ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಒಂದು ವರ್ಷ: ಇಂದಿಗೂ ನಿಗೂಢವಾಗಿಯೇ ಉಳಿದ ಅಪಘಾತದ ನೈಜ ಕಾರಣ

ದೆಹಲಿ: ಕಳೆದ ವರ್ಷ ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ್ ದುರಂತಕ್ಕೆ ಬರೋಬ್ಬರಿ ಒಂದು ವರ್ಷ ಕಳೆದಿದ್ದರೂ ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಅಂತರರಾಷ್ಟ್ರೀಯ ವಿಮಾನಯಾನ ನಿಯಮಾವಳಿಗಳ ಪ್ರಕಾರ, ಇಂತಹ ಪ್ರಮುಖ ದುರಂತಗಳು ಸಂಭವಿಸಿದ ಒಂದು ವರ್ಷದೊಳಗೆ ಅಂತಿಮ ತನಿಖಾ ವರದಿಯನ್ನು ಪ್ರಕಟಿಸಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ತನಿಖೆಯ ಪ್ರಗತಿಯನ್ನು ವಿವರಿಸುವ ಮಧ್ಯಂತರ ವರದಿಯನ್ನಾದರೂ ಬಿಡುಗಡೆ ಮಾಡುವುದು ಕಡ್ಡಾಯವಾಗಿದೆ.

ಪ್ರಸ್ತುತ ಅಮೆರಿಕದಲ್ಲಿ ಈ ವಿಮಾನದ ಜಿಇ ಏರೋಸ್ಪೇಸ್ (GE Aerospace) ಇಂಜಿನ್‌ಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಇನ್ನು ಮೂರು ತಿಂಗಳ ಅವಧಿಯಲ್ಲಿ ಈ ದುರಂತದ ಅಂತಿಮ ತನಿಖಾ ವರದಿ ಹೊರಬೀಳುವ ಸಾಧ್ಯತೆಯಿದೆ. ಆಧುನಿಕ ಜೆಟ್ ಇಂಜಿನ್‌ಗಳ ಆಳವಾದ ವಿಶ್ಲೇಷಣೆಯು ಅಪಘಾತದ ನೈಜ ಕಾರಣವನ್ನು ಪತ್ತೆಹಚ್ಚುವಲ್ಲಿ ಅತ್ಯಂತ ನಿರ್ಣಾಯಕವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನದ ಕಾಕ್‌ಪಿಟ್‌ನಲ್ಲಿರುವ ಎರಡು ಇಂಧನ ನಿಯಂತ್ರಣದ ಲಿವರ್‌ಗಳು (Fuel Control Switches) ಇದ್ದಕ್ಕಿದ್ದಂತೆ ‘ರನ್’ (Run) ಸ್ಥಿತಿಯಿಂದ ‘ಕಟ್-ಆಫ್’ (Cut-off) ಸ್ಥಿತಿಗೆ ಬದಲಾಗಿದ್ದೇ ಈ ಭೀಕರ ದುರಂತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ಆ ಸ್ವಿಚ್‌ಗಳನ್ನು ಯಾರು ಬದಲಾಯಿಸಿದರು ಮತ್ತು ಏಕೆ ಬದಲಾಯಿಸಿದರು ಎಂಬ ಅತ್ಯಂತ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾಥಮಿಕ ವರದಿಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ, ದುರಂತ ನಡೆದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಶುಕ್ರವಾರ ಅಧಿಕೃತ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ತನಿಖೆಯಲ್ಲಿ ಗಣನೀಯ ಪ್ರಗತಿಯಾಗಿದೆ ಮತ್ತು ಘಟನೆಯ ಕುರಿತು ಅತ್ಯಂತ ವ್ಯಾಪಕ ಹಾಗೂ ಕೂಲಂಕಷವಾದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಅಹಮದಾಬಾದ್‌ನ ಈ ಘೋರ ವಿಮಾನ ಅಪಘಾತದಿಂದ ಪವಾಡಸದೃಶವಾಗಿ ಬದುಕುಳಿದ ಏಕೈಕ ವ್ಯಕ್ತಿ, 39 ವರ್ಷದ ರಮೇಶ್ ಅವರ ಪ್ರಸ್ತುತ ಸ್ಥಿತಿಯ ಕುರಿತು ಮಾಧ್ಯಮಗಳು ಮಾಹಿತಿ ಕಲೆಹಾಕಿದ್ದು, ಆ ಕರಾಳ ರಾತ್ರಿಯ ಕಹಿ ನೆನಪುಗಳೊಂದಿಗೆ ತಾವು ದಿನ ನಿತ್ಯ ಅನುಭವಿಸುತ್ತಿರುವ ನರಕಯಾತನೆಯನ್ನು ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. “ನಾನು ಇಂದಿಗೂ ತೀವ್ರ ನಿಶ್ಯಕ್ತಿ, ನಿದ್ರಾಹೀನತೆ, ತಲ್ಲಣ ಮತ್ತು ಆತಂಕದಿಂದ ಬಳಲುತ್ತಿದ್ದೇನೆ. ಆ ಭೀಕರ ಅಪಘಾತದಲ್ಲಿ ನಾನು ನನ್ನ ಒಡಹುಟ್ಟಿದ ಸಹೋದರನನ್ನು ಶಾಶ್ವತವಾಗಿ ಕಳೆದುಕೊಂಡೆ,” ಎಂದು ರಮೇಶ್ ಕಣ್ಣೀರಿಟ್ಟಿದ್ದಾರೆ.

“ಮುಚ್ಚಿದ ಬಾಗಿಲುಗಳ ನಡುವೆ, ನಾಲ್ಕು ಗೋಡೆಗಳ ಒಳಗೆ ನಾನು ನಿತ್ಯವೂ ಕಣ್ಣಿಗೆ ಕಾಣದ ನೂರಾರು ಮಾನಸಿಕ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಆ ಕರಾಳ ದಿನದ ನಂತರ ನನ್ನ ಬದುಕನ್ನು ಮತ್ತೆ ಮೊದಲಿನಂತೆ ಕಟ್ಟಿಕೊಳ್ಳಲು ಮತ್ತು ನನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಾನು ಇಂದಿಗೂ ಶಕ್ತಿಮೀರಿ ಪ್ರಯತ್ನಿಸುತ್ತಲೇ ಇದ್ದೇನೆ,” ಎಂದು ಅವರು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, “ಆ ಭೀಕರ ದುರಂತದಿಂದ ನಾನು ಜೀವಂತವಾಗಿ ಉಳಿದಿರುವುದು ದೊಡ್ಡ ವಿಷಯವೇ ಸರಿ. ಆದರೆ ಬದುಕುಳಿಯುವುದು ನನ್ನ ಕಥೆಯ ಒಂದು ಭಾಗವಷ್ಟೇ, ಅಂದಿನಿಂದ ಇಂದಿನವರೆಗೆ ನಾನು ಅನುಭವಿಸುತ್ತಿರುವ ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ,” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು