Thursday, June 20, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಜತೆಗಿನ ಮೈತ್ರಿ ಶಾಶ್ವತವಲ್ಲ: ಕೇಜ್ರಿವಾಲ್

ಹೊಸದಿಲ್ಲಿ, ಮೇ 29: ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಸಂಬಂಧ ಶಾಶ್ವತವಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಈ ಎರಡು ಪಕ್ಷಗಳು ಒಂದಾಗಿವೆ ಎಂದು ಅವರು ತಿಳಿಸಿದರು. ಇಂಗ್ಲಿಷ್ ಟಿವಿ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಜೂನ್ 4ರಂದು ಅಚ್ಚರಿಯ ಫಲಿತಾಂಶ ಬರಲಿದ್ದು, ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಒಟ್ಟಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮತ್ತು ಎಎಪಿ ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.

ಎಎಪಿ ಕಾಂಗ್ರೆಸ್ ಜೊತೆಯಾಗಿರುವುದು ತಾತ್ಕಾಲಿಕ. ಬಿಜೆಪಿಯನ್ನು ಸೋಲಿಸುವುದು, ಪ್ರಸ್ತುತ ಆಡಳಿತಗಾರರ ಸರ್ವಾಧಿಕಾರ ಮತ್ತು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿ. ಈಗ ದೇಶವನ್ನು ಉಳಿಸುವುದು ಮುಖ್ಯ. ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾದ ಕಡೆಗಳಲ್ಲಿ ಎಎಪಿ ಮತ್ತು ಕಾಂಗ್ರೆಸ್ ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಪಂಜಾಬ್‌ನಲ್ಲಿ ಬಿಜೆಪಿಗೆ ನಿಜವಾದ ಅಸ್ತಿತ್ವವೇ ಇಲ್ಲ. ಹೀಗಾಗಿ ಅಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿಲ್ಲ’ ಎಂದು ಮಾತು ಮುಗಿಸಿದರು. ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳನ್ನು ತಮ್ಮ ಪಕ್ಷ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಷ್ಟು ದಿನ ಜೈಲಿನಲ್ಲಿಟ್ಟರೂ ರಾಜೀನಾಮೆ ನೀಡುವುದಿಲ್ಲ

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ‘ನಾನು ಮತ್ತೆ ಜೈಲಿಗೆ ಹೋಗುವುದು ಇಲ್ಲಿ ಮುಖ್ಯವಲ್ಲ. ದೇಶದ ಭವಿಷ್ಯ ಅಪಾಯದಲ್ಲಿದೆ. ನನ್ನನ್ನು ಎಷ್ಟು ದಿನ ಜೈಲಿಗೆ ಹಾಕಿದರೂ ಬಿಡುವುದಿಲ್ಲ. ಬಿಜೆಪಿಗೆ ಬೇಕು ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುವ ಉದ್ದೇಶ ನನಗಿಲ್ಲ. ನಾನು ಜೂನ್ 2ರಂದು ಮತ್ತೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ದೇಶ ಉಳಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂಬ ಹೆಮ್ಮೆ ಇದೆ’ ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ಜೈಲಿಗೆ ಹಾಕಲಾಗುವುದು ಮತ್ತು ನಮ್ಮ ದೇಶದ ರಾಜಕೀಯ ಪರಿಸ್ಥಿತಿ ರಷ್ಯಾದಲ್ಲಿ ಪುಟಿನ್ ಆಡಳಿತದಂತಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದರು. ಜೈಲಿನಲ್ಲಿರುವ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಅವರಿಗೆ ಬಿಜೆಪಿ ಸೇರುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಮತ್ತು ಅವರಿಗೆ ಪ್ರತಿಯಾಗಿ ಜಾಮೀನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

100 ಬಾರಿ ಜೈಲಿಗೆ ಹೋಗುತ್ತೇನೆ.

ದೇಶಕ್ಕಾಗಿ 100 ಬಾರಿ ಜೈಲಿಗೆ ಹೋಗಲು ಸಿದ್ಧ ಎಂದು ಕೇಜ್ರಿವಾಲ್ ಬುಧವಾರ ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ. ತಾನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹಾದಿಯಲ್ಲೇ ಸಾಗುತ್ತಿರುವುದಾಗಿ ತಿಳಿಸಿದರು. ಅವರು (ಬಿಜೆಪಿ) ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳುತ್ತಿರುವ ಅವರ ಬಳಿ ಆ ಕುರಿತು ಒಂದೇ ಒಂದು ಸಾಕ್ಷ್ಯವಿಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್‌ಗೆ ನಿರಾಸೆ

ದೆಹಲಿ ಸಿಎಂ ಕೇಜ್ರಿವಾಲ್‌ಗೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಿರಾಸೆ ಎದುರಾಗಿದೆ. ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು