Home ಅಂಕಣ ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು

0

AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ AI.

AI ವ್ಯಾಪ್ತಿ ಎಷ್ಟಿದೆಯೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಅಂಕಣ ಸರಣಿಯ ಮೊದಲ ಅಧ್ಯಾಯ ನಿಮಗಾಗಿ. ಅಚ್ಚರಿಯ ವಿಚಾರಗಳ ಗುಚ್ಚದ ಬಗ್ಗೆ ತಪ್ಪದೇ ಓದಿ.


ಮನುಷ್ಯ ಜೀವನದಲ್ಲಿ ಘನತೆಯಡೆಗೆ ಬಹುದೊಡ್ಡ ನೆಗತವನ್ನು ಸಾಧಿಸಲು ಸಹಾಯ ಮಾಡಿದ್ದು 18ನೇ ಶತಮಾನದ ಕೈಗಾರಿಕಾ ಕ್ರಾಂತಿ. ಅಲ್ಲಿಯವರೆಗೂ -ಸಾಕಷ್ಟು ಸಾಮಾಜಿಕ ಕ್ರಾಂತಿಗಳು ನಡೆದಿದ್ದರೂ- ಭೀಕರ ಮೌಢ್ಯ ಹಾಗೂ ಧಾರ್ಮಿಕ ಕಟ್ಟುಪಾಡುಗಳಲ್ಲಿ ಮುಳುಗಿಹೋಗಿದ್ದ ಜಗತ್ತಿನ ದೊಡ್ಡ ಸಂಖ್ಯೆಯ ಜನಸಾಮಾನ್ಯರ ಪಾಲಿಗೆ ವಿಜ್ಞಾನ ಸಾಧಿಸಿದ ಈ ಪ್ರಗತಿ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು.

ಸುದೀರ್ಘ ಶೋಷಣೆಯ ಪರಂಪರೆಯನ್ನು ಧಿಕ್ಕರಿಸಿ, ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದೊಂದು ಬೆಳವಣಿಗೆ ಅನುಕೂಲವನ್ನು ಮಾಡಿಕೊಟ್ಟಿತು. ಹಾಗಂತ ಕೈಗಾರಿಕಾ ಕ್ರಾಂತಿ ಹಣಕಾಸಿನ ವಿಚಾರದಲ್ಲಿ ಮನುಷ್ಯನ ನಡುವಿನ ಕಂದಕವನ್ನು ಕಡಿಮೆ ಮಾಡಲಿಲ್ಲ. ಕೈಗಾರಿಕಾ ಕ್ರಾಂತಿಯ ಫಲ ಇನ್ನೇನು ಜನರಿಗೆ ತಲುಪುವ ಹಂತದಲ್ಲಿಯೇ ನಡೆಸಿದ ಎರಡು ಮಹಾಯುದ್ಧಗಳು, ಒಂದು ಶತಮಾನ ಮನುಷ್ಯರು ತಮ್ಮೆಲ್ಲಾ ಹಿನ್ನೆಲೆಗಳನ್ನು ಪಕ್ಕಕ್ಕಿಟ್ಟು ಫ್ಯಾಕ್ಟರಿಗಳ ನೆರಳಿನಲ್ಲಿ ದುಡಿದ ಶ್ರಮವನ್ನು ಮದ್ದುಗುಂಡುಗಳ ರೂಪದಲ್ಲಿ ಸವರಿ ಬಿಸಾಡಿದವು.

ಹೀಗಿದ್ದೂ, ವಿಜ್ಞಾನದ ಪ್ರಗತಿ ನಿಲ್ಲಲಿಲ್ಲ. ಎಲ್ಲವನ್ನೂ ಪ್ರಶ್ನಿಸುತ್ತಲೇ ಕಟ್ಟಿಕೊಂಡು ಬಂದ ವ್ಯವಸ್ಥೆ ಮತ್ತೊಂದು ಶತಮಾನ ಕಳೆಯುವ ಹೊತ್ತಿಗೆ ಸಾಕಷ್ಟು ಸುಧಾರಿಸಿಕೊಂಡಿತು. ಮುಂಜಾನೆ ಬೇವಿನಕಡ್ಡಿಯ ಬದಲಿಗೆ ಪೇಸ್ಟ್, ಬ್ರಷ್‌ನಿಂದ ಆರಂಭಿಸಿ ರಾತ್ರಿ ಮಲಗುವವರೆಗೆ ನಿರಂತರವಾಗಿ ಬದಲಾಗುವ ಮನುಷ್ಯನ ಅಗತ್ಯಗಳನ್ನು ಅದು ಅರ್ಥಮಾಡಿಕೊಂಡಿತು. ಉದ್ಯಮಗಳ ರೂಪದಲ್ಲಿ, ಸಹಕಾರಿ ಮಾದರಿಗಳಲ್ಲಿ ವಿಜ್ಞಾನ ಮನೆ- ಮತ್ತು ಮನೆಗಳಿಗಷ್ಟೆ ತಲುಪಿತು. 

ಸುಮಾರು 70 ವರ್ಷಗಳ ಹಿಂದೆಯೇ, ಜಾಗತಿಕ ಬೆಳವಣಿಗೆಗಳನ್ನುಅಲಿಪ್ತವಾಗಿ ನೋಡಿಕೊಂಡು ಬಂದ ದೇಶ ಭಾರತದಲ್ಲಿಯೂ ಸಂವಿಧಾನವನ್ನು ಜಾರಿಗೆ ತರುವ ಹೊತ್ತಿನಲ್ಲಿ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳುವುದನ್ನು ದೇಶಪ್ರೇಮದ ಅಡಿಯಲ್ಲಿಯೇ ವ್ಯಾಖ್ಯಾನಿಸಲಾಯಿತು. ವೈಜ್ಞಾನಿಕ ಬದುಕು ರೂಢಿಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯ ಎಂದು ಹೇಳಲಾಯಿತು. ಆದರೆ, ಎಷ್ಟರಮಟ್ಟಿಗೆ ಹರಪ್ಪ- ಮಹೆಂಜೋದಾರಾದಿಂದ ಶುರುವಾದ ಈ ನಾಗರೀಕತೆ ಇವತ್ತು ವಿಜ್ಞಾನಕ್ಕೆ ನೀಡಬೇಕಾದ ಮರ್‍ಯಾದೆ ನೀಡುತ್ತಿದೆ? ತನ್ನ ಒಡಲಿನ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ಸಲಹೆಗಳನ್ನು ಸ್ವೀಕರಿಸುತ್ತಿದೆ? 

ಒಟ್ಟಾರೆ, ಕಳೆದೆರಡು ಶತಮಾನಗಳ ಅಂತರದಲ್ಲಿ ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಬಹುದೊಡ್ಡ ಸಾಮಾಜಿಕ ಬದಲಾವಣೆಗಳಿಗೆ ವಿಜ್ಞಾನ ಕಾರಣವಾಗಿದ್ದರೂ, ಅದರ ಬಗೆಗೆ ಜನಸಾಮಾನ್ಯರ ನಂಬಿಕೆ ಗಟ್ಟಿಕೊಳ್ಳಲಿಲ್ಲ. ವಿಜ್ಞಾನ ಮನಸ್ಸುಗಳನ್ನು ಆವರಿಸಿಕೊಳ್ಳಲಿಲ್ಲ.  ಇದಕ್ಕೆ ಇರಬಹುದಾದ ಕಾರಣಗಳೇನು? ಸ್ಥಾಪಿತ ಹಿತಾಸಕ್ತಿಗಳನ್ನು ಒಳಗೊಂಡ ವ್ಯವಸ್ಥೆ ಹೇಗೆಲ್ಲಾ ವಿಜ್ಞಾನವನ್ನು ಜನರಿಂದ ದೂರ ಇಡಲು ಹಾತೊರೆಯುತ್ತದೆ? ಮತ್ತು ಲಾಭಕೋರ ಯುದ್ಧಗಳನ್ನು ನಡೆಸುತ್ತಿದೆ ಎಂಬುದನ್ನು ಇವತ್ತಿಗೆ ತೀರ ಬಿಡಿಸಿ ಹೇಳಬೇಕಾಗಿಲ್ಲ. 

ಎಂತಹ ಜಡಗಟ್ಟಿದ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ವಿಜ್ಞಾನ ತರಬಲ್ಲದು ಎಂಬುದಕ್ಕೆ ಇತ್ತೀಚಿನ ಉಚ್ಚ ನ್ಯಾಯಾಲಯಗಳ ಕಲಾಪದ ನೇರ ಪ್ರಸಾರ ಮತ್ತು ಅದರಿಂದ ಸೃಷ್ಟಿಯಾದ ತಲೆಬರಹಗಳೇ ಸಾಕ್ಷಿ ನೀಡುತ್ತವೆ.     

ಇರಲಿ, ಏನೇ ಅಡೆ-ತಡೆಗಳು ಬಂದರೂ ವಿಜ್ಞಾನ ಪ್ರಗತಿಯಲ್ಲಿದೆ. ತನ್ನೊಳಗಿನ ಮಿತಿಗಳ ನಡುವೆಯೇ ಮತ್ತೊಮ್ಮೆ ಜನರ ನಿತ್ಯಬದುಕನ್ನು ಬದಲಾಯಿಸಲು ಹೊರಟಿದೆ. ಪುನರುತ್ಥಾನ, ಕೈಗಾರಿಕಾ ಕ್ರಾಂತಿ ಮಾದರಿಯ ಮತ್ತೊಂದು ಮಹತ್ವದ ನೆಗೆತದ ಮುನ್ಸೂಚನೆ ನೀಡಿದೆ. ಕೃತಕ ಬುದ್ದಿವಂತಿಕೆ, ಬುದ್ದಿ-ಮತ್ತೆ, ಎಐ, ಆರ್‍ಟಿಫಿಶಿಯಲ್ ಇಂಟೆಲಿಜೆನ್ಸಿ ಹೀಗೆ ಯಾವುದೇ ಹೆಸರುಗಳಿಂದ ಕರೆದರೂ ಡಿಜಿಟಲ್ ಲೋಕದ ಈ ಆವಿಷ್ಕಾರ, ವಿಜ್ಞಾನ ಈ ಶತಮಾನದಲ್ಲಿ ಸಾಧಿಸಿದ ಬಹುದೊಡ್ಡ ಮೈಲುಗಲ್ಲಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. 

ಪ್ರತಿಷ್ಠಿತ ಮಾಸಿಕ ಟೈಮ್ ತನ್ನ ಸೆಪ್ಟೆಂಬರ್ 2024ರ ಸಂಚಿಕೆಯಲ್ಲಿ ಎಐ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ 100 ಜನರ ಪಟ್ಟಿ ಮಾಡಿದೆ. ಸಿಂಗ್ಯುಲಾರಿಟಿ, ಮೈಂಡ್ ಅಪ್ಲೋಡ್, ಸೆಂಟಿಎಂಟ್, ಸೈಬಾರ್ಗ್, ಜನರಲ್ ಇಂಟೆಲಿಜೆನ್ಸಿ ಹೀಗೆ ಸಾಲು ಸಾಲು ಸೈ-ಫೈ ಸಿನೆಮಾಗಳ ಮೂಲಕ ಈಗಾಗಲೇ ಪರಿಚಯಿಸಿರುವ ಪದಗಳು ಹೆಚ್ಚು ಚಲಾವಣೆಗೆ ಬರಲಿವೆ. 

ಮೊದಲೇ ಹೇಳಿದಂತೆ ಹಲವು ಆಯಾಮಗಳಲ್ಲಿ ಅನುಷ್ಠಾನಕ್ಕೆ ಬರಲಿರುವ ಎಐ ಸುತ್ತ ಆತಂಕಗಳೂ ಇವೆ. ಕೆಲವರಾದರೂ ಅಗತ್ಯ ನೈತಿಕ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಎಬ್ಬಿಸುತ್ತಿರುವ ತಲ್ಲಣಗಳ ಕುರಿತು ಪ್ರತಿದಿನ ಒಂದಿಲ್ಲೊಂದು ವರದಿ ಹೊರಬೀಳುತ್ತಲೇ ಇದೆ. 

