Thursday, January 8, 2026

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು – 19 : ಜೋಕಿಮ್ ಮತ್ತು ವಯಲೆಟ್ ಆಳ್ವಾ: ಸಂಸತ್ತಿನಲ್ಲಿ ಚರಿತ್ರೆ ಬರೆದ ದಂಪತಿ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹತ್ತೊಂಬತ್ತನೆಯ ಲೇಖನ

ಜೊತೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ವಕೀಲರಾಗಿ ಕೆಲಸ ಮಾಡಿ, ಪತ್ರಿಕೆಗಳಲ್ಲಿ ಸಂಪಾದಕರಾಗಿ ಮತ್ತು ಕೊನೆಗೆ ಅತ್ಯುತ್ತಮ ಸಂಸದೀಯ ಪಟುಗಳೆಂದು ಸಾಬೀತು ಪಡಿಸಿದವರು ಆಳ್ವಾ ದಂಪತಿಗಳು.

ಜೋಕಿಮ್ ಇಗ್ನೇಷಿಯಸ್ ಸೆಬಾಸ್ಟಿಯನ್ ಆಳ್ವಾ ಮತ್ತು ವಯೋಲೆಟ್ ಹರಿ ಆಳ್ವಾ ಭಾರತದ ಸಂಸತ್ತಿನ ಮೊಟ್ಟ ಮೊದಲ ದಂಪತಿಗಳು. 1952 ರಲ್ಲಿ ವಯಲೆಟ್‌ ರಾಜ್ಯಸಭೆಗೂ ಜೋಕಿಮ್‌ ಲೋಕಸಭೆಗೂ ಆಯ್ಕೆಯಾಗಿದ್ದರು. ಜೊತೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ವಕೀಲರಾಗಿ ಕೆಲಸ ಮಾಡಿ, ಪತ್ರಿಕೆಗಳಲ್ಲಿ ಸಂಪಾದಕರಾಗಿ ಮತ್ತು ಕೊನೆಗೆ ಅತ್ಯುತ್ತಮ ಸಂಸದೀಯ ಪಟುಗಳೆಂದು ಸಾಬೀತು ಪಡಿಸಿದವರು ಆಳ್ವಾ ದಂಪತಿಗಳು.

ಜೋಕಿಮ್ 1907 ಜನವರಿ 21 ರಂದು ಆಗಿನ ಮದರಾಸು ಪ್ರೆಸಿಡೆನ್ಸಿಯ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು. ವಕೀಲರಾಗಿ, ಪತ್ರಕರ್ತರಾಗಿ ಮತ್ತು ರಾಜಕಾರಣಿಯಾಗಿ ಬೆಳೆಯುತ್ತಿದ್ದ ಜೋಕಿಮ್‌ ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖ ಕ್ಯಾಥೋಲಿಕ್‌ ವ್ಯಕ್ತಿಯಾಗಿದ್ದರು.

ವಯಲೆಟ್‌ 1908 ಏಪ್ರಿಲ್‌ 24 ರಂದು ಅಹಮದಾಬಾದ್‌ನಲ್ಲಿ ಜನಿಸಿದರು. ಅವರಿಬ್ಬರೂ ಭೇಟಿಯಾಗುವುದು ಬಾಂಬೆಯ ಸರಕಾರಿ ಕಾನೂನು ಕಾಲೇಜಿನಲ್ಲಿ. 1932 ನವೆಂಬರ್‌ 20 ರಂದು ಅವರ ಮದುವೆಯಾಗುತ್ತಾರೆ. 1969 ರಲ್ಲಿ ವಯಲೆಟ್‌ ನಿಧನರಾಗುವ ತನಕವೂ ಅವರಿಬ್ಬರು ಜೊತೆಯಾಗಿ ಬಾಳಿದರು.

ದೇಶ ಸ್ವತಂತ್ರಗೊಂಡ ನಂತರ 1949 ರಲ್ಲಿ ಜೋಕಿಮ್‌ ಬಾಂಬೆಯ ಶೆರಿಫ್‌ ಆಗಿ ನೇಮಿಸಲ್ಪಡುತ್ತಾರೆ. 1950 ರಲ್ಲಿ ಅವರು ಮಧ್ಯಂತರ ಸರಕಾರದಲ್ಲಿ ಸಂಸದರಾಗಿ ಸಂಸತ್ತಿಗೆ ಪ್ರವೇಶಿಸುತ್ತಾರೆ. 1952, 1957 ಮತ್ತು 1962 ರಲ್ಲಿ ಉತ್ತರ ಕನ್ನಡದಿಂದ ಲೋಕಸಭೆಗೆ ಆಯ್ಕೆಯಾಗುತ್ತಾರೆ. 1968 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಜೋಕಿಮ್ 1974 ರಲ್ಲಿ ನಿವೃತ್ತರಾಗುತ್ತಾರೆ.

ಜೋಕಿಮ್‌ ಉಡುಪಿಯಲ್ಲಿದ್ದ ಮಂಗಳೂರಿನ ಕ್ಯಾಥೋಲಿಕ್‌ ವಂಶವಾದ ಆಲ್ವಾ-ಭಟ್‌ ಸಮುದಾಯಕ್ಕೆ ಸೇರಿದವರು. ಮಂಗಳೂರಿನ ಜೆಸ್ಯೂಟ್‌ ಅಲೋಶಿಯಸ್‌ ಕಾಲೇಜ್‌, ಎಲ್ಫಿನ್ಸ್‌ಟನ್‌ ಕಾಲೇಜ್‌, ಮುಂಬೈಯ ಸರಕಾರಿ ಕಾನೂನು ಕಾಲೇಜ್‌ ಮತ್ತು ಸೇಂಟ್‌ ಕ್ಸೇವಿಯರ್ಸ್‌ ಕಾಲೇಜುಗಳಲ್ಲಿ ಅವರು ಶಿಕ್ಷಣ ಪಡೆದಿದ್ದರು.

1928 ರಲ್ಲಿ ಜೋಕಿಮ್‌ ಮುಂಬೈನ ಸುಮಾರು ಐವತ್ತು ವರ್ಷಗಳ ಇತಿಹಾಸವಿದ್ದ ಬಾಂಬೆ ಸ್ಟೂಡೆಂಟ್ಸ್‌ ಬ್ರದರ್‌ಹುಡ್‌ನ ಕಾರ್ಯದರ್ಶಿಯಾದ ಮೊಟ್ಟ ಮೊದಲ ಕ್ರಿಶ್ಚಿಯನ್‌ ವ್ಯಕ್ತಿಯಾಗಿದ್ದರು. ಖುರ್ಷಿದ್ ನಾರಿಮನ್, ಎಚ್‌.ಡಿ. ರಾಜಾ, ಯೂಸುಫ್ ಮೆಹರಾಲಿ ಮತ್ತು ಸೋಲಿ ಬಾಟ್ಲಿವಾಲಾ ಅವರುಗಳ ಜೊತೆಗೆ ಬಾಂಬೆ ಯೂತ್ ಲೀಗ್‌ನ ಮುಂಚೂಣಿಯಲ್ಲಿದ್ದರು.

1930 ರ ಹೊತ್ತಿಗೆ ಕ್ರೈಸ್ತ ಸಮುದಾಯವನ್ನು ಸ್ವಾತಂತ್ರ್ಯ ಸಮರಕ್ಕೆ ಸೆಳೆಯಲೆಂದು ನ್ಯಾಷನಲಿಸ್ಟ್‌ ಕ್ರಿಶ್ಚಿಯನ್‌ ಪಾರ್ಟಿ ಎಂಬ ಪಕ್ಷವನ್ನು ಜೋಕಿಮ್‌ ಸ್ಥಾಪಿಸಿದ್ದರು. ತನ್ನ ಕಾಲೇಜು ಶಿಕ್ಷಣಕ್ಕೆ ಬೇಕಾದ ಹಣವನ್ನು ಸಾಲ ಪಡೆಯುವ ಮತ್ತು ಸ್ವತಃ ಕೆಲಸ ಮಾಡುವ ಮೂಲಕ ಸಂಪಾದಿಸಿಕೊಳ್ಳುತ್ತಿದ್ದರು. ಆದರೆ, ಕ್ಯಾಥೋಲಿಕ್‌ ವಿದ್ಯಾರ್ಥಿ ಒಕ್ಕೂಟದಲ್ಲಿ ಕ್ಯಾಥೋಲಿಕ್‌ ಅಲ್ಲದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕೆಂಬ ನಿರ್ಣಯವನ್ನು ಅವರು ಮಂಡಿಸಿದಾಗ ಅವರನ್ನು ಅಲ್ಲಿಂದ ಹೊರ ಹಾಕಲಾಗುತ್ತದೆ. 1937 ರಲ್ಲಿ ಜವಹರಲಾಲ್‌ ನೆಹರೂ ಮಾತನಾಡಿದ್ದ ಕ್ರೈಸ್ತರ ದೊಡ್ಡ ಸಭೆಯೊಂದರ ಅಧ್ಯಕ್ಷತೆಯನ್ನು ಅವರು ವಹಿಸಿಕೊಂಡಿದ್ದರು. ಯುವ ಬುದ್ದಿಜೀವಿಯೆಂದು ಗುರುತಿಸಿಕೊಂಡಿದ್ದ ಜೋಕಿಮ್‌ ಆ ಸಭೆಯ ಮತ್ತೊಬ್ಬ ಪ್ರಖರ ಭಾಷಣಗಾರರಾಗಿದ್ದರು. 1927 ರಲ್ಲಿ ಅವರು ಸೇಂಟ್‌ ಕ್ಸೇವಿಯರ್ಸ್‌ ಕಾಲೇಜಿನಲ್ಲಿ ಅತ್ಯುತ್ತಮ ಭಾಷಣಗಾರನೆಂದು ಹೆಸರು ಗಳಿಸಿದ್ದರು. 1934 ರಲ್ಲಿ ಬನಾರಸ್‌ ವಿಶ್ವವಿದ್ಯಾಲಯಯದಲ್ಲಿ ನಡೆದ ಅಖಿಲ ಭಾರತ ಅಂತರ್‌ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನೂ ಪಡೆದುಕೊಂಡಿದ್ದರು.

ಬರ್ದೋಳಿ ಸತ್ಯಾಗ್ರಹದಲ್ಲಿ ತೆರಿಗೆ ವಿರುದ್ಧ ಅಭಿಯಾನ, ಸೈಮನ್‌ ಆಯೋಗ ಮತ್ತು ಬಾಂಬೆ ಕಾಂಗ್ರೆಸ್ಸಿನ ವಾರ್‌ ಕೌನ್ಸಿಲ್‌ ಅಧ್ಯಕ್ಷರ ವಿರುದ್ಧದ ಅಭಿಯಾನಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

ದೇಶದ್ರೋಹದ ಆರೋಪದ ಮೇಲೆ ಬ್ರಿಟಿಷ್‌ ಅಧಿಕಾರಿಗಳಿಂದ ಎರಡು ಬಾರಿ ಬಂಧನಕ್ಕೊಳಗಾಗಿದ್ದ ಜೋಕಿಮ್‌ ಒಟ್ಟು ಮೂರು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ವಲ್ಲಭಭಾಯಿ ಪಟೇಲ್, ಜಯಪ್ರಕಾಶ್‌ ನಾರಾಯಣ್‌, ಮೊರಾರ್ಜಿ ದೇಸಾಯಿ ಮತ್ತು ಜೆ.ಸಿ. ಕುಮಾರಪ್ಪ ಮೊದಲಾದವರೊಂದಿಗೆ ಜೈಲುವಾಸ ಅನುಭವಿಸಿದ್ದರು.

1934 ರಲ್ಲಿ ಮಹಾತ್ಮಾ ಗಾಂಧಿ ಜೋಕಿಮ್‌ ಅವರಿಗೆ ಪತ್ರ ಬರೆಯುತ್ತಾರೆ. ಯೆರವಾಡ ಜೈಲಿನಲ್ಲಿ ಬೇಗನೇ ಬಿಡುಗಡೆಗೊಂಡ ಕಾರಣ ತಮ್ಮನ್ನು ಮಿಸ್‌ ಮಾಡುತ್ತಿದ್ದೇನೆ ಎಂದೂ, ಅವರೊಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಎಂದೂ ಗಾಂಧಿ ಬರೆಯುತ್ತಾರೆ.

1941 ರಲ್ಲಿ ನಾಸಿಕ್‌ ಜೈಲಿನಲ್ಲಿದ್ದ ಜೋಕಿಮ್‌ ಎರಡು ಪುಸ್ತಕಗಳನ್ನು ಬರೆಯುತ್ತಾರೆ. ಮೆನ್‌ ಆಂಡ್‌ ಸೂಪರ್‌ ಮೆನ್‌ ಆಫ್‌ ಹಿಂದೂಸ್ತಾನ್‌ ಮತ್ತು ಇಂಡಿಯನ್‌ ಕ್ರಿಶ್ಚಿಯನ್ಸ್‌ ಆಂಡ್‌ ನ್ಯಾಷನಲಿಸಂ. ಆದರೆ, ಎರಡೂ ಹಸ್ತಪ್ರತಿಗಳನ್ನು ಜೈಲಧಿಕಾರಿಗಳು ಮುಟ್ಟುಗೋಲು ಹಾಕುತ್ತಾರೆ. ಮೆನ್‌ ಆಂಡ್‌ ಸೂಪರ್‌ ಮೆನ್‌ ಆಫ್‌ ಹಿಂದೂಸ್ತಾನ್‌ ಪುಸ್ತಕವನ್ನು ಪರಿಷ್ಕರಿಸಿ 1943 ರಲ್ಲಿ ಪ್ರಕಟಿಸಲಾಗುತ್ತದೆ.

ಪ್ಲಾನಿಂಗ್‌, ಸಾರ್ವಜನಿಕ ವಲಯ, ರಾಷ್ಟ್ರೀಕೃತ ಬ್ಯಾಂಕಿಂಗ್‌ ಮತ್ತು ಪ್ರಮುಖ ಕೈಗಾರಿಕೆಗಳ ಉದ್ದಿಮೆಗಳ ಸರಕಾರಿ ಸ್ವಾಮ್ಯ ಮೊದಲಾದ ವಿಷಯಗಳನ್ನು ಪ್ರತಿಪಾದಿಸುತ್ತಿದ್ದ ಆರಂಭಿಕ ನಾಯಕರಲ್ಲಿ ಜೋಕಿಮ್‌ ಒಬ್ಬರಾಗಿದ್ದರು. ಫ್ರಾನ್ಸ್‌ ನಡೆಸಿದ ಇಂಡೋ–ಚೀನಾ ಬಾಂಬ್‌ ದಾಳಿಯನ್ನು ಬಲವಾಗಿ ಖಂಡಿಸಿದ್ದ ಅವರು ವಿಯಟ್ನಾಮ್‌ ಜನರ ಗುರಿಗಳನ್ನು ಗಟ್ಟಿಯಾಗಿ ಬೆಂಬಲಿಸಿದ್ದರು. ಚೀನಾದೊಂದಿಗೆ ನಿಕಟ ಸಂಬಂಧ ಹೊಂದಲೆಂದು 1962 ರಲ್ಲಿ ಭಾರತದ ಪ್ರಯತ್ನಗಳನ್ನು ಮುನ್ನಡೆಸಿದ್ದರು. ಬೀಜಿಂಗ್‌ನಲ್ಲಿ ಮಾವೋ ಜೆಡಾಂಗ್‌ ಮತ್ತು ಜೌ ಎನ್ಲಾಯ್‌ ಅವರನ್ನು ಭೇಟಿಯಾಗಿದ್ದರು. 1979 ಜೂನ್‌ 28 ರಂದು ತನ್ನ 72 ನೇ ವಯಸ್ಸಿನಲ್ಲಿ ಜೋಕಿಮ್‌ ನಿಧನರಾಗುತ್ತಾರೆ.

ಅಹ್ಮದಾಬಾದಿನ ಗುಜರಾತಿ ಪ್ರೊಟೆಸ್ಟೆಂಟ್‌ ಆಗಿದ್ದ, ಸೇಂಟ್‌ ಕ್ಸೇವಿಯರ್ಸ್‌ ಇಂಡಿಯನ್‌ ವುಮೆನ್ಸ್ ಯೂನಿವರ್ಸಿಟಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದ ವಯಲೆಟ್ ಅವರನ್ನು 1937 ರಲ್ಲಿ ಜೋಕಿಮ್‌ ಆಳ್ವಾ ವಿವಾಹವಾಗಿದ್ದರು. ವಯಲೆಟ್‌ ಕೂಡ ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. 1943 ರಲ್ಲಿ ಅವರನ್ನು ಬ್ರಿಟಿಷ್‌ ಇಂಡಿಯನ್‌ ಅಧಿಕಾರಿಗಳು ಬಂಧಿಸುತ್ತಾರೆ. ತನ್ನ ಐದು ತಿಂಗಳ ಮಗು ಚಿತ್ತರಂಜನ್‌ ಜೊತೆ ಆರ್ಥರ್‌ ರೋಡ್‌ ಜೈಲಿನಲ್ಲಿ ಅವರನ್ನು ಬಂಧಿಸಿಡಲಾಗಿತ್ತು.

24 ಏಪ್ರಿಲ್‌ 1908 ರಂದು ಅಹ್ಮದಾಬಾದಿನಲ್ಲಿ ವಯಲೆಟ್‌ ಹರಿ ಅವರ ಜನನ. ಒಟ್ಟು ಒಂಭತ್ತು ಒಡಹುಟ್ಟಿದವರಲ್ಲಿ ಎಂಟನೆಯವರು. ಅವರ ತಂದೆ ರೆವರೆಂಡ್‌ ಲಕ್ಷ್ಮಣ್‌ ಹರಿ, ಚರ್ಚ್‌ ಆಫ್‌ ಇಂಗ್ಲೆಂಡ್‌ನ ಭಾರತೀಯ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದರು. ಬಾಂಬೆಯ ಸೇಂಟ್‌ ಕ್ಸೇವಿಯರ್ಸ್‌ ಮತ್ತು ಸರಕಾರಿ ಕಾನೂನು ಕಾಲೇಜುಗಳಲ್ಲಿ ಪದವಿ ತನಕ ಕಲಿಯುತ್ತಾರೆ. ಕಲಿಕೆಯ ನಂತರ ಅವರು ಕೆಲಕಾಲ ಬಾಂಬೆಯ ಇಂಡಿಯನ್‌ ವುಮೆನ್ಸ್‌ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.

ಆಗಸ್ಟ್ 9, 1943 ರಂದು, ಕ್ವಿಟ್‌ ಇಂಡಿಯಾ ಹೋರಾಟದ ವಾರ್ಷಿಕ ದಿನದಂದು ಜೋಕಿಮ್‌ ಮತ್ತು ವಯಲೆಟ್‌ ಸೇರಿಕೊಂಡು ಫೋರಮ್‌ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಇದು ನಂತರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಯಾಗಿತ್ತು. ದೇಶಪ್ರೇಮಿ ಭಾರತೀಯರು ನಿರ್ಭಯವಾಗಿ ಬರೆಯಲು ಮತ್ತು ಬ್ರಿಟಿಷ್‌ ಆಡಳಿತದಡಿಯಲ್ಲಿ ಭಾರತೀಯ ದೃಷ್ಟಿಕೋನಗಳಿಗೆ ಸಶಕ್ತವಾದ ವೇದಿಕೆಯಾಗಿ ಈ ಪತ್ರಿಕೆ ಬದಲಾಯಿತು.

ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದ ಫೋರಮ್‌, ರಾಜಕೀಯ ಸುದ್ದಿಗಳ ವಾರಪತ್ರಿಕೆ ಎಂಬ ಹೊಸ ದನಿಗೂ ಕಾರಣವಾಯಿತು. ಜೋಕಿಮ್‌ ಅವರ ಕಛೇರಿ ಮೇಲೆ ಆಗಾಗ ದೇಶದ್ರೋಹದ ಆರೋಪಗಳೊಂದಿಗೆ ದಾಳಿಗಳು ನಡೆಯುತ್ತಲೇ ಇದ್ದವು. ಬ್ರಿಟಿಷ್‌ ಸರಕಾರ ಹೊಂದಿದ್ದ ಅಪರಿಮಿತ ಅಧಿಕಾರ ದರ್ಪಗಳ ಹೊರತಾಗಿಯೂ ಅವರು “ಹಾಲ್ಟ್‌ ದಿಸ್‌ ಮಾರ್ಚ್‌ ಟು ದ ಗ್ಯಾಲೋಸ್”‌ (ಗಲ್ಲುಗಂಬದೆಡೆಗಿನ ಮೆರವಣಿಗೆಯನ್ನು ನಿಲ್ಲಿಸಿ) ಎಂಬ ಐತಿಹಾಸಿಕ ಸಂಪಾದಕೀಯವನ್ನು ಬರೆದರು.

1944 ರಲ್ಲಿ ವಯಲೆಟ್‌ ದಿ ಬೇಗಂ ಎಂಬ ಮಹಿಳಾ ನಿಯತಕಾಲಿಕೆಯನ್ನು ಆರಂಭಿಸಿದ್ದರು. ನಂತರದಲ್ಲಿ ಅದನ್ನು ಇಂಡಿಯನ್‌ ವುಮೆನ್‌ ಎಂದು ಮರುನಾಮಕರಣ ಮಾಡುತ್ತಾರೆ. 1945 ರಿಂದ 1953 ರವರೆಗೆ ಅವರು ಮುಂಬೈಯ ಅಗ್ರಿಪಾರ ರೆಹವಾಸಿ ಸೇವಾ ಮಂಡಲ್‌ ಸಂಘಟನೆಯ ಕಾರ್ಯದರ್ಶಿಯಾಗಿದ್ದರು. 1946-47 ರಲ್ಲಿ ಅವರು ಬಾಂಬೆ ಮುನಿಸಿಪಲ್‌ ಕೌನ್ಸಿಲ್‌ ಡೆಪ್ಯುಟಿ ಚೇರ್‌ ಪರ್ಸನ್‌ ಆಗಿದ್ದರು. 1944 ರಲ್ಲಿ ಹೈಕೋರ್ಟಿನ ಪೂರ್ಣಪೀಠದ ಎದುರು ಪ್ರಕರಣವನ್ನು ವಾದಿಸಿದ ಭಾರತದ ಮೊದಲ ಮಹಿಳಾ ವಕೀಲರಾಗಿದ್ದರು. 1947 ರಲ್ಲಿ ಮುಂಬೈಯಲ್ಲಿ ಗೌರವ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ವಯಲೆಟ್‌, 1948 ರಿಂದ 1954 ರವರೆಗೆ ಬಾಲಾಪರಾಧ ನ್ಯಾಯಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಯಂಗ್‌ ವುಮೆನ್ಸ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌, ದಿ ಬಿಸಿನೆಸ್‌ ಆಂಡ್‌ ಪ್ರೊಫೆಷನಲ್‌ ವುಮೆನ್ಸ್‌ ಅಸೋಸಿಯೇಷನ್‌ ಮತ್ತು ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ವುಮೆನ್‌ ಲಾಯೆರ್ಸ್‌ ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಸುದ್ದಿ ಪತ್ರಿಕೆಗಳ ಸಂಪಾದಕರ ಸ್ಥಾಯಿ ಸಮಿತಿಗೆ ಆಯ್ಕೆಯಾದ ಮೊಟ್ಟ ಮೊದಲ ಮಹಿಳೆ ಕೂಡ ಅವರಾಗಿದ್ದರು.

1952 ರಲ್ಲಿ ವಯಲೆಟ್‌ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಅಲ್ಲಿ ಅವರು ಕುಟುಂಬ ಯೋಜನೆ, ಸಂಶೋಧನೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪ್ರಾಣಿಗಳ ಹಕ್ಕುಗಳು, ಅದರಲ್ಲೂ ಮುಖ್ಯವಾಗಿ ನೌಕಾ ವಲಯದಲ್ಲಿನ ಪ್ರಾಣಿಗಳ ಹಕ್ಕುಗಳ ವಿಷಯದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದರು.

ವಿದೇಶಿ ಬಂಡವಾಳದ ವಿಷಯದಲ್ಲಿ ಅವರು ಸರಕಾರವನ್ನು ಎಚ್ಚರಿಸುತ್ತಲೇ ಇದ್ದರು. ಭಾಷಾವಾರು ರಾಜ್ಯಗಳ ವಿಷಯದಲ್ಲಿ ಬೆಂಬಲವನ್ನೂ ನೀಡಿದ್ದರು. 1957 ರಿಂದ 1962 ರವರೆಗೆ ಜವಹರಲಾಲ್‌ ನೆಹರೂ ಅವರು ಪ್ರಧಾನಂತ್ರಿಯಾಗಿದ್ದ ಅವಧಿಯಲ್ಲಿ ಗೃಹ ವ್ಯವಹಾರಗಳ ಉಪಸಚಿವರಾಗಿದ್ದರು.

1962 ರಲ್ಲಿ ವಯಲೆಟ್‌ ಅವರು ರಾಜ್ಯಸಭೆಯ ಉಪಸಭಾಪತಿಯಾಗುವ ಮೂಲಕ ರಾಜ್ಯಸಭೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಸಭಾಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸತತ ಎರಡು ಅವಧಿಗೆ ಅವರು ರಾಜ್ಯಸಭೆಯ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಮೊದಲ ಅವಧಿ ಏಪ್ರಿಲ್‌ 19, 1942 ರಿಂದ ಏಪ್ರಿಲ್‌ 2, 1966 ರವರೆಗೆ. ಎರಡನೆಯ ಅವಧಿ ಏಪ್ರಿಲ್‌ 7, 1966 ರಿಂದ ನವೆಂಬರ್‌ 16, 1969 ರವರೆಗೆ. ಇಂದಿರಾಗಾಂಧಿಯವರು 1969 ರಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ತನಗೆ ಬೆಂಬಲ ನೀಡಲು ನಿರಾಕರಿಸಿದ ಕಾರಣದಿಂದ ಅವರು ರಾಜೀನಾಮೆ ನೀಡಿದ್ದರು.

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಐದು ದನಗಳಲ್ಲಿ, 20 ನವೆಂಬರ್‌ 1969 ರಂದು ನವದೆಹಲಿಯ ತಮ್ಮ ನಿವಾಸದಲ್ಲಿ ಮೆದುಳಿನ ರಕ್ತಸ್ರಾವದಿಂದ ವಯಲೆಟ್‌ ನಿಧನರಾಗುತ್ತಾರೆ. ವಯಲೆಟ್‌ ಅವರ ನಿಧನದ ನಂತರ, ಅವರ ಗೌರವಾರ್ಥವಾಗಿ ಸಂಸತ್ತಿನ ಎರಡೂ ಸದನಗಳನ್ನು ಕೆಲದಿನಗಳ ತನಕ ಮುಂದೂಡಲಾಗಿತ್ತು.

ಜೋಕಿಮ್‌ ಮತ್ತು ವಯಲೆಟ್‌ ದಂಪತಿಗಳು ಬರ್ಮಾದ ರಾಷ್ಟ್ರೀಯವಾದಿಯಾಗಿದ್ದ ಜನರಲ್‌ ಆಂಗ್‌ ಸಾನ್‌ ಅವರ ಪತ್ನಿ, 1960 ರಿಂದ ಭಾರತಕ್ಕೆ ಬರ್ಮಾದ ರಾಯಭಾರಿಯಾಗಿದ್ದ ಖಿನ್‌ ಕೀ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು.

ಭಾರತತೀಯ ಸಂಸತ್ತಿನ ಮೊಟ್ಟ ಮೊದಲ ದಂಪತಿಗಳಾದ ಜೋಕಿಮ್‌ ಮತ್ತು ವಯಲೆಟ್‌ ಆಳ್ವಾ ಅವರ ಭಾವಚಿತ್ರವನ್ನು 2007 ರಲ್ಲಿ ಸಂಸತ್ತಿನಲ್ಲಿ ಅನಾವರಣಗೊಳಿಸಲಾಯಿತು. 2008 ರಲ್ಲಿ ವಯಲೆಟ್‌ ಆಳ್ವಾ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಈ ದಂಪತಿಗಳ ಸ್ಮರಣಾರ್ಥ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರು ನವದೆಹಲಿಯಲ್ಲಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.

ಜೋಕಿಮ್‌ ಮತ್ತು ವಯಲೆಟ್‌ ದಂಪತಿಗಳಿಗೆ ಇಬ್ಬರು ಪುತ್ರರು ಮತ್ತು ಒಬ್ಬಳು ಪುತ್ರಿ. ನಿರಂಜನ್‌, ಚಿತ್ತರಂಜನ್ ಮತ್ತು ಮಾಯಾ. ನಿರಂಜನ್‌ ಅವರು ಮಾರ್ಗರೆಟ್‌ ಆಳ್ವಾರನ್ನು ವಿವಾಹವಾಗಿದ್ದರು. ಮಾರ್ಗರೇಟ್‌ ಆಳ್ವಾ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವೆ ಹಾಗೂ ಉತ್ತರಾಖಂಡ ಮತ್ತು ರಾಜಸ್ಥಾನಗಳ ರಾಜ್ಯಪಾಲೆ ಆಗಿಯೂ ಸೇವೆ ಸಲ್ಲಿಸಿದವರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page