Wednesday, August 14, 2024

ಸತ್ಯ | ನ್ಯಾಯ |ಧರ್ಮ

ಅಂಬಾನಿ ಕುಟುಂಬದ ಸಮಾರಂಭ: ನಿಯಮ ಮೀರಿ ಜಾಮ್‌ನಗರದ ವಾಯುನೆಲೆಗೆ ಅಂ.ರಾ ವಿಮಾನ ನಿಲ್ದಾಣ ಸ್ಥಾನಮಾನ

ಜಾಮ್‌ನಗರ:  ಊದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬದ ಸಮಾರಂಭದ ಸಲುವಾಗಿ ಗುಜರಾತ್‌ನ ಜಾಮ್‌ನಗರದಲ್ಲಿರುವ ವಿಮಾನ ನಿಲ್ದಾಣವನ್ನು ನಿಯಮ ಮೀರಿ 10 ದಿನಗಳ ಕಾಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಅಂತರಾಷ್ಟ್ರೀಯ ಸ್ಥಾನಮಾನಕ್ಕೆ ಏರಿಸಲು ಪಾಲಿಸಲಾಗಿರುವ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ಭಾರತೀಯ ವಾಯುಸೇನೆಯ ಕಾರ್ಯಾಚರಣೆ ನೆಲೆಯಾಗಿದ್ದ ಜಾಮ್‌ನಗರದ ದೇಶೀಯ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ವಹಿಸುವುದಕ್ಕಾಗಿ ಫೆಬ್ರುವರಿ 25ರಿಂದ ಮಾರ್ಚ್‌ 5ರ ವರೆಗೆ ಮೇಲ್ದರ್ಜೆಗೇರಿಸಲಾಗಿತ್ತು. ಸರಾಸರಿ 5 ವಿಮಾನಗಳ ಸಂಚಾರ ಇರುವ ಇಲ್ಲಿ, ಮಾರ್ಚ್‌ 1ರಂದು ಬರೋಬ್ಬರಿ 70 ವಿಮಾನಗಳು ಹಾರಾಟ ನಡೆಸಿದ್ದವು.

ಮುಕೇಶ್ ಅಂಬಾನಿ ಅವರ ಮಗನ ವಿವಾಹ ಪೂರ್ವ ಸಮಾರಂಭಕ್ಕೆ ಅತಿಥಿಗಳು ಆಗಮಿಸಲು ನೆರವಾಗುವುದಕ್ಕಾಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ‘ಯಾವ ಮಾನದಂಡದ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕು’ ಎಂದು ಕೋರಿ ಟಿ.ನರಸಿಂಹ ಮೂರ್ತಿ ಎಂಬವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಡಿಜಿಸಿಎಗೆ ದೂರಿನ ಅರ್ಜಿ  ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಡಿಜಿಸಿಎ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನರಸಿಂಹ ಮೂರ್ತಿ, ‘ಡಿಜಿಸಿಎ ಪ್ರತಿಕ್ರಿಯೆಯು ತೀವ್ರ ಕಳವಳಕಾರಿಯಾಗಿದೆ. ಪಾಕಿಸ್ತಾನ ಗಡಿ ಸಮೀಪದಲ್ಲಿರುವ ಹಾಗೂ ಸೇನೆಯ ವಾಯು ನೆಲೆಯಾಗಿದ್ದ ವಿಮಾನ ನಿಲ್ದಾಣಕ್ಕೆ ಹೇಗೆ ಇಂತಹ ಸ್ಥಾನಮಾನ ನೀಡಲಾಗಿದೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಇದೆ. ದೇಶದ ಎಲ್ಲ ಜನರೂ ತಮ್ಮ ಕುಟುಂಬಗಳ ವ್ಯವಹಾರಗಳಿಗೂ ಇದೇ ರೀತಿಯ ವಿಶೇಷ ಅನುಮತಿಗಳನ್ನು ಪಡೆಯಲು ಸಾಧ್ಯವೇ? ಡಿಜಿಸಿಎ ನೀಡಿರುವ ಉತ್ತರದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page