ್ಯ ಕಾಲೇಜು ಮುಗಿಸಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ರಾತ್ರಿ 2 ಗಂಟೆಯವರೆಗೂ ಹಡುಕಾಟ ನಡೆಸಿದ್ದೆವು. ಸುಮಾರು 2,000 ಜನರು ಹುಡುಕಾಟದಲ್ಲಿ ಜೊತೆಯಾಗಿದ್ದರು. ಒಂದು ದಿನದ ನಂತರ ಆಕೆಯ ಶವ ಪತ್ತೆಯಾಯಿತು. ಕೊಲೆಗೂ ಮುನ್ನ ದುಷ್ಕರ್ಮಿಗಳು ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಗಮನಿಸಿದವರೂ ಹೇಳುತ್ತಾರೆ. ನನಗೆ ನನ್ನ ಕಣ್ಣುಗಳಿಂದ ಮಗಳನ್ನು ಆ ಸ್ಥಿತಿಯಲ್ಲಿ ನೋಡಲು ಮನಸ್ಸಾಗಿಲ್ಲ” ಎಂದರು. ಹಾಗೆಯೇ “ಶುರುವಿನ ದಿನಗಳಲ್ಲಿ ತನಿಖಾಧಿಕಾರಿಗಳ ಕಡೆಯಿಂದಲೇ ಸಾಕ್ಷ್ಯ ನಾಶವಾಗಿತ್ತು. ಅವಳು ಸತ್ತ ದಿನ, ಮಳೆ ಬೀಳುತ್ತಿತ್ತು ಮತ್ತು ಅವಳ ದೇಹ ಮತ್ತು ಬಟ್ಟೆ ನೀರಿನಲ್ಲಿ ನೆನೆಸಿರಬಹುದು. ಆದರೆ ಅದರ ಯಾವುದೇ ಕುರುಹು ಅವಳ ದೇಹದ ಮೇಲೆ ಅಥವಾ ಆ ಜಾಗದಲ್ಲಿ ಇರದಂತೆ ತನಿಖಾಧಿಕಾರಿಗಳು ಮಾಡಿದ್ದರು.”

“ಅಷ್ಟೆ ಅಲ್ಲದೆ ನಮ್ಮ ದೈನಂದಿನ ಚಟುವಟಿಕೆಗಳನ್ನು ಗಮನದಲ್ಲಿಡಲು, ನಮ್ಮನ್ನು ನಿರಂತರವಾಗಿ ಗಮನಿಸಲು ಅಪರಾಧಿ ಕಡೆಯವರೇ ನಮ್ಮ ಸುತ್ತಲೂ ಹಿಂಬಾಲಿಸುತ್ತಿದ್ದಾರೆ. ನಾವು ಪ್ರತಿನಿತ್ಯ ಇಂತಹ ಕಿರುಕುಳ ಅನುಭವಿಸುತ್ತೇವೆ, ಆದರೆ ನಾವು ಯಾರಿಗೂ ಹೆದರುವುದಿಲ್ಲ. ಈ ವರ್ಷದ ಜನವರಿಯಲ್ಲಿ ಹೊಸ ಗೃಹಪ್ರವೇಶ ಸಮಾರಂಭ ನಡೆದಿದೆ. ಹಾಗೆ ನಾವು ಅವಳ ಸಮಾಧಿಯ ಬಳಿ ಮರವನ್ನು ಬೆಳೆಸಿದ್ದೇವೆ. ಮುಂಬರುವ ಅವಳ ಹುಟ್ಟು ಹಬ್ಬದ ದಿನ ಅಕ್ಟೋಬರ್ 18 ರಂದು ನಾವು ಈ ವರೆಗೂ ಆರೋಪಿಸಿಕೊಂಡು ಬಂದಿರುವ ಶಂಕಿತರಾದ ಉದಯ್ ಜೈನ್, ಮಲ್ಲಿಕ್ ಜೈನ್, ಆಶ್ರಿತ್ ಜೈನ್ ಮತ್ತು ನಿಶ್ಚಲ್ ಜೈನ್ ವಿರುದ್ಧ ತನಿಖೆ ನಡೆಸುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಒತ್ತಡಕ್ಕೆ ಮಣಿದು ತನಿಖೆ ಬೇರೆಡೆಗೆ ತಿರುಗುತ್ತಿದೆ. ಇದು ಈ ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರ. ಬೇರೆ ಯಾವ ಮಹಿಳೆಯೂ ಈ ರೀತಿ ಆಗದಂತೆ ನಾವು ಹೋರಾಟ ರೂಪಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು