Sunday, October 27, 2024

ಸತ್ಯ | ನ್ಯಾಯ |ಧರ್ಮ

ಸಾವಿನ ವ್ಯಾಖ್ಯಾನವನ್ನೇ ಬದಲಿಸಲು ಹೊರಟಿದೆ ಎಐ ತಂತ್ರಜ್ಞಾನ!

“ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ..” AI ಕ್ರಾಂತಿಯ ಮುಂದುವರೆದ ಭಾಗವಾಗಿ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಕುತೂಹಲಕಾರಿ ಬರಹ. ತಪ್ಪದೇ ಓದಿ.

ಆಗಷ್ಟೆ ಕೊರೊನಾ ಮೊದಲ ಅಲೆ ಮುಗಿದಿತ್ತು. ನಮ್ಮ ತಲೆಮಾರು ನೋಡಿದ ಮೊದಲ ಸಾಂಕ್ರಾಮಿಕ ರೋಗ ಇನ್ನೂ ಶಾಂತವಾಗಿರಲಿಲ್ಲ. ಆಗಷ್ಟೆ 6 ತಿಂಗಳ ಬಾಣಂತನ ಮುಗಿಸಿ ಮಗನ ಜತೆ ಬಾಳ ಸಂಗಾತಿ ಬೆಂಗಳೂರಿಗೆ ಬಂದಿಳಿದಿದ್ದಳು. ಹೀಗಿರುವಾಗಲೇ ತೀರ್ಥಹಳ್ಳಿಯಿಂದ ಒಬ್ಬ ಕರೆ ಮಾಡಿದ್ದ. ಅವತ್ತು ನವೆಂಬರ್ 5, 2020. “ಪಿಟ್ಟಿ, ನಿನ್ನ ಅಪ್ಪ ಹೋಗಿಬಿಟ್ರು,” ಅಂದ. ಬೆಂಗಳೂರಿನ ಮಾಳಗಾಳದ ಟೀ ಅಂಗಡಿ ಮುಂದೆ ನಿಂತಿದ್ದ ನನಗೆ ಆ ಕ್ಷಣಕ್ಕೆ ಏನು ಹೇಳಬೇಕೋ ತೋಚಲಿಲ್ಲ. ಅಪ್ಪನ ಪ್ರೀತಿಯ ಮಗ ನಾನು. ನನ್ನ ಎಲ್ಲಾ ಪ್ರಯೋಗಗಳಿಗೆ ತನ್ನ ನಿಷ್ಕಲ್ಮಶ ನಗುವಿನ ಮೂಲಕವೇ ಸಮ್ಮತಿ ಕೊಟ್ಟುಕೊಂಡು ಬಂದವರು. ಸುಮಾರು ಒಂದೂವರೆ ದಶಕ ಪಾರ್ಕಿನ್ಸನ್ ಕಾಯಿಲೆಯ ಜತೆ ಗುದ್ದಾಡಿದ ಅವರ ಹೃದಯ ಕೊನೆಗೂ ಬಡಿತ ನಿಲ್ಲಿಸಿತ್ತು.

ಸಾವು ನನಗೆ ಹೊಸತೇನೂ ಆಗಿರಲಿಲ್ಲ. ನಾನಾ ರೀತಿಯ ಸಾವುಗಳಿಗೆ (ಎನ್‌ಕೌಂಟರ್, ರಸ್ತೆ ಅಪಘಾತ, ಲೈವ್‌ ಮರ್ಡರ್, ಆತ್ಮೀಯರ ಅಗಲಿಕೆ…) ಸಾಕ್ಷಿಯಾಗಿದ್ದೆ. ಸಾವಿನ ಕುರಿತು ಮೊದಲೇ ಒಂದು ರೀತಿಯ ಭಾವಶೂನ್ಯತೆ ಆವರಿಸಿಕೊಂಡಿತ್ತು. ಹೀಗಿರುವಾಗ, ನನ್ನ ಪ್ರೀತಿಯ ತಂದೆಯ ಸಾವು ಕೇವಲ ಕರ್ತವ್ಯಗಳನ್ನಷ್ಟೆ ನೆನಪಿಸಿತು. ಪ್ರತೀತಿಯಿಂದ ಬಂದ ಕೆಲಸಕ್ಕೆ ಬಾರದ ಶ್ರಾದ್ಧಾ, ಕಟ್ಲೆ ಕಾರ್ಯಗಳನ್ನು ಮುಗಿಸಿ ಬೆಂಗಳೂರಿಗೆ ವಾಪಾಸಾದೆ.

ಮೊದಲಿನಿಂದಲೂ ಬದುಕಿನ ತಿರುವುಗಳಲ್ಲಿ ಅಪ್ಪ ನೆನಪಾಗುತ್ತಿದ್ದರು. ಅವರ ಅನಿಸಿಕೆ ಏನಿರಬಹುದು ಎಂಬ ಕುತೂಹಲ ಇದ್ದೇ ಇತ್ತು. ಇದೀಗ ಅವರಿಲ್ಲ. ಇನ್ನಾವ ವಿಚಾರಕ್ಕೂ ಅವರ ಅಭಿಪ್ರಾಯ, ಅನಿಸಿಕೆಗಳು ಲಭ್ಯವಿಲ್ಲ. ಆಗಾಗ, “ಅಪ್ಪ ಇದ್ದಿದ್ದರೆ…” ಅನ್ನೋ ಆಲೋಚನೆಯೊಂದು ಸುಳಿಯಲಾರಂಭಿಸಿತು. ಈ ಸಮಯದಲ್ಲಿ ಹಿರಿಯರು ಬುದ್ಧನ ಸಾವಿಲ್ಲದ ಮನೆಯ ಸಾಸಿವೆ ಕತೆ ಹೇಳಿ ಸಮಾಧಾನಪಡಿಸಿದರು. ಇನ್ನೊಬ್ಬರು ಖುಷ್ವಂತ್ ಸಿಂಗ್‌ ಅವರ ಸಾವಿನ ಕುರಿತಾದ ಪುಸ್ತಕ ಓದಲು ಹೇಳಿದರು. ಹೀಗೆ ಸಾವಿಗೆ ಸಾಂತ್ವಾನ ಹೇಳಿಕೊಳ್ಳುವ ಅನಿವಾರ್ಯತೆಯನ್ನು, ಶೋಕಗಳನ್ನು ನೀಗಿಕೊಳ್ಳುವ ಕಲೆಯನ್ನು ಸುತ್ತಮುತ್ತಲಿನವರು ಕಲಿಸಿದರು.

ಹಾಗೆ ನೋಡಿದರೆ, ಈ ನಾಗರೀಕತೆ ಹುಟ್ಟು ಮತ್ತು ಸಾವಿಗೆ ತನ್ನದೇ ಅರ್ಥಗಳನ್ನು ಕಂಡುಕೊಂಡಿದೆ. ಏನೇ ಬಂದರೂ ಅರಗಿಸಿಕೊಂಡು ಮುಂದೆ ಹೋಗುವ ಕಲೆಯನ್ನು ರೂಢಿಸಿಕೊಂಡಿದೆ. ನಮ್ಮನ್ನು ಅಗಲುವವರು ಪೈಕಿ ಶೇ. 98ರಷ್ಟು ಸಾವುಗಳಿಗೆ ಅಂತಿಮವಾಗಿ ಹೃದಯ ಕೆಲಸ ನಿಲ್ಲಿಸುವುದೇ ಕಾರಣ. ಇನ್ನುಳಿದ ಶೇ. 2ರಷ್ಟು ಸಾವುಗಳು ಮೆದುಳು ಸ್ಥಗಿತದಿಂದ ಸಂಭವಿಸುತ್ತವೆ ಎನ್ನುತ್ತವೆ ಸಂಶೋಧನೆಗಳು. ಸಾವುಗಳನ್ನು ಮೀರಿದ ಬದುಕು ಇಲ್ಲವಾಗಿರುವ ಕಾರಣಕ್ಕೆ, ಸತ್ತವರನ್ನು ನೆನಪಿಸಿಕೊಳ್ಳಲು ಪಿತೃಪಕ್ಷ, ಶ್ರಾದ್ಧಾಗಳ ಹೆಸರಿನಲ್ಲಿ ಆಚರಣೆಗಳನ್ನು ಹುಟ್ಟುಹಾಕಿಕೊಂಡಿದ್ದೇವೆ. ಆ ಮೂಲಕ ವರ್ಷಕ್ಕೊಮ್ಮೆಯಾದರೂ ಅಗಲಿದವರನ್ನು ನೆನಪಿಸಿಕೊಳ್ಳುವ ಪ್ರಕ್ರಿಯೆ ಇದು ಅಂತ ಅನ್ನಿಸುತ್ತದೆ. ಯಾಕೆ ಇಷ್ಟು ಸಾವಿನ ಕುರಿತು ಮಾತನಾಡುತ್ತಿದ್ದೇನೆ ಎಂದರೆ, ಇದೀಗ ಈ ಎಐ ಎಂದು ಕರೆಯುವ ಕೃತಕ ಬುದ್ದಿವಂತಿಕೆಯು ಸಾವಿನ ವ್ಯಾಖ್ಯಾನಗಳನ್ನೇ ಬದಲಿಸಲು ಹೊರಟಿದೆ. ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ.

ಏನಿದು ಡಿಜಿಟಲ್ ಇಮ್ಮಾರ್ಟಲಿಟಿ?:
ಎಐ ತಂತ್ರಜ್ಞಾನ, ನ್ಯೂರೋ ಸೈನ್ಸ್ ಮತ್ತಿತರ ವಿಜ್ಞಾನದ ಆವಿಷ್ಕಾರಗಳ ಬೆಳವಣಿಗೆಯಿಂದಾಗಿ ಈಗಾಗಲೇ ನಮ್ಮದೇ ರೀತಿಯ ಅವತಾರಗಳನ್ನು ಸೃಷ್ಟಿಸುವ ಅವಕಾಶವಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜೀವಂತ ವ್ಯಕ್ತಿಗಳ ಮೆದುಳನ್ನೇ ನಕಲು ಮಾಡುವ ತಂತ್ರಜ್ಞಾನವನ್ನು ಹೊರಜಗತ್ತಿಗೆ ನೀಡಲು ಹೊರಟಿದೆ. ಇದರ ಬಿಡುಗಡೆಯ ದಿನಾಂಕವನ್ನೂ ಇನ್ನೂ ಟೆಕ್‌ ಸಂಸ್ಥೆ ಘೋಷಣೆ ಮಾಡದಿದ್ದರೂ, ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಡೀಪ್‌ಬ್ರೈನ್‌ ಎಐ ಎಂಬ ಸಂಸ್ಥೆ ಈಗಿರುವ ವ್ಯಕ್ತಿಗಳ ಧ್ವನಿ ಹಾಗೂ ಮುಖವನ್ನು ನಕಲು ಮಾಡಲು ಅವಕಾಶ ಒದಗಿಸಿದೆ. ಹೋಲ್‌ ಬ್ರೈನ್‌ ಎಮ್ಯುಲೇಶನ್ ಎಂಬ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವ ಸ್ವರೂಪಗಳ ಕುರಿತು ಟೆಕ್‌ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಒಂದು ವೇಳೆ ಮನುಷ್ಯನ ನಕಲು ಮಾಡಿದ ಡಿಜಿಟಲ್ ಮೆದುಳು ಅಸಲಿ ಮನುಷ್ಯನಂತೆ ಭಾವನೆಗಳನ್ನು ವ್ಯಕ್ತಪಡಿಸುವ, ಆಲೋಚಿಸುವ, ಸ್ವಂತಿಕೆಯನ್ನು ಬೆಳೆಸಿಕೊಂಡರೆ ಅದರ ಪರಿಣಾಮಗಳು ಏನಿರಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡಲಾಗಿದೆ. 2024ರ ‘ಲೈವ್‌ ಸೈನ್ಸ್‌’ ಸಂಚಿಕೆಯೊಂದರ ಲೇಖನವೊಂದು ಹೋಲ್‌ ಬ್ರೈನ್‌ ಎಮ್ಯುಲೇಶನ್‌ನ ನೈತಿಕತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಇದರಿಂದ ಎದುರಾಗುವ ಕಾನೂನಾತ್ಮಕ ಸಮಸ್ಯೆಗಳು ಹಾಗೂ ಸಾಮಾಜಿಕ ಸಂರಚನೆಯ ಬದಲಾವಣೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. 2022ರಲ್ಲಿ ‘ಸೈಕಾಲಜಿ ಟುಡೆ’ ಪ್ರಕಟಿಸಿದ ಅಂಕಣದಲ್ಲಿ ಮನುಷ್ಯನ ನಕಲಿ ಮೆದುಳು ಆಕೆಯ/ ಆತನ ದೇಹಾಂತ್ಯದ ನಂತರವೂ ಬದುಕುಳಿಯುವ ಮೆದುಳು ಹುಟ್ಟುಹಾಕುವ ಮನೋವೈಜ್ಞಾನಿಕ ತಲ್ಲಣಗಳನ್ನು ಪಟ್ಟಿ ಮಾಡಿದೆ. ಜತೆಗೆ, ಸಾವಿನ ಕುರಿತು ಈವರೆಗೆ ಅರಗಿಸಿಕೊಂಡ ತತ್ವಗಳಲ್ಲಿ ಏಳುವ ಕಂಪನಗಳ ಕುರಿತು ಗಮನ ಸೆಳೆಯುತ್ತದೆ.  


ಕೆಲವು ಪ್ರಶ್ನೆಗಳು:
ಒಟ್ಟಾರೆ, ಮನುಷ್ಯ ಸತ್ತ ನಂತರವೂ ಆಕೆಯ/ಆತನ ಮೆದುಳನ್ನು ಉಳಿಸಿಕೊಳ್ಳುವುದು ಇವತ್ತಿಗೆ ಊಹೆಗೆ ಮೀರಿದ ಪರಿಕಲ್ಪನೆಯಾಗಿ ಉಳಿದಿಲ್ಲ. ಹಾಗಂತ ಈ ತಂತ್ರಜ್ಞಾನ ಎಲ್ಲಾ ಮನುಷ್ಯರಿಗೂ ಸಮಾನವಾಗಿ ಸಿಗುತ್ತಾ ಎಂಬ ಪ್ರಶ್ನೆ ಇದ್ದೇ ಇದೆ. ಆರ್ಥಿಕ ಅಸಮಾನತೆಯಲ್ಲಿ ಬೇಯುತ್ತಿರುವ ಈ ಸಮಾಜದಲ್ಲಿ ಇಂತಹದೊಂದು ತಂತ್ರಜ್ಞಾನ ಬಲಾಢ್ಯರ ಮೆದುಳುಗಳನ್ನು ಮಾತ್ರವೇ ಉಳಿಸುವಂತಾದರೂ ಕಷ್ಟವೇ. ಇದಕ್ಕಾಗಿ ನಮ್ಮ ಸರಕಾರಗಳು ಈ ವಿಚಾರದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ವ್ಯವಹರಿಸಬೇಕಿದೆ.

ನಮ್ಮದೇ ರಾಜ್ಯದ ಆಡಳಿತವನ್ನು ಗಮನಿಸಿ ನೋಡಿ. ಇಲ್ಲಿ ಗ್ರಾಮೀಣಾಭಿವೃದ್ಧಿಗೂ, ಐಟಿ- ಬಿಟಿಗೂ ಒಬ್ಬನೇ ಸಚಿವ. ಗ್ರಾಮೀಣಾಭಿವೃದ್ಧಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಿ ಎಂದು ರೈತರು ನೀಡಿದ ಮನವಿಯನ್ನೇ ಈತ ಕಸದ ಬುಟ್ಟಿಗೆ ಎಸೆದಿದ್ದಾನೆ. ಇಂತವರಿಂದ ಎಐ ತಂತ್ರಜ್ಞಾನ ಸೃಷ್ಟಿಸಬಹುದಾದ ಕಂದಕವನ್ನು ಮುಚ್ಚುವ ಕೆಲಸ ಆಗುತ್ತಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.

ಎರಡನೇ ಪ್ರಮುಖ ಪ್ರಶ್ನೆ ಇರುವುದು, ಸಾವಿನ ನಂತರವೂ ಬದುಕುಳಿಯುವ ತಂತ್ರಜ್ಞಾನ ಎತ್ತಬಹುದಾದ ತಾತ್ವಿಕ ವಿಚಾರಗಳ ಕುರಿತಾಗಿದ್ದು. ಪಿತೃಪಕ್ಷ, ಶ್ರಾದ್ಧಾಗಳ ಮೂಲಕ ‘ಹೋದವರೆಲ್ಲಾ ಒಳ್ಳೆಯವರು’ ಎಂಬ ತೆಳುವಾದ ನೈತಿಕ ಚೌಕಟ್ಟಿನಲ್ಲಿ ಸಮಾಜ ಈಗ ಮುಂದೆ ಸಾಗುತ್ತಿದೆ. ಒಂದು ವೇಳೆ, ಸತ್ತ ನಂತರವೂ ಮೆದುಳೊಂದು ಜೀವಂತ ಇದ್ದರೆ, ಆಗ ಅದನ್ನು ‘ಒಳ್ಳೆಯವರು’ ಎಂದು ಗುರುತಿಸುವ ಮನೋಧರ್ಮ ಉಳಿಯುತ್ತಾ? ಉತ್ತರಗಳಿಗಾಗಿ ಕಾದುನೋಡಬೇಕಿದೆ.

ಒಂದು ಸಲಹೆ :
ಈ ತಂತ್ರಜ್ಞಾನ ಭವಿಷ್ಯವನ್ನು ಬದಲಿಸುವ ಪರಿಗೆ ನಾವೆಲ್ಲಾ ಸಾಕ್ಷಿಯಾಗಬೇಕಿದೆ. ಅದಕ್ಕಾಗಿ ಅರಿಮೆಯನ್ನು ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿರುವ ಕೆಲಸವಾಗಬೇಕಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ವಾತಾವರಣದಲ್ಲಿ ವಿಶಿಷ್ಟವಾಗಿರುವ ಮೆದುಳು ಮ್ಯೂಸಿಯಂ ಒಂದನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಳೆದ 40 ವರ್ಷಗಳ ಅಂತರದಲ್ಲಿ ನಾನಾ ಕಾರಣಗಳಿಗಾಗಿ ಸತ್ತವರ ಸುಮಾರು 400ಕ್ಕೂ ಹೆಚ್ಚು ಮೆದುಳುಗಳನ್ನು ಸಂಸ್ಕರಿಸಲಾಗಿದೆ. ಇದೀಗ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಪ್ರವೇಶಾವಕಾಶವನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗೆ (https://thenimhansbrainbank.in/museum/) ಕ್ಲಿಕ್ ಮಾಡಿ, ಈಗಲೇ ನೋಂದಾಯಿಸಿಕೊಳ್ಳಿ ಮತ್ತು ವಿಶಿಷ್ಟ ಅನುಭವಕ್ಕೆ ಈಡಾಗಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page