Thursday, April 3, 2025

ಸತ್ಯ | ನ್ಯಾಯ |ಧರ್ಮ

ಆಧ್ಯಾತ್ಮಿಕ ಮಾನವೀಯ ಮೌಲ್ಯ ಗುಣಗಳನ್ನು ಅಳವಡಿಸಿಕೊಳ್ಳಿ: ಕೆ ಬಿ ಸಿದ್ಧಲಿಂಗಪ್ಪ ಕರೆ

ಆದ್ಯ ವಚನಕಾರ, ನೇಕಾರ ಸಂತರಾದ ದೇವರ ದಾಸಿಮಯ್ಯ ಅವರ ಆಧ್ಯಾತ್ಮಿಕ ಮಾನವೀಯ ಗುಣ ಮತ್ತು ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಹೊಂಗಿರಣ ಸಾಂಸ್ಕೃತಿಕ ಸಮುಚ್ಚಯದ ವೇದಿಕೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ಚರಿತ್ರೆಯಲ್ಲಿ ಹಲವಾರು ಸಾಹಿತ್ಯ ಶರಣರು ಆಧ್ಯಾತ್ಮಿಕತೆಯ ಚಿಂತನೆಯನ್ನು ವ್ಯಾಪಕಗೊಳಿಸಿದ್ದು, ಕಲ್ಯಾಣದಲ್ಲಿ ಬಸವಣ್ಣ ನವರ ಕಾಲಘಟ್ಟದಲ್ಲಿ ಸಮಾಜದ ಏಳಿಗೆ, ಸ್ತ್ರೀ ಸಮಾನತೆ, ಕಾಯಕ ದಾಸೋಹ, ಮಾನವೀಯ ಗುಣಗಳನ್ನು ಮತ್ತು ಮೌಲ್ಯಗಳನ್ನು ರೂಪಿಸಿದ ಕೀರ್ತಿ ಕಾಲವಾಗಿತ್ತು ಎಂದು ತಿಳಿಸಿದರು.

ಅಂದಿನ ಕಾಲದ ಸಮಾಜದಲ್ಲಿ ಜಾತಿ-ವರ್ಗ ಸಂಘರ್ಷಗಳಿಂದ ದೂರವಿರುವಂತೆ ಮಾನವಕುಲಕ್ಕೆ ಅರಿವು ಮೂಡಿಸುತ್ತಿದ್ದರು. ದೇವರ ದಾಸಿಮಯ್ಯ ಅವರು ಆದ್ಯ ವಚನಕಾರರಾಗಿದ್ದು, ಸಮಾಜದಲ್ಲಿ ಮನೆ ಮಾಡಿದ್ದ ಮೂಢ ನಂಬಿಕೆಗಳನ್ನು ನೇರ ನಿಷ್ಠುರ ನುಡಿಗಳಿಂದ ಟೀಕಿಸಿದ್ದರು ಎಂದರು.

ದೇವರ ದಾಸಿಮಯ್ಯ ಅವರು ಬದುಕನ್ನು ಕಟ್ಟಿಕೊಳ್ಳಲು ಕೆಲಸ ಯಾವುದಾದರೇನು ಎಂದು ನೇಯುವ ಕಾಯಕ ಮಾಡುತ್ತಿದ್ದರು. ದಾಸಿಮಯ್ಯರು ಶ್ರೇಷ್ಠ ವಚನಕಾರರಾಗಿದ್ದರು. ಇವರ ಅಂಕಿತ ನಾಮ ‘ರಾಮನಾಥ’ ಎಂಬುದಾಗಿತ್ತು ಎಂದು ಅವರು ತಿಳಿಸಿದರು.

ದೇವರ ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆಯ ಸುರುಪುರ ತಾಲ್ಲೂಕಿನಲ್ಲಿ ಜನಿಸಿದವರಾಗಿದ್ದು. ತಂದೆ ಮುದನೂರು ರಾಮಯ್ಯ, ತಾಯಿ ಶಂಕರಿ ಮತ್ತು ಸಂಗಾತಿ ದುಗ್ಗಳೆ ಹಾಗೂ ಮಗ ರಾಮಲಿಂಗ. ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ ಎಂದು ಸಿದ್ದಲಿಂಗಪ್ಪ ಅವರು ವಿವರಿಸಿದರು.

ವೃತ್ತಿಯಲ್ಲಿ ನೇಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದವರು. ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕರಾಗಿದ್ದರು ಎಂದು ಹೇಳಿದರು.

ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಿ.ದೇವಾನಂದ ಅವರು ಮಾತನಾಡಿ, ಸಮಾಜದ ಬಡವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಸಮುದಾಯದ ಯುವಕರು-ಯುವತಿಯರು, ಸದೃಡವಾಗಿ ಬೆಳೆದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರು ಆದ್ಯ ವಚನಕಾರ ದೇವರ ದಾಸಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page