Monday, July 28, 2025

ಸತ್ಯ | ನ್ಯಾಯ |ಧರ್ಮ

ಭಾರತೀಯ ಪೌರತ್ವ ಪಡೆದ ನಟ ಅಕ್ಷಯ್ ಕುಮಾರ್

ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಯ ಸಿನೆಮಾಗಳ ಮೂಲಕವೇ ಗಮನ ಸೆಳೆದಿದ್ದ ಬಾಲಿವುಡ್ ‘ಕಿಲಾಡಿ’ ಅಕ್ಷಯ್ ಕುಮಾರ್ ಪೌರತ್ವದ ವಿಚಾರದಲ್ಲೇ ಹೆಚ್ಚು ಟೀಕೆಗೆ ಗುರಿಯಾಗಿದ್ದರು. ಇವರ ಮೂಲ ಭಾರತೀಯನಾದರೂ ಕೆನಡಾ ದೇಶದ ಪೌರತ್ವದ ಕಾರಣಕ್ಕೆ ಅಕ್ಷಯ್ ಕುಮಾರ್ ವಿರೋಧಿಗಳ ಬಾಯಿಗೆ ಹೆಚ್ಚು ಆಹಾರವಾಗಿದ್ದರು. ಆದರೆ ಅಕ್ಷಯ್ ಕುಮಾರ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ಭಾರತೀಯ ಪೌರತ್ವ ಪಡೆದು ಸುದ್ದಿಯಲ್ಲಿದ್ದಾರೆ.

ದೇಶದ 77 ನೇ ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಅಕ್ಷಯ್‌ ಕುಮಾರ್‌ ಭಾರತೀಯ ಪೌರತ್ವ ದೊರೆತಿರುವ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.

ತೊಂಬತ್ತರ ದಶಕದಲ್ಲಿ ಸತತವಾಗಿ ಫ್ಲಾಪ್ ಸಿನಿಮಾಗಳನ್ನು ನೀಡಿ ಸೋಲಿನ ಸುಳಿಗೆ ಸಿಕ್ಕ ಕಾರಣಕ್ಕೆ ಅಕ್ಷಯ್‌ ಕುಮಾರ್‌ ಅನಿವಾರ್ಯವಾಗಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಹೇಳಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ಈ ನಿರ್ಧಾರ ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ದೊಡ್ಡ ಮತ್ತು ಕಠಿಣ ನಿರ್ಧಾರ ಎಂದೂ ಕೂಡಾ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.

ಇನ್ನು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅಕ್ಷಯ್ ಕುಮಾರ್ ಬಿಜೆಪಿ ಪಾಳಯಕ್ಕೆ ಹೆಚ್ಚು ಆಪ್ತರಾಗಿದ್ದರು. ಕಳೆದ 20 ವರ್ಷಗಳಿಂದ ಭಾರತದಲ್ಲಿ ಯಾವೊಂದು ಪತ್ರಿಕಾಗೋಷ್ಠಿಯೂ ನಡೆಸದ ನರೇಂದ್ರ ಮೋದಿ ಅಕ್ಷಯ್ ಕುಮಾರ್ ಜೊತೆಗೆ ನಡೆಸಿದ ಸಂದರ್ಶನದ ಕಾರ್ಯಕ್ರಮದಲ್ಲಿ ಭಾಗಿಯಾದದ್ದೂ ಹೆಚ್ಚು ಚರ್ಚೆ ಮತ್ತು ಟೀಕೆಗೆ ಗುರಿಯಾಗಿದ್ದರು. ಆಗಲೂ ಸಹ ಪೌರತ್ವದ ವಿಚಾರವಾಗಿಯೇ ಅಕ್ಷಯ್‌ ಕುಮಾರ್‌ ಹೆಚ್ಚು ಟೀಕೆಗೆ ಒಳಗಾದರು.

ಸಧ್ಯ ಈ ವರ್ಷದ ಆರಂಭದಲ್ಲೇ ಭಾರತೀಯ ಪೌರತ್ವ ಪಡೆಯುವ ಬಗ್ಗೆ ಸುಳಿವು ನೀಡಿದ್ದ ಅಕ್ಷಯ್ ಕುಮಾರ್, ಸಂದರ್ಶನವೊಂದರಲ್ಲಿ ಭಾರತವೆಂದರೇ ನನಗೆ ಸರ್ವಸ್ವ.. ಅದಕ್ಕೆ ನಾನು ಇಲ್ಲಿನ ಪೌರತ್ವ ಪಡೆಯಲು ಈಗಾಗಲೇ ಪಾಸ್‌ಪೋರ್ಟ್‌ ಬದಲಾವಣೆಗೆ ಅರ್ಜಿಯನ್ನು ಸಲ್ಲಸಿದ್ದೇನೆ ಎಂದು ಹೇಳಿದ್ದರು. ಸಧ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ಸಿಕ್ಕ ಖುಷಿಯನ್ನು ಹಂಚಿಕೊಂಡು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page