Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಿಬಿಎಂಪಿ ಚುನಾವಣೆಗೆ ಮೂರು ಪಕ್ಷಗಳಿಗೂ ಸೋಲಿನ ಭಯವಿದೆ: ಮೋಹನ್‌ ದಾಸರಿ ವ್ಯಂಗ್ಯ

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆದರೆ ರಾಜ್ಯದ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಪಕ್ಷಗಳಿಗೆ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯ ಕಾಡುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿಯವರು ವ್ಯಂಗಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, ಮೀಸಲಾತಿ ನಿಗದಿಗೆ ಮೂರು ತಿಂಗಳು ಸಮಯ ಬೇಕೆಂದು ರಾಜ್ಯ ಸರ್ಕಾರವು ಕೋರ್ಟ್‌ಗೆ ಮನವಿ ಸಲ್ಲಿಸಿರುವ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼ2020ರಲ್ಲಿ ನಡೆಯಬೇಕಾಗಿದ್ದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು, ಕೋರ್ಟ್‌ ಛೀಮಾರಿ ಹಾಕಿದ ನಂತರವೂ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವುದು ಬಿಜೆಪಿಯ ಹೇಡಿತನಕ್ಕೆ ಸಾಕ್ಷಿ. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಬೆಂಗಳೂರು ಶಾಸಕರು ಕೂಡ ಬಿಬಿಎಂಪಿ ಚುನಾವಣೆಗೆ ಒತ್ತಾಯಿಸುತ್ತಿಲ್ಲ. ಮೂರೂ ಪಕ್ಷಗಳಿಗೆ ಸೋಲುವ ಭಯ ಕಾಡುತ್ತಿದ್ದು, ಆದ್ದರಿಂದಲೇ ಚುನಾವಣೆ ಮುಂದೂಡುವುದರಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿವೆʼ ಎಂದು ಟೀಕಿಸಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿನ ಮುಖಭಂಗವು ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದ ವಿಧಾನಸಭಾ ಚುನಾವಣೆಯ ಜೊತೆಗೆ ಅಥವಾ ಅದರ ನಂತರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪಿತೂರಿ ನಡೆಸುತ್ತಿದೆ. ಆದರೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಆಮ್‌ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಯಾವುದೇ ಸಮಯದಲ್ಲಿ ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ನಡೆದರೂ ನಮಗೆ ಬಹುಮತ ದೊರೆಯಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು