Friday, December 26, 2025

ಸತ್ಯ | ನ್ಯಾಯ |ಧರ್ಮ

ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಬಿಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ: ದೇವೇಗೌಡ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ರಾಜ್ಯ ರಾಜಕೀಯದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದರೂ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಹೊಂದಾಣಿಕೆ ಕಷ್ಟವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಮಟ್ಟದಲ್ಲಿ ಪಕ್ಷದ ಶಕ್ತಿ ಇರುವ ಕಡೆಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಹೋರಾಟ ಮಾಡಲಿದೆ ಎಂದು ತಿಳಿಸಿದ ಅವರು, ಈ ಸಣ್ಣ ಮಟ್ಟದ ಚುನಾವಣಾ ಮೈತ್ರಿಯ ಕುರಿತು ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಸಾಧ್ಯವಿಲ್ಲ ಮತ್ತು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಅಹಿಂದ’ ನಾಯಕತ್ವದ ಬಗ್ಗೆ ಕಟುವಾಗಿ ಟೀಕಿಸಿದ ದೇವೇಗೌಡರು, ಸಿದ್ದರಾಮಯ್ಯ ಅವರು ನಿಜವಾದ ಅಹಿಂದ ನಾಯಕರಾಗಿದ್ದರೆ ಚುನಾವಣೆ ವೇಳೆ ತಮಗಾಗಿ ಒಂದು ಕ್ಷೇತ್ರವನ್ನು ಹುಡುಕಲು ವರ್ಷಗಟ್ಟಲೆ ಚರ್ಚೆ ಮಾಡುವ ಮತ್ತು ಮೈಸೂರು, ಬಾದಾಮಿ ಅಥವಾ ಕೋಲಾರ ಎಂದು ಅಲೆಯುವ ಅವಶ್ಯಕತೆಯಿರಲಿಲ್ಲ; ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲ್ಲಬಹುದಿತ್ತು ಎಂದು ಲೇವಡಿ ಮಾಡಿದರು.

ಅಲ್ಲದೆ, ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಯಲ್ಲಿ ಯಾವ ಜಾತಿಗೆ ಎಷ್ಟು ಪ್ರಮಾಣದ ಮೀಸಲಾತಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಇದೇ ವೇಳೆ ಚರ್ಚ್‌ಗಳ ಮೇಲೆ ನಡೆದಿರುವ ದಾಳಿಗಳನ್ನು ಹೇಯ ಘಟನೆ ಎಂದು ಖಂಡಿಸಿದ ಅವರು, ಇಂತಹ ಕೃತ್ಯವೆಸಗಿದವರ ಮೇಲೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ, ಇತ್ತೀಚೆಗೆ ನಿಧನರಾದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರೊಂದಿಗಿನ ತಮ್ಮ 50 ವರ್ಷಗಳ ಒಡನಾಟವನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page