Tuesday, December 10, 2024

ಸತ್ಯ | ನ್ಯಾಯ |ಧರ್ಮ

ಮಹಿಳೆಯರ ಅಂತರಾಳ ಬಿಚ್ಚಿಡುವ ʼಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಸಿನಿಮಾ (ನಾಗಾಂಕಣ)

  • ಎಂ ನಾಗರಾಜ ಶೆಟ್ಟಿ

ಮಹಿಳೆ ತಾನು ಅನುಭವಿಸುವ ನೋವು, ತಲ್ಲಣ, ಬೇಗುದಿಗಳನ್ನು ಗಂಡಸರಿಗಿಂತ ಸಶಕ್ತವಾಗಿ ಅಭಿವ್ಯಕ್ತಿಸಬಲ್ಲಳೆಂಬುದನ್ನು ಸಾಹಿತ್ಯ ಮತ್ತಿತರ ಕಲಾ ಮಾಧ್ಯಮಗಳಲ್ಲಿ ಕಂಡು ಕೊಳ್ಳಬಹುದು. ಒಂದಿಷ್ಟು ಧೈರ್ಯ, ಸಂವೇದನೆ ಮತ್ತು ಅವಕಾಶ ಸಿಕ್ಕರೆ ಹೆಣ್ಣುಮಕ್ಕಳು ಕಟ್ಟಿಕೊಡುವ ಲೋಕ ಬೇರೆಯದೇ ಆಗಿರುತ್ತದೆ.

ಮಹಿಳೆಯರು ನಿರ್ದೇಶಿಸಿದ ಸಿನಿಮಾಗಳಲ್ಲೂ ಇಂತಹ ವಿಭಿನ್ನ ಹೊಳಹುಗಳಿವೆ. ದೀಪಾ ಮೆಹ್ತಾ, ಮೀರಾ ನಾಯರ್‌, ನಂದಿತಾ ದಾಸ್‌, ಕಿರಣ್‌ ರಾವ್‌, ಪ್ರೇಮಾ ಕಾರಂತ ಮುಂತಾದವರ ಚಿತ್ರಗಳಲ್ಲಿ ವಿಶೇಷ ಅನುಭೂತಿಗಳಿವೆ. ಈ ಬಗೆಯ ಸಂವೇದನಾಶೀಲರ ಸಾಲಿನಲ್ಲಿ ಗುರುತಿಸಬಹುದಾದ ಯುವ ನಿರ್ದೇಶಕಿ ಪಾಯಲ್ ಕಪಾಡಿಯಾ. ಅವರ ʼ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ʼ ( All we imagine as Light) ಇತ್ತೀಚೆಗೆ ಕ್ಯಾನೆಸ್‌ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಗ್ರಾಂಡ್‌ ಪ್ರಿಕ್ಸ್‌ ಪ್ರಶಸ್ತಿ ಪಡೆದು ಜಗತ್ತಿನಾದ್ಯಂತ ಹೆಸರು ಗಳಿಸಿದೆ.

ಪುಣೆಯ ಫಿಲ್ಮ್ ಎಂಡ್ ಟೆಲಿವಿಷನ್ ಆಫ್ ಇಂಡಿಯಾ (FTII)ದಲ್ಲಿ ವಿದ್ಯಾರ್ಥಿಯಾಗಿದ್ದಾಲೇ ಪಾಯಲ್ ಕಪಾಡಿಯಾ ಸುದ್ದಿ ಮಾಡಿದ್ದರು. 2014 ರಲ್ಲಿ ಎಫ್ಟಿಐಐಗೆ ಪರಿಣಿತನಲ್ಲದ ನಿರ್ದೇಶಕನನ್ನುಆಯ್ಕೆ ಮಾಡಿದ್ದಕ್ಕೆ ಜೋರಾಗಿ ಪ್ರತಿಭಟನೆ ನಡೆದು ಸರಕಾರ ಮುಜುಗರ ಅನುಭವಿಸುವಂತಾಗಿತ್ತು. ಆ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಪಾಯಲ್ ಕಪಾಡಿಯಾ, ಅದೇ ವಸ್ತುವನ್ನು ಆಧರಿಸಿ ʼ ಎ ನೈಟ್ ನೋಯಿಂಗ್ ನತಿಂಗ್ʼ ಎನ್ನುವ ಸಾಕ್ಷ್ಯ ಚಿತ್ರ ತಯಾರಿಸಿದ್ದರು. ಈ ಸಾಕ್ಷ್ಯ ಚಿತ್ರಕ್ಕೆ 2021 ರ ಗೋಲ್ಡನ್ ಐ ಪ್ರಶಸ್ತಿ ಬಂದಿತ್ತು.

ʼ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ʼ ಪಾಯಲ್ ಕಪಾಡಿಯಾರವರ ಮೊದಲ ಪೂರ್ಣ ಪ್ರಮಾಣದ ಸಿನಿಮಾ. ಮುಂಬಯಿಯಲ್ಲಿ ಕೆಲಸ ಮಾಡುವ ಇಬ್ಬರು ಮಲೆಯಾಳಿ ಹೆಣ್ಣು ಮಕ್ಕಳ ಕತೆಯಾದ್ದರಿಂದ ಇದನ್ನು ಮಲೆಯಾಳಿ ಭಾಷೆಯ ಚಿತ್ರ ಎಂದು ಹೆಸರಿಸಬಹುದಾದರೂ ಚಿತ್ರದಲ್ಲಿರುವ ಇನ್ನೊಂದು ಪಾತ್ರ ಮರಾಠಿ ಮಾತನಾಡುತ್ತದೆ. ಮುಂಬಯಿ ಶಹರನ್ನು ಬಳಸಿಕೊಂಡಿದ್ದರಿಂದ ಹಿಂದಿಯೂ ಇದೆ. ಇವಲ್ಲದೆ ಚಿತ್ರದಲ್ಲಿ ಇನ್ನೊಂದು ಭಾಷೆಯೂ ಇದೆ; ಅದು ಮೌನ.ಚಿತ್ರದಲ್ಲಿ ಮೌನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ಆರಂಭದಲ್ಲಿ ಚಲನೆಯ ಮುಖಾಂತರ ಮುಂಬಯಿಯ ಬದುಕನ್ನು ತೆರೆಯುತ್ತಾ ಹೋಗುವ ಸಿನಿಮಾ ನಮ್ಮನ್ನು ಪ್ರಭಾ ಎನ್ನುವ ನರ್ಸ್ ಹತ್ತಿರ ಕರೆದುಕೊಂಡು ಹೋಗುತ್ತದೆ. ಕೆಲಸದಲ್ಲಿ ಶ್ರದ್ಧೆ, ರೋಗಿಗಳಲ್ಲಿ ಕರುಣೆ, ಅಕ್ಕರೆ ತೋರುವ ಪ್ರಭಾ ಕಣ್ಣುಗಳಲ್ಲಿ ವೇದನೆಯನ್ನು ಕಾಣುತ್ತೇವೆ. ಪ್ರಭಾ ರೈಲಿನ ಬೋಗಿಯಲ್ಲಿ ಕಂಬಿಗೆ ಆತು ನಿಲ್ಲುತ್ತಾಳೆ. ಅವಳ ಕಣ್ಣೊಳಗೆ ನೋವು ಮಡುಗಟ್ಟಿದೆ. ಮದುವೆಯಾಗಿ ಕೆಲದಿನಗಳಲ್ಲೇ ಉದ್ಯೋಗಕ್ಕೆಂದು ಜರ್ಮನಿಗೆ ಹೋದ ಗಂಡನ ಸುಳಿವೇ ಇಲ್ಲ.

ಪ್ರಭಾಳ ಜೊತೆಯಲ್ಲಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪಾರ್ವತಿ, ತೀರಿಹೋದ ಗಂಡ ಕೆಲಸ ಮಾಡುತ್ತಿದ್ದ ಕಾರ್ಖಾನೆಯವರು ಕೊಟ್ಟ ಫ್ಲಾಟ್ ನಲ್ಲಿ ವಾಸಿಸುತ್ತಾಳೆ. ಅವಳ ವಾಸದ ಅಪಾರ್ಟ್ ಮೆಂಟನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಬಿಲ್ಡರ್ ಫ್ಲಾಟ್ ಖಾಲಿ ಮಾಡಿಕೊಡಲು ಹೇಳಿದ್ದಾನೆ. ಅವಳ ಹತ್ತಿರ ಪ್ಲಾಟಿನ ಮಾಲಿಕತ್ವಕ್ಕೆ ಸಂಬಂಧ ಪಟ್ಟ ಯಾವುದೇ ಕಾಗದ ಪತ್ರಗಳಿಲ್ಲ.

ಇವರಿಬ್ಬರಲ್ಲದೆ ಚಿತ್ರದಲ್ಲಿ ಇನ್ನೊಂದು ಪಾತ್ರ ಇದೆ. ಈಕೆ ಅನು; ಪುಟಿಯುವ ಯೌವನದ ತುಂಬುಗೆನ್ನೆಯ ಯುವತಿ. ಅವಳಿಗೆ ಆಸ್ಪತ್ರೆಯ ಕೆಲಸ ಬೋರು. ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದಾಳೆ. ಶಿಯಾಜ್ ಎನ್ನುವ ಹುಡುಗ ಕಣ್ಣು ತಪ್ಪಿಸಿ ಅವಳನ್ನು ಭೇಟಿ ಮಾಡುತ್ತಿರುತ್ತಾನೆ. ಅನು ಅವನನ್ನು ಸಂಧಿಸಲು ಹಾತೊರೆಯುತ್ತಾಳೆ.

ಚಿತ್ರದಲ್ಲಿ ರಕ್ತ ಮಾಂಸ, ಭಾವನೆಗಳುಳ್ಳ ಈ ಮೂರು ಪಾತ್ರಗಳಲ್ಲದೆ ಇನ್ನೆರಡು ಪ್ರಮುಖ ಪಾತ್ರಗಳಿವೆ: ಮುಂಬಯಿ ನಗರ ಮತ್ತು ರತ್ನಗಿರಿಯ ಕಡಲ ಕಿನಾರೆ. ಕೆಲವೇ ದೃಶ್ಯಗಳಲ್ಲಿ ಮುಂಬಯಿನ ಧಾವಂತದ ಬದುಕನ್ನು ಚಿತ್ರ ಪರಿಚಯಿಸುತ್ತದೆ. ಸತತವಾಗಿ ಓಡುತ್ತಿರುವ ರೈಲು; ನೂಕುನುಗ್ಗಲಿನ ಜನ; ಇದ್ದಕ್ಕಿದ್ದಂತೆ ಸುರಿಯುವ ಮಳೆ; ಫಳಫಳ ಹೊಳೆಯುವ ಅಪಾರ್ಟ್ ಮೆಂಟ್ ಗಳ ಕೃತಕ ಬೆಳಕು. ಎರಡು ಕೋಟಿಗಳಿಂತಲೂ ಹೆಚ್ಚು ಜನರು ವಾಸಿಸುವ ಮುಂಬಯಿಯ ಗೌಜು ಗದ್ದಲದಲ್ಲಿ ಏಕಾಂಗಿ ಮನುಷ್ಯ! ಮುಂಬಯಿ ನಾಳೆ ಏನು ಎಂದು ತಿಳಿಯದೆ, ಆ ಕುರಿತು ಯೋಚನೆಗೆ ಅವಕಾಶ ಕೊಡದೆ ಬದುಕಿನ ಪಾಠ ಹೇಳಿ ಕೊಡುತ್ತದೆ. ವಾಸ್ತವಕ್ಕೆ ಬೆನ್ನು ಹಾಕಿ ಭ್ರಮೆಯನ್ನು ಹುಟ್ಟು ಹಾಕುವ ಮಾಯಾ ನಗರಿ. ಹೀಗಿದ್ದರೂ ಮುಂಬಯಿಗೆ ಬಂದವರು ಹಿಂದೆ ಹೋಗಲಾರರು; ಹೊಟ್ಟೆ ಬಟ್ಟೆಗೆ ಕೊಟ್ಟು ಪೊರೆಯುವ ಮುಂಬಯಿಯಲ್ಲಿ ತಮ್ಮನ್ನು ತಾವು ಮರೆಯುತ್ತಾ ಅಲ್ಲೇ ಉಳಿದು ಬಿಡುತ್ತಾರೆ.

ಮುಂಬಯಿಯ ಧಾವಂತದ, ಗುಂಪು ಗದ್ದಲದ ಬದುಕಿಗಿಂತ ತೀರಾ ಭಿನ್ನವಾಗಿರುವುದು ರತ್ನಗಿರಿಯ ಕಡಲ ತೀರದ ಬದುಕು. ಪ್ರಶಾಂತ ವಾತಾವರಣ, ನಿಸರ್ಗದ ಸೊಬಗು, ಆತುರವಿಲ್ಲದ ಜೀವನ.

ಮುಂಬಯಿಯಲ್ಲಿ ನೆಲೆ ಕಂಡುಕೊಂಡ ಪ್ರಭಾ, ಪಾರ್ವತಿ, ಅನು ತಮ್ಮೆಲ್ಲ ತೊಂದರೆಗಳ ನಡುವೆ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುವವರು. ಪ್ರಭಾ ಪಾರ್ವತಿಯ ಕಷ್ಟಕ್ಕೆ ಸ್ಪಂದಿಸುತ್ತಾಳೆ. ಅವಳನ್ನು ಮುಂಬಯಿಯಲ್ಲಿ ಉಳಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ತನ್ನ ಪ್ರಿಯತಮನನ್ನು ಏಕಾಂತದಲ್ಲಿ ಸಂಧಿಸುವ ಅನು ಆಸೆಗೆ ಹಲವು ವಿಘ್ನಗಳು. ಪ್ರಭಾ ಜರ್ಮನಿಗೆ ಕರೆ ಮಾಡಿದರೂ ಮಾರುತ್ತರವಿಲ್ಲ. ಪಾರ್ವತಿ ಮುಂಬಯಿ ತೊರೆದು ತನ್ನೂರಿಗೆ ಹೋಗಲು ತೀರ್ಮಾನಿಸಿದಾಗ ಪ್ರಭಾ ಮತ್ತು ಅನು ಅವಳಿಗೆ ಜೊತೆಯಾಗುತ್ತಾರೆ.

ರತ್ನಗಿರಿಯ ಕಡಲ ಕರೆ ಮೂವರಲ್ಲೂ ಹರ್ಷದ ಅಲೆಗಳನ್ನೆಬ್ಬಿಸುತ್ತದೆ. ಅನು ಪ್ರಿಯತಮ ಶಿಯಾಜ್ ಪ್ರಭಾ, ಪಾರ್ವತಿಗೆ ತಿಳಿಯದಂತೆ ಅವರನ್ನು ಹಿಂಬಾಲಿಸಿ ರತ್ನಗಿರಿಗೆ ಬಂದಿರುತ್ತಾನೆ. ಮುಂಬಯಿಯಲ್ಲಿ ಸಿಗದ ಏಕಾಂತ ಅನು- ಶಿಯಾಜ್ ಗೆ ಪುರಾತನ ಕೋಟೆಯೊಳಗೆ ಸಿಗುತ್ತದೆ. ಅವರಿಬ್ಬರು ಕದ್ದು ಮುಚ್ಚಿ ನಡೆಸುವ ಒಡನಾಟವನ್ನು ಪ್ರಭಾ ಪತ್ತೆ ಹಚ್ಚುತ್ತಾಳೆ.

ಚಿತ್ರ ಹೆಣ್ಣಿನ ಅಂತರಂಗಕ್ಕೆ ಲಗ್ಗೆ ಹಾಕುತ್ತದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಆಸರೆ ಇಲ್ಲದೆಯೂ ಬದುಕುವ ಛಲವಿದೆ. ಪಡೆಯಬೇಕಾದದನ್ನು ಗುಟ್ಟಾಗಿಯಾದರೂ ಪಡೆದುಕೊಳ್ಳುವ ತುಡಿತವಿದೆ. ಪ್ರತಿಕೂಲ ಪರಿಸ್ಥಿತಿಗೆ ಜಗ್ಗದೆ, ಅವನ್ನು ಸಹಜವೆಂಬಂತೆ, ದೈನಂದಿನ ಸಂಗತಿಯೆಂಬಂತೆ ಕಾಣುವ ಧೈರ್ಯವಿದೆ. ಈ ಚಿತ್ರ ಒಳಗಿನ ನೋವನ್ನು ಮೀರಿ ಹೊರಗಿನ ಪ್ರಪಂಚವನ್ನು ಎದುರಿಸುವ ಗಟ್ಟಿಗಿತ್ತಿಯರ ಚಿತ್ರಣದಂತೆ ಕಾಣುತ್ತದೆ.

ಇದು ಕೇವಲ ಮೂವರು ಹೆಣ್ಣುಮಕ್ಕಳ ಸಿನಿಮಾ ಮಾತ್ರವಲ್ಲ. ಮುಂಬಯಿಯ ಅವ್ಯಕ್ತ ಬದುಕು, ರತ್ನಗಿರಿಯ ಸಹಜ ಪರಿಸರವೂ ಪಾತ್ರವಾಗಿ, ಸಮಕಾಲೀನ ರಾಜಕೀಯ ವ್ಯಾಖ್ಯೆಯನ್ನೂ ಚಿತ್ರ ಒಳಗೊಂಡಿದೆ.

ಪಾರ್ವತಿಯನ್ನು ಅವಳು ವಾಸದ ಮನೆಯಿಂದ ಹೊರ ಹಾಕುವುದರಲ್ಲಿ ಮನುಷ್ಯನ ಅಸ್ತಿತ್ವಕ್ಕೆ ಬೆಲೆ ಇಲ್ಲದೆ, ಕಾಗದ ಪತ್ರಗಳಿಂದಲೇ ಗುರುತಿಸಲಾಗುವ ಪ್ರಸ್ತುತ ಸ್ಥಿತಿಯನ್ನು ಕಾಣಬಹುದು. ಗಣೇಶನ ಮೆರವಣಿಗೆ ದೈನಂದಿನ ತಾಪತ್ರಯಗಳನ್ನು ಮರೆಸುವುದನ್ನು, ಜನರನ್ನು ಭ್ರಮೆಯಲ್ಲಿ ತೇಲಿಸುವುದನ್ನು ಹೇಳುತ್ತದೆ. ಅನ್ಯ ಧರ್ಮದವನನ್ನು ಪ್ರೀತಿಸಲಾರದ, ಬೆರೆಯಲಾದ ವಿಷಮ ಸನ್ನಿವೇಶಕ್ಕೆ ಅನು, ಶಿಯಾಜ್ ಪ್ರೀತಿ ಸಾಕ್ಷಿಯಾಗುತ್ತದೆ. ನಿರ್ದೇಶಕಿ ವಾಚಾಳಿತನವಿಲ್ಲದೇ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಬಯಲು ಮಾಡುತ್ತಾರೆ.

ನನಗೆ ಇಷ್ಟವಾದ ಇನ್ನೊಂದು ದೃಶ್ಯ, ಅತಿಕ್ರಮಣದ ವಿರುದ್ಧ ಮಹಿಳೆಯರು ಒಟ್ಟಾಗಿ ಮಾಡುವ ಪ್ರತಿಭಟನೆ. ಈ ಪ್ರತಿಭಟನೆಯಲ್ಲಿ ಸಾವಿತ್ರಿ ಬಾಯಿ ಫುಲೆಯವರ ಚಿತ್ರ ಎದ್ದು ಕಾಣುತ್ತದೆ. ಅದರೊಂದಿಗೆ ಭಗತ್ ಸಿಂಗ್ ಮತ್ತು ಮಹಾತ್ಮ ಜ್ಯೋತಿಬಾ ಫುಲೆಯವರ ಭಾವಚಿತ್ರಗಳೂ ಇವೆ. ಈ ಮೂಲಕ ಪಾಯಲ್ ಕಪಾಡಿಯಾ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆಂದು ಅನ್ನಿಸುತ್ತದೆ. ಈ ಕಾಲಕ್ಕೆ ಬೇಕಾಗಿರುವುದು ಮಹಿಳೆ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರಲ್ಲಿ ಭೇದವೆಣಿಸದ ಶಿಕ್ಷಣ. ಇದಕ್ಕೆ ಸಾವಿತ್ರಿ ಬಾಯಿ ಫುಲೆ ಮಾದರಿಯಾದರೆ- ಸಮಾನತೆ, ಆತ್ಮ ಗೌರವ, ವೈಜ್ಞಾನಿಕ ನಿಲುವಿಗೆ ಭಗತ್ ಸಿಂಗ್ ತೋರ್ಬೆರಳಾಗುತ್ತಾರೆ. ಜಾತಿ ವಿನಾಶಕ್ಕೆ, ಚಾತುರ್ವರ್ಣ್ಯ ಸಿದ್ಧಾಂತ ವಿರೋಧಿಸಲು ಹಾಗೂ ಸಾಮಾಜಿಕ ಬದಲಾವಣೆಗೆ ಮಹಾತ್ಮ ಫುಲೆಯವರು ನಿರಂತರ ಹೋರಾಟ ಮಾಡಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ತಮ್ಮ ಬದ್ಧತೆ, ಕಳಕಳಿಯನ್ನು ಸಿನಿಮಾದ ಮುಖೇನವೇ ಪ್ರಸ್ತುತ ಪಡಿಸುವ ನಿರ್ದೇಶಕಿ ಮೌನವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಪ್ರಭಾ ಜರ್ಮನಿಯಿಂದ ಬಂದ ರೈಸ್ ಕುಕ್ಕರನ್ನು ಮಾತಿಲ್ಲದೆ ಅಪ್ಪಿ ಹಿಡಿಯುವ ದೃಶ್ಯ ಅವಳ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಬುರ್ಖಾ ತೊಟ್ಟ ಅನು ನಿರೀಕ್ಷೆ ಕೈಗೂಡದಿದ್ದಾಗ ಅನುಭವಿಸುವ ನೋವು ಕಣ್ಣುಗಳಲ್ಲೇ ತುಂಬಿಕೊಳ್ಳುತ್ತದೆ. ರೈಲಲ್ಲಿ ಸಂಚರಿಸುವಾಗ ಅತ್ತಿತ್ತ ದೃಷ್ಟಿ ಹರಿಸುವ ಪ್ರಭಾಳ ಕಣ್ಣುಗಳು ಬಹಳಷ್ಟನ್ನು ಹೇಳುತ್ತವೆ.

ಇವೆಲ್ಲವೂ ಸೊಗಸಾಗಿ, ನಿರ್ದೇಶಕಿಯ ಸೃಜನಶೀಲತೆಯ ಕುರುಹಾಗಿ ಚಿತ್ರದ ಅಂದವನ್ನು ಹೆಚ್ಚಿಸಿವೆ. ಆದರೆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಸಮಾಧಾನ ಕೊಡದ ಸನ್ನಿವೇಶಗಳೂ ಇವೆ. ಜರ್ಮನಿಯಲ್ಲಿರುವ ಗಂಡ ರತ್ನಗಿರಿಯ ಕಡಲ ತಡಿಯಲ್ಲಿ ಸಾಯುವ ಸ್ಥಿತಿಯಲ್ಲಿ ಪತ್ತೆಯಾಗುವುದಕ್ಕೆ ಸೂಕ್ತ ವಿವರಣೆ ಇಲ್ಲ. ಅದನ್ನು ಭ್ರಮೆಯೆಂದು ತಿಳಿಯಬಹುದಾದರೂ, ಆ ವರೆಗೆ ವಾಸ್ತವಿಕ ನೆಲೆಯಲ್ಲಿಯೇ ಸಾಗುವ ಚಿತ್ರ ಇದ್ದಕ್ಕಿದ್ದಂತೆ ಭ್ರಮಾತ್ಮಕ ಸ್ಥಿತಿಗೆ, ಮಾಂತ್ರಿಕ ವಾಸ್ತವತೆಗೆ ಹೊರಳಿಕೊಳ್ಳುವುದು ಅಸಮಂಜಸ ಎನ್ನಿಸುತ್ತದೆ.

ಮಹಿಳಾ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುವ ನಿರ್ದೇಶಕಿ ಅಷ್ಟೇ ಶ್ರದ್ಧೆಯಿಂದ ಪುರುಷ ಪಾತ್ರಗಳನ್ನು ಕಟ್ಟಿಲ್ಲ.
ಪ್ರಭಾಳಿಗೆ ಪ್ರೀತಿ ತೋರುವ ಆಸ್ಪತ್ರೆಯ ಡಾಕ್ಟರ್, ಅನು ಪ್ರಿಯತಮ ಶಿಯಾಜ್ ಇವರ ಪಾತ್ರಗಳಿಗೆ ಬೆಳವಣಿಗೆ ಇಲ್ಲ. ಈ ಪಾತ್ರಗಳು ಮುಖ್ಯ ಪಾತ್ರಗಳ ನೆರಳಾಗಿ ಕಾಣಿಸಿಕೊಳ್ಳುತ್ತವೆ. ಅನೇಕ ಚಿತ್ರಗಳಲ್ಲಿ ಗಂಡಸರು ಹಿರೋಯಿನ್ ಗಳನ್ನು ನೆಪ ಮಾತ್ರವಾಗಿ ಚಿತ್ರಿಸಿರುವುದಕ್ಕೆ ಪಾಯಲ್ ಕಪಾಡಿಯಾ ಪ್ರತಿರೋಧ ತೋರುತ್ತಿದ್ದಾರೆಯೇ?

ಆರಂಭದಲ್ಲಿ ಸಾಕ್ಷ್ಯಚಿತ್ರದಂತೆ ಕಾಣುವ ಚಿತ್ರ ಮುಂದುವರಿದಂತೆ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆಯಾದರೂ ಕೆಲವು ಸನ್ನಿವೇಶಗಳ ನಿಧಾನ ಗತಿ ಬೇಸರಕ್ಕೂ ಕಾರಣವಾಗುತ್ತದೆ. ಘಟನೆಗಳೇ ಇಲ್ಲದ ದೀರ್ಘ ಲಾಂಗ್ ಶಾಟ್ ಗಳು, ಅನವಶ್ಯ ದೃಶ್ಯಗಳು ನಿವಾರಿಸಲು ಯೋಗ್ಯವಾಗಿದ್ದವು. ಎಡಿಟಿಂಗ್ ಇನ್ನಷ್ಟು ಚೆನ್ನಾಗಿದ್ದರೆ ಈ ಕೊರತೆಗಳನ್ನು ನಿವಾರಿಸಿ ಚಿತ್ರದ ಪರಿಣಾಮ ಹೆಚ್ಚಿಸಬಹುದಿತ್ತು.

