ಭೋಪಾಲ್: ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಬೆಲ್ಟ್‌ನಿಂದ ಥಳಿಸಿದ ಆಘಾತಕಾರಿ ಘಟನೆಯೊಂದು, ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ನಡೆದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಗೋಮಾಂಸ ಮಾರಾಟದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ಬಟ್ಟೆ ಬಿಚ್ಚಿಸಿ, ರಸ್ತೆಯಲ್ಲಿ ನಡೆಸಿಕೊಂಡು ಮೆರವಣಿಗೆ ಮಾಡುತ್ತಿದ್ದು, ಒಬ್ಬ ವ್ಯಕ್ತಿ ಅವರಿಗೆ ಬೆಲ್ಟ್‌ನಿಂದ ಥಳಿಸುತ್ತಿರುವ ದೃಶ್ಯ ಕಂಡುಬಂದಿದೆ.
ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 33 ಕೆಜಿಗೂ ಅಧಿಕ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನರಸಿಂಗ್ ದಾಸ್ (50) ಮತ್ತು ರಾಮನಿವಾಸ್ ಮೆಹರ್ (52) ಅವರು ಗೋಮಾಂಸವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು ಎಂದು ಆರೋಪಿಸಿ ಸುಮಿತ್ ನಾಯಕ್ ಎಂಬವರು ನಿನ್ನೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನಲ್ಲಿರು ಮಾಹಿತಿ ಪ್ರಕಾರ, ಗೋಣಿಚೀಲದಲ್ಲಿ ಏನಿದೆ ಎಂದು ದೂರುದಾರರು ಮತ್ತು ಇತರರು ಕೇಳಿದಾಗ ಅದರಲ್ಲಿ ಗೋಮಾಂಸವಿದೆ ಎಂದು ಉತ್ತರಿಸಿದರು ಎಂದು ತಿಳಿಸಲಾಗಿದೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಅವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಪತ್ತೆಯಾದ ಮಾಂಸವನ್ನು ಪಶುವೈದ್ಯರು ಪರೀಕ್ಷಿಸಿದ್ದಾರೆ. ಆದರೆ ಈ ಪರೀಕ್ಷೆಯ ವರದಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಎನ್‌ಡಿಟಿವಿ ವರದಿ ಪ್ರಕಾರ, ರಸ್ತೆಯಲ್ಲಿ ಇಬ್ಬರುನ್ನು ಥಳಿಸಿದ ವ್ಯಕ್ತಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಮಾಹಿತಿಯೂ ತಿಳಿದು ಬಂದಿಲ್ಲ.