Friday, November 22, 2024

ಸತ್ಯ | ನ್ಯಾಯ |ಧರ್ಮ

ಜಾಮೀನು ನಿಯಮಗಳನ್ನು ನಟ ದರ್ಶನ್‌ ಪಾಲಿಸುತ್ತಿಲ: ರಾಜ್ಯ ಸರ್ಕಾರ ಆರೋಪ

ಬೆಂಗಳೂರು: ನಟ ದರ್ಶನ್ ಅವರು ಜಾಮೀನು ನೀಡುವ ಸಂದರ್ಭದಲ್ಲಿ ತಮಗೆ ನಿರ್ದೇಶಿಸಿದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ನವೆಂಬರ್ 21 ರಂದು ರಾಜ್ಯ ಸರ್ಕಾರ ತಿಳಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವೈದ್ಯಕೀಯ ಜಾಮೀನಿನ ಮೇಲೆ ನಟ ದರ್ಶನ್‌ ಹೊರಗಿದ್ದಾರೆ. ಅವರು ಜಾಮೀನು ನಿಯಮಗಳನ್ನು ಪಾಲಿಸಿಲ್ಲ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟನಿಗೆ ನಿಯಮಿತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಂಡ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿರುವ ಅವರು, ಇತ್ತೀಚಿನ ವೈದ್ಯಕೀಯ ವರದಿಯ ಪ್ರತಿಯನ್ನು ತನಗೆ ಸಲ್ಲಿಸಿಲ್ಲ ಎಂದಿದ್ದಾರೆ.

ವೈದ್ಯಕೀಯ ಆಧಾರದ ಮೇಲೆ ಆರು ವಾರಗಳ ಕಾಲ ಜಾಮೀನು ನೀಡಲಾಗಿದೆ. ಆದಾಗ್ಯೂ, ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಇನ್ನೂ ತಿಳಿಸಿಲ್ಲ ಎಂದು ಅವರು ದೂರಿದ್ದಾರೆ.

ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ನಟನ ಇತ್ತೀಚಿನ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದರ ಪ್ರತಿಯನ್ನು ಎಸ್‌ಪಿಪಿಗೂ ನೀಡಲಾಗಿದೆ. ಈ ಮಧ್ಯೆ, ಪೊಲೀಸರು ಪ್ರಕರಣದ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿದ ನಂತರ ಪ್ರತಿಕ್ರಿಯೆ ಸಲ್ಲಿಸಲು ಎಸ್‌ಪಿಪಿಗೆ ನ್ಯಾಯಾಲಯ ಸೂಚಿಸಿತು. ಪ್ರಕರಣವನ್ನು ನವೆಂಬರ್ 26 ಕ್ಕೆ ಮುಂದೂಡಲಾಗಿದೆ.

ಮೂರು ವಾರಗಳ ಹಿಂದೆ ವೈದ್ಯಕೀಯ ಕಾರಣಗಳಿಗಾಗಿ ದರ್ಶನ್ ಅವರಿಗೆ ಜಾಮೀನು ನೀಡಲಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ಗೆ ವೈದ್ಯಕೀಯ ಜಾಮೀನು ನೀಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಪೊಲೀಸ್‌ ಇಲಾಖೆ ಸಜ್ಜಾಗಿದೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page