Friday, October 24, 2025

ಸತ್ಯ | ನ್ಯಾಯ |ಧರ್ಮ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆಯ ಸೃಷ್ಟಿಕರ್ತ, ಜಾಹೀರಾತು ದಿಗ್ಗಜ ಪಿಯೂಷ್ ಪಾಂಡೆ ನಿಧನ

ದೆಹಲಿ: ಸಾಂಪ್ರದಾಯಿಕ ಜಾಹೀರಾತುಗಳ ಮತ್ತು “ಅಬ್ ಕಿ ಬಾರ್, ಮೋದಿ ಸರ್ಕಾರ್” (ಈ ಬಾರಿ, ಮೋದಿ ಸರ್ಕಾರ) ಎಂಬ ಘೋಷಣೆಯ ಹಿಂದಿನ ನಿರ್ಮಾತೃ ಪಿಯೂಷ್ ಪಾಂಡೆ ಶುಕ್ರವಾರ ನಿಧನರಾಗಿದ್ದಾರೆ. 70 ವರ್ಷ ವಯಸ್ಸಿನ ಪಾಂಡೆ ಅವರು ಸೋಂಕಿನಿಂದ ಬಳಲುತ್ತಿದ್ದರು. ಇವರು ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್‌ನಂತಹ ಪ್ರಖ್ಯಾತ ಬ್ರ್ಯಾಂಡ್‌ಗಳಿಗೆ ಅವರು ಜಾಹೀರಾತುಗಳನ್ನು ರೂಪಿಸಿದ್ದರು.

ಕಳೆದ ಕೆಲವು ದಿನಗಳಿಂದ ಅವರು ಸೋಂಕಿನಿಂದ ಬಳಲುತ್ತಿದ್ದರು. ಶನಿವಾರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅವರು ಸುಮಾರು ನಾಲ್ಕು ದಶಕಗಳ ಕಾಲ ಜಾಹೀರಾತು ಉದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಓಗ್ಲಿವಿ (Ogilvy) ಜಾಹೀರಾತು ಕಂಪನಿಯಲ್ಲಿ ಮುಖ್ಯ ಸೃಜನಾತ್ಮಕ ಅಧಿಕಾರಿ (Chief Creative Officer) ಮತ್ತು ಕಾರ್ಯಕಾರಿ ಅಧ್ಯಕ್ಷರಾಗಿ (Executive Chairman) ಕಾರ್ಯನಿರ್ವಹಿಸಿದ್ದರು.

ವೃತ್ತಿಜೀವನ ಮತ್ತು ಪ್ರಮುಖ ಜಾಹೀರಾತುಗಳು:

ಪಾಂಡೆ ಅವರು 1982ರಲ್ಲಿ ಓಗ್ಲಿವಿ ಕಂಪನಿಯನ್ನು ಸೇರಿದರು. ಸನ್‌ಲೈಟ್ ಡಿಟರ್ಜೆಂಟ್‌ಗಾಗಿ ಅವರು ಮೊದಲು ಜಾಹೀರಾತು ಬರೆದರು. ಆರು ವರ್ಷಗಳ ನಂತರ ಕಂಪನಿಯ ಸೃಜನಾತ್ಮಕ ವಿಭಾಗವನ್ನು ಸೇರಿಕೊಂಡರು. ನಂತರ ಅವರು ಅನೇಕ ಜನಪ್ರಿಯ ಜಾಹೀರಾತುಗಳನ್ನು ಸಿದ್ಧಪಡಿಸಿದರು. ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್ , ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿಗೆ ಜಾಹೀರಾತುಗಳನ್ನು ತಯಾರಿಸಿದರು.

ಅವರ ನೇತೃತ್ವದಲ್ಲಿ ಓಗ್ಲಿವಿ ಇಂಡಿಯಾ ಜಾಹೀರಾತು ಏಜೆನ್ಸಿಯು ಸತತ 12 ವರ್ಷಗಳ ಕಾಲ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆಯಿತು.

ಪ್ರಶಸ್ತಿಗಳು ಮತ್ತು ಕೊಡುಗೆಗಳು:

ಪಾಂಡೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು. 2016ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ಸಿನಿಮಾಗಳಲ್ಲಿಯೂ ನಟಿಸಿದ್ದರು; 2013ರಲ್ಲಿ ಬಿಡುಗಡೆಯಾದ ‘ಮದ್ರಾಸ್ ಕೆಫೆ’ ಚಿತ್ರದಲ್ಲಿ ನಟಿಸಿದ್ದರು.

ರಾಷ್ಟ್ರೀಯ ಸಮಗ್ರತೆಗಾಗಿ ರಚಿಸಲಾದ ಪ್ರಸಿದ್ಧ ಗೀತೆ ‘ಮಿಲೆ ಸುರ್ ಮೇರಾ ತುಮ್ಹಾರಾ’ ಹಾಡಿಗೆ ಸಾಹಿತ್ಯವನ್ನು ಅವರೇ ಒದಗಿಸಿದ್ದರು. ‘ಭೋಪಾಲ್ ಎಕ್ಸ್‌ಪ್ರೆಸ್’ ಎಂಬ ಚಿತ್ರಕ್ಕೆ ಅವರು ಸ್ಕ್ರೀನ್‌ಪ್ಲೇ ಸಹಕಾರ ನೀಡಿದ್ದರು.

ಗಣ್ಯರಿಂದ ಸಂತಾಪ:

ಪಿಯೂಷ್ ಪಾಂಡೆ ಅವರ ನಿಧನಕ್ಕೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಜಾಹೀರಾತು ಕ್ಷೇತ್ರದಲ್ಲಿ ಅವರು ದಂತಕಥೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಪಿಯೂಷ್ ಪಾಂಡೆ ಅವರ ಸೃಜನಶೀಲತೆ ಅದ್ಭುತವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ನಿಧನಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page