ದೇಶದಲ್ಲಿ ‘ಫ್ಯಾಸಿಸ್ಟ್ ಆಡಳಿತ’ ಅಂತ್ಯದ ಹಾದಿಯಲ್ಲಿದೆ | ಯುವಜನತೆ ರಾಜಕೀಯ ಅರಿವು ಬೆಳೆಸಿಕೊಳ್ಳಬೇಕು: ನಟ ಪ್ರಕಾಶ್ ರಾಜ್ ಕರೆ

ತ್ರಿಶೂರ್ (ಕೇರಳ): ದೇಶದಲ್ಲಿ ‘ಫ್ಯಾಸಿಸ್ಟ್ ಆಡಳಿತ’ ಅಂತ್ಯದ ಸಮೀಪಕ್ಕೆ ಬಂದಿದೆ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಹೇಳಿದ್ದಾರೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶದ ಯುವಜನತೆ ನಡೆಸುತ್ತಿರುವ ಪ್ರತಿಭಟನೆಗಳು ಸರ್ಕಾರಕ್ಕೆ ಹಲವು ವರ್ಷಗಳಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಪ್ರಬಲ ಸವಾಲೊಡ್ಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ತ್ರಿಶೂರ್‌ನಲ್ಲಿ ಆಯೋಜಿಸಲಾಗಿದ್ದ ಭಾರತ ಪ್ರಜಾಸತ್ತಾತ್ಮಕ ಯುವ ಫೆಡರೇಷನ್ (DYFI) ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯಕ್ಕೆ ರಾಜಕೀಯ ಜಾಗೃತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಕಾಡಿನ ಪ್ರಾಣಿಗಳ ಸಂವಹನ ಶೈಲಿಯನ್ನು ಉದಾಹರಿಸಿದ ಅವರು, “ಯುವಕರು ಬೇಟೆಗಾರನನ್ನು (predator) ನಿಖರವಾಗಿ ಗುರುತಿಸಿದ್ದಾರೆ. ‘ಈಗ ನಮಗೆ ನಿಮ್ಮ ಬಗ್ಗೆ, ನಿಮ್ಮ ಪೇಪರ್ ಸೋರಿಕೆ ಬಗ್ಗೆ ಚೆನ್ನಾಗಿ ತಿಳಿದಿದೆ’ ಎಂದು ಯುವಜನತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಹೇಳಿದ್ದಾರೆ. ಮೊದಲ ಬಾರಿಗೆ ಅವರ ಅಹಂಕಾರಕ್ಕೆ (Ego) ಪೆಟ್ಟು ಬಿದ್ದಿದೆ. ನಾವು ನಿಮಗೆ ಹೆದರುವುದಿಲ್ಲ ಎಂದು ದೇಶದ ಪ್ರಜೆಗಳು ಮತ್ತು ಯುವಜನತೆ ದಿಟ್ಟವಾಗಿ ಹೇಳಿದ್ದಾರೆ,” ಎಂದರು.

ಹಿಂದೆ ರೈತರು, ಕಾರ್ಮಿಕರು ಹಾಗೂ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದರೂ, ಅವರು ಕೆಲಸ ಹಾಗೂ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಆದರೆ ಇಂದಿನ ಯುವಜನತೆಗೆ ಕಳೆದುಕೊಳ್ಳಲು ಏನೂ ಇಲ್ಲ. ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ಸಂಸತ್ತನ್ನೇ ನಡುಗಿಸಿದರು. ಹೀಗಾಗಿ ಒಂದು ದಶಕದ ನಂತರ ಫ್ಯಾಸಿಸ್ಟ್ ಆಡಳಿತ ಮುಗಿಯುವ ಹಂತಕ್ಕೆ ಬಂದಿದೆ ಎಂಬ ವಿಶ್ವಾಸ ತಮಗೆ ಮೂಡಿದೆ ಎಂದು ಪ್ರಕಾಶ್ ರಾಜ್ ಹೇಳಿದರು.

ಕೇವಲ ಬಿಜೆಪಿಯನ್ನು ಸೋಲಿಸುವುದಷ್ಟೇ ದೇಶದ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಎಚ್ಚರಿಸಿದ ಅವರು, “ರಾಜಕೀಯದಲ್ಲಿ ವಿರೋಧ ಪಕ್ಷಗಳು ಎಂದಿಗೂ ಗೆಲ್ಲುವುದಿಲ್ಲ, ಆಡಳಿತ ಪಕ್ಷಗಳು ಸೋಲುತ್ತವೆ ಅಷ್ಟೇ. ಆದ್ದರಿಂದ ಪರ್ಯಾಯ ಸರ್ಕಾರವನ್ನು ಆಯ್ಕೆ ಮಾಡುವಾಗ ಯುವಕರು ರಾಜಕೀಯ ಪ್ರಜ್ಞೆ ಹೊಂದಿರಬೇಕು. ಇಲ್ಲದಿದ್ದರೆ ಮತ್ತೊಂದು ರೂಪದಲ್ಲಿ ಫ್ಯಾಸಿಸ್ಟ್ ಶಕ್ತಿ ಮತ್ತೆ ಅಧಿಕಾರಕ್ಕೆ ಬರಬಹುದು,” ಎಂದರು.

ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪವನ್ನೇ ಬದಲಾಯಿಸಿದ್ದು, ಜನರು ತಾವು ಇರುವ ಸ್ಥಳದಿಂದಲೇ ಧ್ವನಿ ಎತ್ತುತ್ತಿದ್ದಾರೆ. ತಾವು ಯಾವುದೇ ಚುನಾವಣಾ ಗೆಲುವಿಗಾಗಿ ಹೋರಾಡುತ್ತಿಲ್ಲ, ನ್ಯಾಯ ಮತ್ತು ಸಮಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಧ್ವನಿ ಎತ್ತುವುದೇ ತಮ್ಮ ಜೀವನದ ಮಾರ್ಗ ಎಂದು ಅವರು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು