Monday, June 17, 2024

ಸತ್ಯ | ನ್ಯಾಯ |ಧರ್ಮ

ಶಾಸಕರ ಕಳ್ಳತನದ ಆರೋಪ ; ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್!

ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ.

ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ ನ್ನು ನಿರ್ಲಕ್ಷಿಸಿ ದೂರವೇ ಉಳಿದಿದ್ದರು.

ಈ ಹಿನ್ನೆಲೆಯಲ್ಲಿ SIT ನ್ಯಾಯಾಲಯದ ಮೊರೆ ಹೋಗಿದ್ದು, ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಈಗಾಗಲೇ ಬಿ.ಎಲ್.ಸಂತೋಷ್ ಬಂಧನದಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ತನಗೆ ಏನು ಸೂಕ್ತ ಭದ್ರತೆ ಬೇಕೋ ಅದನ್ನು ಮಾಡಿಕೊಂಡಿದ್ದರಿಂದ ಬಂಧಿಸುವ ಪ್ರಕ್ರಿಯೆಯಿಂದ ದೂರ ಇರುವಂತೆ SIT ಅಧಿಕಾರಿಗಳಿಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.

ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಬಿ.ಎಲ್.ಸಂತೋಷ್ ರನ್ನು ಬಂಧಿಸಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಬಂಧನಕ್ಕೆ ಒಳಗಾಗಬಾರದು ಎಂದು ಹೇಳಿದ ನ್ಯಾಯಾಧೀಶರು, ಎಸ್‌ಐಟಿ ನೋಟಿಸ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದರು.

ಕಳೆದ ತಿಂಗಳು ಟಿಆರ್‌ಎಸ್‌ ಪಕ್ಷದ ಫೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಸಾಕ್ಷ್ಯ ಸಮೇತ ಮೂವರು ಬಿಜೆಪಿ ಏಜೆಂಟ್ ಗಳನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪ್ರಮುಖವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕರ ಕಳ್ಳತನದ ಪ್ರಮುಖ ಆರೋಪದ ಅಡಿಯಲ್ಲಿ ತೆಲಂಗಾಣ SIT ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಎಸ್‌ಐಟಿ ಅಧಿಕಾರಿಗಳು ಮತ್ತಿಬ್ಬರಿಗೆ ನೋಟಿಸ್ ನೀಡಿದೆ. ಹೈದರಾಬಾದ್‌ನ ಅಂಬರ್‌ಪೇಟ್ ಪ್ರದೇಶದ ವಕೀಲ ಪ್ರತಾಪ್ ಗೌಡ್ ಮತ್ತು ಪ್ರಕರಣದಲ್ಲಿ ಶಾಸಕರನ್ನು ಕುದುರಿಸಲು ಬಂದಿದ್ದ ಆರೋಪಿಗಳಲ್ಲಿ ಒಬ್ಬರಾದ ನಂದಕುಮಾರ್ ಅವರ ಪತ್ನಿ ಚಿತ್ರಲೇಖಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ.

TRS ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಖದೀಮರ ಬಂಧನವಾಗಿದೆ. ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಮೂಲಗಳ ಪ್ರಕಾರ ಸುಮಾರು 1 ಲಕ್ಷ ಪುಟಗಳ ಸಾಕ್ಷ್ಯವನ್ನು SIT ಅಧಿಕಾರಿಗಳು ಸಿದ್ದಪಡಿಸಿದ್ದು, ಬಿ.ಎಲ್.ಸಂತೋಷ್ ರನ್ನು ವಿಚಾರಣೆ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಆದ ಶಾಸಕರ ಕಳ್ಳತನದ ಆರೋಪ ಕೂಡಾ ಸಂತೋಷ್ ಮೇಲೆ ಕೇಳಿ ಬರುತ್ತಿದೆ. ಅಂತೆಯೇ ತೆಲಂಗಾಣದಲ್ಲಿ ಶಾಸಕರ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿಗಳೇ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಕುದುರಿಸಲು ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯಲ್ಲೂ ಬಿ.ಎಲ್.ಸಂತೋಷ್ ಗೆ ಬಂಧನ ಸಾಧ್ಯತೆ ದಟ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಹಲವಷ್ಟು ಶಾಸಕರ ಕಳ್ಳತನದ ಪ್ರಕರಣದಲ್ಲಿ ಬಿ.ಎಲ್.ಸಂತೋಷ್ ಹೆಸರು ಮುಂಚೂಣಿಯಲ್ಲಿ ಇದ್ದರೂ ಸಾಕ್ಷ್ಯದ ಕೊರತೆ ಇತ್ತು. ಆದರೆ ಇಲ್ಲಿ ತೆಲಂಗಾಣ ಸರ್ಕಾರ ಆರೋಪಿಗಳ ಬಂಧನಕ್ಕೂ ಮೊದಲೇ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಹಾಗಾಗಿ ಬಿಎಲ್ ಸಂತೋಷ್ ರನ್ನು ವಿಚಾರಣೆ ನಂತರವೇ ಬಂಧಿಸುವ ಬಗ್ಗೆಯೂ ತೆಲಂಗಾಣ SIT ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು