ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆತನ ಕುಟುಂಬದ ಪರವಾಗಿ ದನಿಯೆತ್ತಿದ ನಟಿ ರಮ್ಯಾ ವಿರುದ್ಧ ನಟ ದರ್ಶನ್ ಅಭಿಮಾನಿಗಳು ಅಶ್ಲೀಲ ಮತ್ತು ಅಸಭ್ಯ ಮೆಸೇಜ್ ಕಳಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಈಗ ಸಂಕಷ್ಟ ಎದುರಾಗಿದೆ. ಈ ಬೆಳವಣಿಗೆಯಲ್ಲಿ ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಾದ ಬೆನ್ನಲ್ಲೇ ಈಗ ಸ್ವತಃ ನಟಿ ರಮ್ಯಾ ತನಗೆ ಅಸಭ್ಯ ಸಂದೇಶ ಮತ್ತು ಕಾಮೆಂಟ್ ಮಾಡಿದವರ ವಿರುದ್ಧ ಸಮರ ಸಾರಿದ್ದಾರೆ.
ಹೌದು. ಇಂದು ನಟಿ ರಮ್ಯಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಖುದ್ದು ದರ್ಶನ್ ಅಭಿಮಾನಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ರಮ್ಯಾ ದೂರು ದಾಖಲಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು ಎಂದು ಗೃಹಮಂತ್ರಿಗಳು ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ ಸಂಬಂಧ ತನ್ನ ಅಭಿಪ್ರಾಯವನ್ನು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ದರ್ಶನ್ ಫ್ಯಾನ್ಸ್ ರಮ್ಯಾರನ್ನು ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಮೆಸೇಜುಗಳು ಬರುತ್ತವೆ ಎಂದು ನಟಿ ರಮ್ಯಾ ಆರೋಪಿಸಿದ್ದರು.
ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ತೀವ್ರವಾಗಿ ಕಿಡಿ ಕಾರಿದ್ದಾರೆ. ಇದೀಗ ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾದಂತ ನಟಿ ರಮ್ಯಾ ದೂರು ನೀಡಿದ್ದಾರೆ.