ಎಂಜಿನ್ ತೈಲದ ಪ್ರಮಾಣಲ್ಲಿ ದಿಡೀರ್ ಕುಸಿತ ಕೊಚ್ಚಿಗೆ ಮರಳಿದ – ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ತಿರುವನಂತಪುರಂ:  ಕೊಚ್ಚಿಯಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬೋಯಿಂಗ್ 737 ವಿಮಾನದಲ್ಲಿ ಹಾರಾಟದ ವೇಳೆ ಎಂಜಿನ್‌ ತೈಲದ ಪ್ರಮಾಣ ದಿಢೀರ್‌ ಕುಸಿದ ಹಿನ್ನೆಲೆಯಲ್ಲಿ ವಿಮಾನವನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ವಾಪಸ್‌ ಕರೆತರಲಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX 415 ವಿಮಾನ ಟೇಕ್‌ಆಫ್‌ ಆದ ಸುಮಾರು 50 ನಿಮಿಷಗಳ ಬಳಿಕ 36 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಎಂಜಿನ್‌–1ರಲ್ಲಿ ತೈಲದ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್‌ ಮತ್ತು ಸಹ ಪೈಲಟ್‌ ಗಮನಿಸಿದರು. ತೈಲದ ಒತ್ತಡ ಅಪಾಯದ ಮಟ್ಟಕ್ಕೆ ಇಳಿಯುತ್ತಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಂಜಿನ್‌–1 ಅನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಪೈಲಟ್‌ ವಿಮಾನವನ್ನು ಕೊಚ್ಚಿಯತ್ತ ತಿರುಗಿಸಿ, ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ವಿಮಾನವನ್ನು ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಎಂಜಿನ್‌ನಲ್ಲಿ ತೈಲದ ಪ್ರಮಾಣ ದಿಢೀರ್‌ ಕುಸಿಯಲು ಕಾರಣವೇನು ಎಂಬುದನ್ನು ತಾಂತ್ರಿಕ ತಂಡ ಪರಿಶೀಲಿಸುತ್ತಿದೆ. ಪೈಲಟ್‌ ಮತ್ತು ಸಹ ಪೈಲಟ್‌ ಸಮಯೋಚಿತವಾಗಿ ಕೈಗೊಂಡ ಕ್ರಮದಿಂದ ವಿಮಾನವನ್ನು ಸುರಕ್ಷಿತವಾಗಿ ವಾಪಸ್‌ ತರಲು ಸಾಧ್ಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು