Friday, June 14, 2024

ಸತ್ಯ | ನ್ಯಾಯ |ಧರ್ಮ

ಪುಣ್ಯಕೋಟಿ ಯೋಜನೆಗೆ ನೌಕರರ ವೇತನಕ್ಕೆ ಅನುಮತಿ: ನೌಕರರಿಂದ ಭಾರೀ ವಿರೋಧ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸರಕಾರಿ ನೌಕರರ ಒಂದು ದಿನದ ವೇತನ ಕೊಡುವುದಕ್ಕೆ ಸರ್ಕಾರಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದೆ. ನೌಕರರ ವೇತನದಿಂದ 100 ಕೋಟಿ ರೂಪಾಯಿಗಳನ್ನು ನವೆಂಬರ್‌ 2022 ರಲ್ಲಿ ಕಟಾವಣೆ ಮಾಡಲು ಮುಖ್ಯಮಂತ್ರಿ ಕೇಳಿದ್ದ ಹಿನ್ನೆಲೆಯಲ್ಲಿ ನೌಕರರ ಸಂಘದ ಅಧ್ಯಕ್ಷರು ಅನುಮತಿ ಪತ್ರ ಕೊಟ್ಟಿರುವುದಕ್ಕೆ ನೌಕರರ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಒಕ್ಕೂಟವು ಕಳಿಸಿರುವ ಪತ್ರದಲ್ಲಿ, ʼಈ ಹಿಂದೆ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ನೌಕರರು ತಮ್ಮ ಒಂದು ದಿನದ ವೇತನ ನೀಡಿ ಸರ್ಕಾರಕ್ಕೆ ಜೊತೆಯಾಗಿದ್ದೇವೆ, ಕೊರೋನಾ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕೊಡಬೇಕಾದ 18ತಿಂಗಳ ತುಟ್ಟಿಭತ್ಯೆ ಮೊತ್ತ ಒಟ್ಟು 4,500ಕೋಟಿ ರೂಪಾಯಿಗಳನ್ನು ತಡೆಹಿಡಿದ ಸರ್ಕಾರ ಈವರೆಗೂ ಅದನ್ನು ನೌಕರರಿಗೆ ಕೊಟ್ಟಿಲ್ಲ. ಆರನೇ ವೇತನ ಅವಧಿ ಮುಗಿದು ನಾಲ್ಕು ತಿಂಗಳೂ ಕಳೆದರೂ ಏಳನೇ ವೇತನ ಆಯೋಗ ರಚಿಸಿರುವುದಿಲ್ಲʼ ಎಂದು ನೌಕರರಲ್ಲಿರುವ ಅಸಮಧಾನ ವ್ಯಕ್ತಪಡಿಸಿದೆ.

ʼಪುಣ್ಯಕೋಟಿ ಯೋಜನೆ ಅಡಿ ಕೇವಲ ಹಸುಗಳನ್ನು ಪೋಷಿಸಲು ಹೊರಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಒಕ್ಕೂಟವು ಇತರ ಪಶುಗಳಿಗೂ ಆಹಾರ ನೀರು ಒದಗಿಸಬೇಕಲ್ಲವೆ? ಪಶು ಸಂಗೋಪನೆ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆ ಖಾಲಿ ಬಿದ್ದಿವೆ. ವೈದ್ಯರುಗಳಿಲ್ಲದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಹಸುಗಳು ಕಾಲುಬಾಯಿ ರೋಗ ಬಂದು ಸಾಯುತ್ತಿವೆ. ಇರುವ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ಖಾಲಿ ಹುದ್ದೆ ಭರ್ತಿ ಮಾಡುವ ಬದಲು ಇರುವ ನೌಕರರ ಸಂಬಳದಲ್ಲಿ ಹಸುಗಳ ಪೋಷಣೆಗೆ ವೇತನ ಕೇಳುವುದು ಯಾವ ನ್ಯಾಯ? ಒಟ್ಟಾರೆ ಪಶು ಸಂಗೋಪನೆಗೆ ಒತ್ತು ಕೊಡದೇ ಕೇವಲ ಹಸುಗಳಿಗೆ ಮಾತ್ರ ಏಕೆ ಈ ಒತ್ತು? ಇದು ಸರ್ಕಾರದ ತಾರತಮ್ಯ ನೀತಿಯಲ್ಲವೇ? ಕೆಲವರಿಗೆ ಹಸು ದೈವವಾದರೆ ಕೆಲವರಿಗೆ ಕೋಣ ದೈವವಾಗಿದೆ, ಇನ್ನೂ ಕೆಲವರಿಗೆ ಹಂದಿ ದೈವವಾಗಿದೆ, ಇದೊಂದು ವೈವಿಧ್ಯಮಯ ರಾಜ್ಯ. ಹೀಗಿರುವಾಗ ಹಸುಗಳನ್ನು ಮಾತ್ರವೇ ಅದೂ ನೌಕರರ ವೇತನದ ಹಣದಲ್ಲಿ ವೈಭವೀಕರಿಸುವುದು ಎಷ್ಟರ ಮಟ್ಟಿಗೆ ಸರಿ?ʼ ಎಂಬ ಪ್ರಶ್ನೆಯನ್ನು ನೌಕರರ ಸಂಘವು ಸರ್ಕಾರಕ್ಕೆ ಕೇಳಿದೆ.

ಸರ್ಕಾರದ ಈ ಯೋಜನೆಗೆ ಇಚ್ಛೆ ಪಡುವ ನೌಕರರು ತಮ್ಮ ಸಂಬಳದಿಂದ ವೇತನ ಕಡಿತ ಮಾಡಲು ಬಟವಾಡೆ ಅಧಿಕಾರಿಗಳಿಗೆ ಒಪ್ಪಿಗೆ ನೀಡಿ ಕಟಾವಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೇ ಹೊರತು, ಒಪ್ಪಿಗೆ ಇಲ್ಲದ ನೌಕರರ ಸಂಬಳದಲ್ಲಿ ಯಾವುದೇ ಕಾರಣಕ್ಕೂ ಕಟಾವಣೆ ಮಾಡಬಾರದು ಎಂದು ಒಕ್ಕೂಟವು ಒತ್ತಾಯಿಸಿರುವುದಲ್ಲದೇ ಒಂದೊಮ್ಮೆ ಹಾಗೆ ಮಾಡಿದರೆ ಅದು ಸಂವಿಧಾನ ದತ್ತ ಆಯ್ಕೆಯ ಹಕ್ಕಿನ ಉಲ್ಲಂಘನೆ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು