Tuesday, July 22, 2025

ಸತ್ಯ | ನ್ಯಾಯ |ಧರ್ಮ

ಬಾಂಗ್ಲಾದೇಶದ ಶಾಲೆಯ ಮೇಲೆ ವಾಯುಪಡೆಯ ಜೆಟ್ ಪತನ, ಕನಿಷ್ಠ 19 ಸಾವು

ಬಾಂಗ್ಲಾದೇಶದ ವಾಯುಪಡೆ ತರಬೇತಿ ಜೆಟ್ ರಾಜಧಾನಿ ಢಾಕಾದಲ್ಲಿನ ಉತ್ತರ ಉಪನಗರದಲ್ಲಿರುವ ಮೈಲ್‌ಸ್ಟೋನ್ ಶಾಲಾ ಆವರಣದ ಮೇಲೆ ಪತನಗೊಂಡ ಪರಿಣಾಮ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 164 ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.

ವಿಮಾನವು ಎರಡು ಅಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ನಂತರ ಭಾರಿ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ. ಈ ಬಗ್ಗೆ ವಿಡಿಯೋಗಳು ಹರಿದಾಡಿವೆ.

ಸ್ಥಳೀಯ ಸಮಯ 13:00 ಗಂಟೆ ಸಮಯಕ್ಕೆ ಸರಿಯಾಗಿ (07:06 GMT) ತರಬೇತಿಗಾಗಿ ಹೊರಟ ನಂತರ F-7 ಜೆಟ್ ಅಲ್ಲಿ ಯಾಂತ್ರಿಕ ದೋಷ ಕಂಡುಬಂದಿದೆ ಎಂದು ಸಶಸ್ತ್ರ ಪಡೆ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿದೆ. ಸಾವನ್ನಪ್ಪಿದವರಲ್ಲಿ ಪೈಲಟ್ ಕೂಡ ಸೇರಿದ್ದಾರೆ ಎಂಬುದನ್ನು ವಾಯುಪಡೆ ಸ್ಪಷ್ಟಪಡಿಸಿದೆ.

ಮಕ್ಕಳು ಮತ್ತು ವಯಸ್ಕರು ಸೇರಿದಂತೆ 50 ಕ್ಕೂ ಹೆಚ್ಚು ಜನರನ್ನು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಿಸಿದ್ದರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ವಯಸ್ಸಿನ ಮಿತಿ ನಾಲ್ಕರಿಂದ 18 ವರ್ಷಗಳು. ಕಾಲೇಜಿನ ಶಿಕ್ಷಕ ರೆಝೌಲ್ ಇಸ್ಲಾಂ ಅವರು ವಿಮಾನವು ಕಟ್ಟಡಕ್ಕೆ “ನೇರವಾಗಿ” ಡಿಕ್ಕಿ ಹೊಡೆದಿರುವುದನ್ನು ನೋಡಿರುವುದಾಗಿ ಸುದ್ದಿ ಮಾದ್ಯಮಕ್ಕೆ ತಿಳಿಸಿದ್ದಾರೆ.

ಮತ್ತೊಬ್ಬ ಶಿಕ್ಷಕ ಮಸೂದ್ ತಾರಿಕ್ ಮತ್ತೊಂದು ಸುದ್ದಿ ಮಾದ್ಯಮಕ್ಕೆ ಸ್ಫೋಟದ ಶಬ್ದ ಕೇಳಿಸಿತು ಎಂದು ತಿಳಿಸಿ “ನಾನು ಹಿಂತಿರುಗಿ ನೋಡಿದಾಗ, ನನಗೆ ಬೆಂಕಿ ಮತ್ತು ಹೊಗೆ ಮಾತ್ರ ಕಾಣಿಸಿತು… ಇಲ್ಲಿ ಅನೇಕ ಪೋಷಕರು ಮತ್ತು ಮಕ್ಕಳು ಇದ್ದರು.” ಎಂದಿದ್ದಾರೆ.

“ನನ್ನ ಕಣ್ಣೆದುರೇ” ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದದ್ದನ್ನು ನೋಡಿದೆ ಎಂದು ಒಬ್ಬ ವಿದ್ಯಾರ್ಥಿ ಹೇಳಿದ್ದಾರೆ.

ಸಧ್ಯ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ತುರ್ತು ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಈ ಕ್ಷಣದ ಮಾಹಿತಿ ಇದ್ದು ಮುಂದಿನ ಮಾಹಿತಿಗಾಗಿ ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page