ಉಳಿದ ಕ್ಷೇತ್ರಗಳ ಜತೆಗೆ, ಪತ್ರಿಕೋದ್ಯಮವನ್ನು ಎಐ ಹೇಗೆ ಬದಲಿಸಬಹುದು ಎಂಬುದು ನನಗಿರುವ ಕುತೂಹಲ. ಈಗಾಗಲೇ ಮಾನವ ಪತ್ರಕರ್ತರೇ ಇಲ್ಲದ ಎಐ ಎಂಜಿನ್‌ಗಳಷ್ಟೆ ಸುದ್ದಿ ನೀಡುವ ಇಂಗ್ಲಿಷ್ 24/7 ಸುದ್ದಿವಾಹಿನಿ ಕೆಲಸ ಆರಂಭಿಸಿದೆ. ನಮ್ಮಲ್ಲಿ ಮನುಷ್ಯರು ಪತ್ರಕರ್ತರಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ನಾವಷ್ಟೆ ಪಕ್ಷಪಾತವಿಲ್ಲದ ಸುದ್ದಿಸಂಸ್ಥೆ, ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಲು ಸಾಧ್ಯ ಎಂದು ಈ ನ್ಯೂಸ್‌ ಚಾನಲ್‌ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದೆ.

ಇಂಗ್ಲಿಷ್ ಭಾಷೆಯಲ್ಲಿ ಎಐ ಸಾಕಷ್ಟು ಹಿಡಿತ ಸಾಧಿಸಿದ ಕುರುಹುಗಳು ಸಿಗುತ್ತಿವೆ. ಹೀಗಾಗಿ, ಇಂಗ್ಲಿಷ್ ಪತ್ರಿಕೋದ್ಯಮ ಆರಂಭಿಕ ಪರಿಣಾಮಗಳನ್ನು ಎದುರಿಸಲೇಬೇಕಿದೆ. ಇವತ್ತಿಗೆ ಇಂಗ್ಲಿಷ್‌ ಸುದ್ದಿ ಜಗತ್ತಿಗೆ ಬಂದಿರುವ ಎಐ ಕನ್ನಡಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈಗೀಗ ಬದಲಾವಣೆಗಳಿಗೆ ಹೆಚ್ಚು ಸಮಯ ಹಿಡಿಯುತ್ತಿಲ್ಲ. ಸಂಪರ್ಕ ಹಾಗೂ ಸಮನ್ವಯ ಸಾಧಿಸಲು ಹಿಂದಿನ ಹಾಗೆ ಹೆಚ್ಚು ಶ್ರಮವೂ ಬೇಕಾಗಿಲ್ಲ. 

ಈ ಎಐಗೂ ಮನುಷ್ಯನ ಮೆದುಳಿಗೂ ನೇರ ಸಂಪರ್ಕವಿದೆ. ಅಥವಾ ಸಂಪರ್ಕ ಸಾಧಿಸಬಹುದು. ಭಾಷಾಶಾಸ್ತ್ರದ ಪದವಿ ಓದುತ್ತಿದ್ದಾಗ ನನ್ನೊಳಗೆ ತೆಳುವಾಗಿ ಆರಂಭಗೊಂಡಿದ್ದು ಮನೋವಿಜ್ಞಾನದ ಬಗೆಗಿನ ಆಸಕ್ತಿ. ಅದನ್ನು ನಂತರ ಪೋಷಿಸಿದವರು ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಡಾ. ಆಚಾರ್ಯ ಶ್ರೀಧರ್. ಅವರ ಜತೆಗಿನ ಹಲವು ವರ್ಷಗಳ ಒಡನಾಟ ಮನಸ್ಸಿನ ಹಲವು ಮಜಲುಗಳನ್ನು ಮುಟ್ಟಲು ಸಹಕಾರಿಯಾಯಿತು. ಅಗತ್ಯಕ್ಕಿಂತ ತುಸು ಹೆಚ್ಚೆ ತಲೆಯ ಕೆಲಸವನ್ನು ಬೇಡುವ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಪ್ರಯೋಗಗಳನ್ನು ನಡೆಸಲು ಅವರ ವಿಶ್ಲೇಷಣೆಗಳು ನೆರವಾದವು. 

ಹಿಂದೊಮ್ಮೆ ನಾವುಗಳು ರೂಢಿಸಿಕೊಂಡು ಬರುವ ಕೌಶಲ್ಯಗಳ ಕುರಿತು ಡಾಕ್ಟರ್ ಜತೆಗೆ ಮಾತನಾಡುತ್ತಿದ್ದೆ. “ಬರೆಯುವುದನ್ನು ನಿಲ್ಲಿಸಬೇಡಿ,’’ ಎಂದರು. ಅಮೆರಿಕಾದ ವೈಜ್ಞಾನಿಕ ವಲಯದಲ್ಲಿ ಹೇಗೆ ‘ಪಬ್ಲಿಷ್ ಆರ್ ಪೆರಿಷ್’ ದೊಡ್ಡ ಬದಲಾವಣೆಯನ್ನು ಹುಟ್ಟುಹಾಕಿತು ಎಂದವರು ವಿವರಿಸಿದರು. ಆದರೂ ಬರೆಯುವ ಆಸಕ್ತಿ ನನ್ನಲ್ಲಿ ಹುಟ್ಟಲಿಲ್ಲ. ಬದಲಿಗೆ, ಆಗಷ್ಟೆ ನಿಧಾನವಾಗಿ ಹೊರಜಗತ್ತಿಗೆ ಕಾಣಿಸಿಕೊಂಡ ಎಲ್‌ಎಲ್‌ಎಂ ಎಂದು ಕರೆಯುವ ಡಿಜಿಟಲ್ ಭಾಷಾಕೋಶಗಳ ಹಿಂದೆ ಬಿದ್ದಿದ್ದೆ. ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದೆ. 

ಆ ಅನುಭವಗಳನ್ನು ಮತ್ತೆ ಎಂದಾದರೂ ಬರೆಯುತ್ತೇನೆ. ಕೆಲವು ಸಾಧ್ಯತೆಗಳು ಹೀಗಿವೆ. ಒಂದೆರಡು ನಿಮಿಷಗಳಲ್ಲಿ ಪುಸ್ತಕ ಬರೆದು ಬಿಡಬಹುದು. ಮನಸ್ಸು ಮಾಡಿದರೆ ವಾರಕ್ಕೆ 7 ಪುಸ್ತಕಗಳನ್ನು ಪ್ರಕಟಣೆಗೆ ಸಿದ್ಧಮಾಡಬಹುದು. ನೋಬೆಲ್ ಆಯ್ಕೆ ಸಮಿತಿಯ ಅಭಿರುಚಿಗೆ ತಕ್ಕಂತ ವಿಜ್ಞಾನದ ಸಂಶೋಧನಾ ವರದಿಗಳನ್ನು ಎಐ ಮೂಲಕ ಬರೆಯಿಸಬಹುದು. ಯಾವುದೇ ದಾಖಲೆಯನ್ನು ಓದಿ ಟಿಪ್ಪಣಿ ತಯಾರಿಸುವ ಕೆಲಸ ಕ್ಷಣಾರ್ಧದಲ್ಲಿ ಮುಗಿಸಬಹುದು.  ಒಂದೇ ಪದದಿಂದ ಮಕ್ಕಳಿಗಾಗಿ ಕತೆಯನ್ನು ಸೃಷ್ಟಿಸಬಹುದು, ಅದೂ ಆಡಿಯೋ ರೂಪದಲ್ಲಿ. ಬೇಕಾದರೆ ಅದಕ್ಕೆ ನಮ್ಮದೇ ಧ್ವನಿಯನ್ನೂ ಸೇರಿಸಬಹುದು.

ಹೀಗೆ 25ಕ್ಕೂ ಹೆಚ್ಚು ಸಾಧ್ಯತೆಗಳನ್ನು ಈಗಾಗಲೇ ಎಲ್‌ಎಲ್‌ಎಂ ತೋರಿಸಿದೆ. ಒಮ್ಮೆ ನನ್ನದೇ ನಂಬರ್‍‌ಗೆ ಎಲ್‌ಎಲ್‌ಎಂ ಒಂದು ಕರೆ ಮಾಡಿ, ‘ಹಾಯ್‌ ದೇರ್, ಹೌಯು ಡೂಯಿಂಗ್?’ ಎಂದು ಮಾತು ಶುರುಮಾಡಿದಾಗ ತಬ್ಬಿಬ್ಬಾಗಿದ್ದೂ ಇದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಎಐ ಅವರುಗಳ ಸಹಾಯಕಳಾಗಿ/ನಾಗಿ ಪಕ್ಕದಲ್ಲಿ ಇರುವುದು ನನಗೆ ಖಾತ್ರಿಯಾಗಿದೆ. ಎಐ ಸೃಷ್ಟಿಸುವ ಚಂದಮಾಮನ ಕತೆಗಳಿಗೆ ಹೊಸ ತಲೆಮಾರು ಅಣಿಯಾಗಲೇಬೇಕಿದೆ.  

ಭಾರತ ಸರಕಾರ NSAI, 2018 ಹೆಸರಿನಲ್ಲಿ ಎಐಗಾಗಿ ಸ್ಟ್ರಾಟಜಿಯನ್ನು ನೀತಿಆಯೋಗದ ಮೂಲದ ಮುಂದಿಟ್ಟಿದೆ. “ಕೈಗಾರಿಕಾ ಕ್ರಾಂತಿ ಉದ್ಯಮಗಳನ್ನು ಸೃಷ್ಟಿಸಲು ಸಹಾಯ ಮಾಡಿತು. ಇವತ್ತು ಎಐ ಅದೇ ಉದ್ಯಮಗಳನ್ನು ಆಮೂಲಾಗ್ರವಾಗಿ ಬದಲಿಸಲು ಹೊರಟಿದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗೆ ಈ ತಂತ್ರಜ್ಞಾನ ಒತ್ತಡ ಹೇರಲಿದೆ. ಬರೀ ಉದ್ಯಮಗಳನ್ನು ಮಾತ್ರವಲ್ಲ, ಹಣಕಾಸು ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು ಹಿಂದೆಂದೂ ಕಾಣದಷ್ಟು ವೇಗವಾಗಿ ಬದಲಿಸಲು ಎಐ ಕಾರಣವಾಗಲಿದೆ” ಎಂಬುದನ್ನು ನೀತಿ ಆಯೋಗದ ವರದಿ ಹೇಳುತ್ತದೆ. 

ಲಾಕ್‌ಡೌನ್ ಮುಗಿಸಿಕೊಂಡು ಹೊರಬಿದ್ದ ಜಗತ್ತಿನಲ್ಲಿ ಎಐ ಬೇರುಗಳನ್ನು ಬಿಟ್ಟು ಗಿಡವಾಗಿ ಬೆಳೆದಾಗಿದೆ. ನೆಟ್ಟಿಗರ ಕೈಲಿರುವ ಮೊಬೈಲ್‌ನಿಂದ ಹಿಡಿದು, ದೊಡ್ಡ ದೊಡ್ಡ ಆರ್ಥಿಕ ಸಾಮ್ರಾಜ್ಯಗಳನ್ನು ಎಐ ಈಗಾಗಲೇ ಮುನ್ನಡೆಸುತ್ತಿದೆ. ಮೈಸೂರು- ಬೆಂಗಳೂರು ಹೈವೇಯಲ್ಲಿ ಇರಬೇಕಾಗಿದ್ದ ಪೊಲೀಸ್‌ ಸಿಬ್ಬಂದಿಗಳನ್ನು ಎಐ ಕ್ಯಾಮೆರಾಗಳು ರಿಪ್ಲೇಸ್ ಮಾಡಿವೆ. ‘ಮುಂದಿನ ದಿನಗಳಲ್ಲಿ ಹಲವು ಉದ್ಯಮಗಳನ್ನು ಕೂಡ ಇದೇ ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಬದಲಿಸಲಿದೆ. ಮುಂದಿನ ದಿನಗಳಲ್ಲಿ ಜನರೇಟಿವ್ ಎಐ (ಜನರ ನಿತ್ಯ ಬದುಕಿನ ಅವಶ್ಯಕತೆಗಳನ್ನು ಪೂರೈಸುವ ಅಥವಾ ವಯಕ್ತಿಕ ಕೌಶಲ್ಯದ ಬದಲಿಗೆ ಬಳಸಬಹುದಾದ ಎಐನ ಉತ್ಪನ್ನಗಳು) ಮೂಲಕ ಜಗತ್ತನ್ನು ಎಐ ಬದಲಿಸಲಿದೆ’ ಎಂದು ISTAS, 2024 ಹೇಳುತ್ತದೆ. ಇದೇ  ಸಮಯದಲ್ಲಿ 2022-23ರ ನಡುವೆ 1278% ಎಐ ಸಂಬಂಧಿತ ಪ್ರಕರಣಗಳು ಹೆಚ್ಚಿರುವ ವರದಿಗಳ ಕುರಿತು ಚರ್ಚೆಯೂ ನಡೆದಿದೆ.

 

ಇಂತಹ ಆತಂಕ, ನೈತಿಕ ಪ್ರಶ್ನೆಗಳ ನಡುವೆಯೇ ಸಕಾರಾತ್ಮಕವಾಗಿರುವ ಸಾಧ್ಯತೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಎಐ ತೋರಿಸುತ್ತಿದೆ. ಅಂಗಗಳನ್ನು ಕಳೆದುಕೊಂಡವರಿಗೆ ಎಐ ನೀಡುತ್ತಿರುವ ಪರಿಹಾರ ಅತ್ಯಂತ ಪರಿಣಾಮಕಾರಿಯಾಗಿ ಕಾಣಿಸುತ್ತಿದೆ. ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯದ ಸಮತೋಲನಗಳನ್ನು ಕಾಪಾಡಿಕೊಳ್ಳಲು ಎಐ ದೊಡ್ಡಮಟ್ಟದ ನೆರವು ನೀಡಲಿದೆ. ಇನ್ನು, ಮಹಾನಗರಗಳಲ್ಲಿ ಜನ- ಜೀವನ ನಿರ್ವಹಣೆಯಲ್ಲಿ ಎಐ ತೋರಿಸಿರುವ ಮಾದರಿ ಉತ್ಸಾಹದಾಯಕವಾಗಿದೆ. ಕೃಷಿಯಲ್ಲೂ ಎಐ ಅಳವಡಿಕೆ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾದ ವರದಿಗಳಿವೆ. 

ಎಐ ಕುರಿತು ಶಿಕ್ಷಣ, ಅರಿವು ಬೆಳೆಸಿಕೊಳ್ಳುವುದು ನಮ್ಮ ತುರ್ತು ಕೆಲಸಗಳಲ್ಲೊಂದು. ಜಾಗತಿಕ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. Raspberry Pi Foundation ಕಡೆಯಿಂದ ಹೊರತರುತ್ತಿರುವ ನಿಯತಕಾಲಿಕೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಉತ್ತಮ ಪ್ರಯತ್ನಗಳಲ್ಲೊಂದು. ಇಂತಹ ಕೆಲಸಗಳ ಜತೆಗೆ, ವಿಜ್ಞಾನದ ಈ ಮಾಂತ್ರಿಕ ಆವಿಷ್ಕಾರ ಪ್ರಗತಿಗೆ ಪೂರಕವಾಗಿ, ಜನರ ಏಕತೆಗಾಗಿ ಕೆಲಸ ಮಾಡಬೇಕಾದರೆ ಸರಕಾರಗಳು, ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಜತೆಗೆ ಮತ್ತು ಜನರ ಪಾತ್ರವೂ ದೊಡ್ಡದಿದೆ. 

You cannot copy content of this page

Exit mobile version