ರಾಜ್ಯದ 224 ಶಾಸಕರೂ ನನಗೆ ಒಂದೇ ನಾವು ಒಟ್ಟಿಗೆ ಕೆಲಸ ಮಾಡೋಣ – ಡಿಕೆಶಿ

ಬೆಂಗಳೂರು: ಹೊಸ ಆಲೋಚನೆ, ಭರವಸೆ ಮತ್ತು ನಂಬಿಕೆಯ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ಆಡಳಿತ ಪಕ್ಷ, ವಿರೋಧ ಪಕ್ಷದ ಶಾಸಕರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ‘ಟೀಮ್ ಕರ್ನಾಟಕ’ವಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು. ಆದರೆ ಮುಖ್ಯಮಂತ್ರಿಯಾಗಿ ತಮ್ಮ ದೃಷ್ಟಿಯಲ್ಲಿ 224 ಶಾಸಕರೂ ಸಮಾನರು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ತಮ್ಮ ಆಶಯ ಎಂದು ಹೇಳಿದರು. ಹಿಂದಿನ ಮುಖ್ಯಮಂತ್ರಿಗಳ ಆಡಳಿತವನ್ನು ಸ್ಮರಿಸಿದ ಶಿವಕುಮಾರ್, ರಾಜ್ಯದ ಅಭಿವೃದ್ಧಿಗೆ ವಿವಿಧ ನಾಯಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾರನ್ನೂ ಟೀಕಿಸುವ ಉದ್ದೇಶ ಇಲ್ಲ. ಹಳೆಯ ವಿಚಾರಗಳನ್ನು ಮರೆತು ಹೊಸ ಪಯಣ ಆರಂಭಿಸೋಣ ಎಂದರು.

ಬೆಂಗಳೂರು ಮಾತ್ರವಲ್ಲ, 2ನೇ ಮತ್ತು 3ನೇ ಹಂತದ ನಗರಗಳಿಗೂ ಅಭಿವೃದ್ಧಿ ಅಗತ್ಯ ಎಂದು ಹೇಳಿದ ಅವರು, ಉಪನಗರಗಳ ಅಭಿವೃದ್ಧಿ, ಹೊಸ ರಿಂಗ್‌ರಸ್ತೆಗಳು, ನೀರಾವರಿ ಯೋಜನೆಗಳು ಹಾಗೂ ಕೃಷಿಗೆ ಉತ್ತೇಜನ ನೀಡುವ ಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದರು.

ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ಹಸಿರು ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ನೀರಿನ ಪೋಲು ತಡೆದು ಕೃಷಿಗೆ ಬಳಸುವುದು, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ರೈತರ ಪರ್ಯಾಯ ಆದಾಯ ಮೂಲಗಳಾಗಿ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿರುವ ನಗರವಾಗಿದ್ದು, ರಾಜ್ಯದ ಮಾನವ ಸಂಪನ್ಮೂಲ, ಜ್ಞಾನ ಮತ್ತು ಪ್ರತಿಭೆ ದೊಡ್ಡ ಶಕ್ತಿಯಾಗಿದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು CSR ನಿಧಿಯನ್ನು ಗ್ರಾಮೀಣ ಪ್ರಾಥಮಿಕ ಶಿಕ್ಷಣಕ್ಕೆ ಬಳಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು