ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಪದಚ್ಯುತಗೊಳಿಸಬೇಕು ಎಂದು ಎಐಎಡಿಎಂಕೆ ಆಗ್ರಹಿಸಿದೆ. ಇಲ್ಲವಾದಲ್ಲಿ ತಮ್ಮ ಎರಡು ಪಕ್ಷಗಳ ಮೈತ್ರಿ ಕುರಿತು ಮರು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ಎಐಎಡಿಎಂಕೆ-ಬಿಜೆಪಿ ಮೈತ್ರಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಿಜೆಪಿ ನಾಯಕರ ಗಮನಕ್ಕೆ ತರಲು ಎಐಎಡಿಎಂಕೆಯ ಹಿರಿಯ ನಾಯಕರಾದ ಎಸ್‌ಪಿ ವೇಲುಮಣಿ, ತಂಗಮಣಿ, ಕೆಪಿ ಮುನುಸ್ವಾಮಿ, ನಟ್ಟಂ ವಿಶ್ವನಾಥನ್, ಸಿವಿ ಷಣ್ಮುಗಂ ಮತ್ತಿತರರು ಶುಕ್ರವಾರ ದೆಹಲಿಗೆ ತಲುಪಿದ್ದರು.
ಈ ನಾಯಕರು ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಅಣ್ಣಾಮಲೈ ಅವರು ತಮ್ಮ ಪಕ್ಷದ ದಿವಂಗತ ನಾಯಕ ಅಣ್ಣಾದೊರೈ ಬಗ್ಗೆ ಮಾಡಿರುವ ಟೀಕೆಗಳು ಹಾಗೂ ಈ ಹಿಂದೆ ಜಯಲಲಿತಾ ವಿರುದ್ಧ ಮಾಡಿದ್ದ ವಿವಾದಾತ್ಮಕ ಟೀಕೆಗಳನ್ನು ವಿವರಿಸಿದರು.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳಿಂದ ಮೈತ್ರಿಗೆ ಧಕ್ಕೆಯಾಗಲಿದೆ ಎಂದು ವಿವರಿಸಲಾಗಿದೆ. ಅವರ ಹೇಳಿಕೆಯಿಂದ ತಮ್ಮ ಪಕ್ಷದ ಕಾರ್ಯಕರ್ತರು ತೀವ್ರ ಮನನೊಂದಿದ್ದಾರೆ ಮತ್ತು ಅವರನ್ನುಸಮಧಾನಗೊಳಿಸುವುದು ತಮ್ಮಿಂದ ಸಾಧ್ಯವಿಲ್ಲವೆಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಅವರ ಮಾತುಗಳನ್ನು ಆಲಿಸಿದ ಜೆಪಿ ನಡ್ಡಾ, ಅಣ್ಣಾಮಲೈ ಅವರನ್ನು ಪದಚ್ಯುತಗೊಳಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಿತ್ರಪಕ್ಷಕ್ಕೆ ತಮ್ಮ ಪಕ್ಷದ ಅಧ್ಯಕ್ಷರನ್ನು ಪದಚ್ಯುತಿ ಮಾಡುವಂತೆ ಕೇಳಿದ್ದು ಬಿಜೆಪಿ ನಾಯಕರಿಗೆ ಕಸಿವಿಸಿ ತಂದಿದೆ. ಈ ಕುರಿತು ಸಮಜಾಯಿಷಿ ನೀಡಲು ಮುಖಂಡರು ಯತ್ನಿಸಿದರೂ ಗಮನ ಹರಿಸದೆ ಎಲ್ಲರಿಗೂ ಚುನಾವಣೆಯತ್ತ ಗಮನ ಹರಿಸಿ ಎಂದು ಹೇಳಿ ಅಲ್ಲಿಂದ ತೆರಳಿದರು ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.
ಇದರಿಂದ ತೀವ್ರ ನಿರಾಸೆಗೊಂಡ ಎಐಎಡಿಎಂಕೆ ನಾಯಕರು ಸಪ್ಪೆ ಮುಖದೊಂದಿಗೆ ಚೆನ್ನೈಗೆ ಮರಳಿದ್ದಾರೆ. ಎಐಎಡಿಎಂಕೆ ನಾಯಕರ ಬೇಡಿಕೆಗೆ ಬಿಜೆಪಿಯ ಉನ್ನತ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ. ಅಣ್ಣಾಮಲೈ ಅವರನ್ನು ಪದಚ್ಯುತಗೊಳಿಸಲು ಶಾ ಮುಂದಾಗಿದ್ದು, ಈ ಬಗ್ಗೆ ಎಐಎಡಿಎಂಕೆ ನಾಯಕರು ಮಾತನಾಡಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.
ಮೊದಲಿನಿಂದಲೂ ಬಿಜೆಪಿ ನಾಯಕತ್ವದಿಂದ ಬೆಂಬಲ ಪಡೆಯುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಗುಂಪು ಇದೀಗ ಹೊಸ ‘ಬೇಡಿಕೆ’ ಇಡುತ್ತಿರುವುದು ಬಿಜೆಪಿಗೆ ಅಚ್ಚರಿ ತಂದಿದೆ.
ವಾಸ್ತವವೆಂದರೆ ಎಐಎಡಿಎಂಕೆ ನಾಯಕರು ಅಣ್ಣಾಮಲೈ ವಿರುದ್ಧ ಪ್ರತಿಭಟಿಸಲು ದೆಹಲಿಗೆ ಹೋಗಿಲ್ಲ.
ಲೋಕಸಭೆ ಚುನಾವಣೆಯಲ್ಲಿ ತಮಗೆ 20 ಸ್ಥಾನಗಳು ಬೇಕು ಎಂದು ಅಮಿತ್ ಶಾ ಇತ್ತೀಚೆಗೆ ಬೇಡಿಕೆ ಇಟ್ಟಿದ್ದರು. ಅಣ್ಣಾಮಲೈ ಮೇಲೆ ಅರೋಪಗಳನ್ನು ಮಾಡಿದರೆ ಬಿಜೆಪಿ ಕಡಿಮೆ ಸೀಟುಗಳನ್ನು ಕೇಳಬಹುದು ಎನ್ನುವುದು ಎಐಡಿಎಮ್‌ಕೆ ತಂತ್ರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.