ಚಿತ್ರದ ಮೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ ಕಣಿ ಕುಸ್ರುತಿ (ಪ್ರಭ), ಛಾಯಾ ಕದಂ ( ಪಾರ್ವತಿ), ದಿವ್ಯಪ್ರಭ (ಅನು) ಪಾತ್ರಗಳನ್ನು ಅರಿತು ಅಭಿನಯಿಸಿದ್ದಾರೆ. ರಣಬೀರ್ ದಾಸ್ ಅವರ ಕ್ಯಾಮರಾ ರಾತ್ರಿ ಕಾಲದ ಮತ್ತು ಮಳೆ ಬೀಳುವ ಸಮಯದ ಮುಂಬಯಿಯನ್ನು, ರತ್ನಗಿರಿಯ ರಮ್ಯ ಪರಿಸರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ.

ʼ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ʼ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮಕರಣಗೊಳ್ಳುವ ಪ್ರಕ್ರಿಯೆಯಲ್ಲಿ ಕೊನೆಯ ಹಂತದ ತನಕ ಸ್ಪರ್ಧೆ ನೀಡಿತ್ತು. ಅಂತಿಮವಾಗಿ ಕಿರಣ್ ರಾವ್ ರವರ ʼ ಲಾಪಟ್ಟಾ ಲೇಡಿಸ್ ʼ ಚಿತ್ರವನ್ನು ಆಯ್ಕೆ ಮಾಡಲಾಯಿತು. ಸಮಾಧಾನದ ವಿಷಯವೆಂದರೆ ಇವೆರಡೂ ಮಹಿಳಾ ನಿರ್ದೇಶಕಿಯರ ಚಿತ್ರಗಳೇ. ಅದೇನೇ ಇರಲಿ, ʼ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ʼ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ಞಾವಂತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ; ಅಂತರ್ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಪ್ರಶಸ್ತಿಗಳನ್ನೂ ಪಡೆಯುತ್ತಿದೆ. ಬೆಂಗಳೂರು ಅಂತರ್ ರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.

ಬೆಳಕೆಂದು ನಾವು ಕಲ್ಪಿಸುವ ಬೆಳಕು ಏನು? ಅದು ನಿಜವಾದ ಬೆಳಕೇ, ಕೃತಕ ಬೆಳಕೇ? ನಿಶೆಯಲ್ಲಿ ಮುಂಬಯಿಯನ್ನು ಬೆಳಗುವ ಬೆಳಗು ನಿಜವಾದುದಲ್ಲ. ಆ ಬೆಳಕಿನಲ್ಲಿ, ಅಪಾರ್ಟ್ ಮೆಂಟಿನೊಳಗೆ ವಾಸಿಸುವವರ ಮನೆ ಬೆಳಗಿದೆಯೇ? ಪ್ರಭಾ, ಪಾರ್ವತಿ, ಅನು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಬದುಕಲ್ಲಿ ಬೆಳಕನ್ನು ಕಾಣಬಯಸುತ್ತಾರೆ. ಅವರು ಪಡೆಯುವ ಬೆಳಕು ನಿಜವೇ, ಊಹೆಯೇ? ಈ ಪ್ರಶ್ನೆಗಳನ್ನು ಹುಟ್ಟು ಹಾಕುವ ʼ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಧನಾತ್ಮಕವಾಗಿ ಕೊನೆಗೊಳ್ಳುತ್ತದೆ. ಆ ಮೂಲಕ ಬೆಳಕಿನ ಭರವಸೆಯನ್ನು ಯುವ ನಿರ್ದೇಶಕಿ ಪಾಯಲ್ ಕಪಾಡಿಯಾ ಮೂಡಿಸಿದ್ದಾರೆ ಮಾತ್ರವಲ್ಲ ತಮ್ಮ ಮುಂದಿನ ಚಿತ್ರಗಳನ್ನು ಕುತೂಹಲದಿಂದ ಎದುರು ನೋಡುವಂತೆ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page