Thursday, June 13, 2024

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್ ರೇವಣ್ಣ ಪ್ರಕರಣ ; ಹೆಚ್ಡಿಕೆ ಕೇಂದ್ರ ಮಂತ್ರಿಯಾಗುತ್ತಿದ್ದಂತೆ ಹೆಚ್ಚುವರಿ ಎಸ್​ಪಿಪಿ ರಾಜೀನಾಮೆ!

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಎಸ್​ಪಿಪಿ ಹುದ್ದೆಯಲ್ಲಿದ್ದ ಜಾಯ್ನಾ ಕೊಥಾರಿ ರಾಜೀನಾಮೆ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ಪಟ್ಟಕ್ಕೇರುತ್ತಿದ್ದಂತೆಯೇ ನಡೆದ ರಾಜೀನಾಮೆ ಪ್ರಕ್ರಿಯೆ ಅಚ್ಚರಿ ಮೂಡಿಸಿದೆ.

ಪ್ರಜ್ವಲ್ ರೇವಣ್ಣ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡದ ಪರವಾಗಿ ಕೋರ್ಟ್​ನಲ್ಲಿ ವಾದಿಸಲು ರಾಜ್ಯ ಸರ್ಕಾರ ಜಾಯ್ನಾ ಕೊಥಾರಿ ಅವರನ್ನು ಹೆಚ್ಚುವರಿ ಎಸ್​ಪಿಪಿಯಾಗಿ ನೇಮಕ ಮಾಡಿತ್ತು. ಜಾಯ್ನಾ ಕೊಥಾರಿ ಅವರು ಮಂಗಳವಾರ (ಜೂನ್ 11) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (SIT) ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಆಗಿ ಬಿಎನ್ ಜಗದೀಶ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಬಳಿಕ ವಿಚಾರಣಾ ನ್ಯಾಯಾಲಯ ಮತ್ತು ಸೆಷನ್‌ಗಳ ಮುಂದೆ ಪ್ರಾಸಿಕ್ಯೂಷನ್‌ನ್ನು ಸಮರ್ಥಿಸಲು ರಾಜ್ಯ ಸರ್ಕಾರವು, ಹಿರಿಯ ವಕೀಲರಾದ ಅಶೋಕ್ ಎನ್ ನಾಯಕ್ ಮತ್ತು ಜಾಯ್ನಾ ಕೊಥಾರಿ ಅವರನ್ನು ಹೆಚ್ಚುವರಿ ಎಸ್‌ಪಿಪಿಗಳಾಗಿ ಸರ್ಕಾರ ನೇಮಿಸಿತ್ತು.

ಪ್ರಜ್ವಲ್ ರೇವಣ್ಣ ಅವರು ಇಷ್ಟು ದಿನ ಎಸ್​ಐಟಿ ವಶದಲ್ಲಿ ಇದ್ದ ಕಾರಣ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ನ್ಯಾಯಾಲಯವು ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಧ್ಯ ಪ್ರಜ್ವಲ್ ರೇವಣ್ಣ ವಿಚಾರಣಾಧೀನ ಖೈದಿ (ಖೈದಿ ನಂ 5664) ಯನ್ನಾಗಿ ಕೋರ್ಟ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಈಗ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಈ ಹಂತದಲ್ಲಿ ಪ್ರಜ್ವಲ್ ರೇವಣ್ಣನನ್ನ ಎಸ್‌ಐಟಿ ವಶದಲ್ಲೇ ಇರಿಸಬೇಕು ಎಂದು ಕೋರ್ಟ್​ನಲ್ಲಿ ಜಾಯ್ನಾ ಕೊಥಾರಿ ಅವರು ಬಲವಾದ ವಾದ ಮಂಡನೆ ಮಾಡಿದ್ದರು. ಆದರೆ ಜಾಯ್ನಾ ಕೊಥಾರಿ ಹೆಚ್ಚುವರಿ ಎಸ್​ಪಿಪಿ ಗೆ ರಾಜೀನಾಮೆ ನೀಡಿದ್ದು ಅಚ್ಚರಿ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು