Saturday, June 15, 2024

ಸತ್ಯ | ನ್ಯಾಯ |ಧರ್ಮ

ಅಂಬೇಡ್ಕರ್‌ ಜಯಂತಿ | ಮಾನವತಾವಾದಿ ಅಂಬೇಡ್ಕರ್

ಅಂಬೇಡ್ಕರ್ ಯಾವಾಗಲೂ ಗ್ರಂಥಾಲಯದಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಪುಸ್ತಕಗಳು ದೂರ ಮಾಡುವುದಿಲ್ಲ, ಮುಟ್ಟಿದರೂ ಏನು ಹೇಳುವುದಿಲ್ಲ. ಆದ್ದರಿಂದ ಅವೇ ಅವರಿಗೆ ಜೀವನದ ಶಾಶ್ವತ ಗೆಳೆಯರಾದರು. ಇದು ಆಯೇಶಾ ಝಬಿಯವರ, ಅಂಬೇಡ್ಕರ್‌ ಜಯಂತಿಯ ವಿಶೇಷ ಲೇಖನ.  

ಈ ಭೂಗೋಳ ಒಂದು ಸೃಷ್ಟಿಯಾದರೆ….. ಅದರ ಮೇಲೆ ಜೀವಿಸುತ್ತಿರುವ ಮಾನವನು ಆ ಸೃಷ್ಟಿಯಲ್ಲಿನ ಒಂದು ಅತ್ಯುತ್ತಮ ಭಾಗ. ಉತ್ತಮ… ಮಧ್ಯಮ….ಅಧಮ ಎನ್ನುತ ಮನುಷ್ಯರ ಮಧ್ಯ ವಿಭಜನೆ ಕೂಡದು. ಎರಡು ಗ್ಲಾಸುಗಳ ಪದ್ಧತಿ ಸಲ್ಲದು. ಭಾವಿ ಭಾರತದಲ್ಲಿ ಬಾವಿ ಮೇಲೆ ಕೆಲವರಿಗೆ ಹಕ್ಕುಗಳು ಅನ್ವಯವಾಗದು. ಗುಡಿ ಶಾಲೆಯಲ್ಲಿ ‘ನೋ ಎಂಟ್ರಿ’ ಬೋರ್ಡ್ ಗಳು ಸಲ್ಲದು. ಹೀಗೆ ಸಲ್ಲದ ವಿಷಯಗಳಿಗೆ ಧಿಕ್ಕಾರ ಬರೆದ ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್  ಅಂಬೇಡ್ಕರ್.

 ಹುಟ್ಟು ಎಂಬುದು ಮನುಷ್ಯನ ಅವಕಾಶಗಳು, ಗೌರವ, ಅಸ್ತಿತ್ವವನ್ನು ತಡೆಯಬಾರದು, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಪ್ರತಿ ಭಾರತೀಯನ ಪ್ರಥಮ ಹಕ್ಕು ಆಗಿರಬೇಕು ಎಂದು ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ತನಗೆ ಸೋದರ ಸಮಾನರು ಎಂಬ ಭಾವನೆ ಹೊಂದಿರುವುದೇ ಸೋದರತ್ವ. ಜಾತಿ ವಿಭಜನೆಯಿಂದ ಅದು ನಮ್ಮಲ್ಲಿ ಇಲ್ಲದ ಹಾಗಾಯಿತು. ಸೋದರತ್ವಕ್ಕೆ ಮತ್ತೊಂದು ಹೆಸರು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತಕ್ಕೆ ಸಂಬಂಧಿಸಿದ ವಿಧಾನ ಮಾತ್ರವಲ್ಲ; ಪ್ರಜಾಸತ್ತೆ  ಜನರ ಜೀವನದ ಭಾಗವಾಗಿರಬೇಕು; ಎಲ್ಲರೂ ಸಮಾನರೆಂಬ ಭಾವನೆ ಹೊಂದಿರಬೇಕು. ಒಂದು ರೀತಿಯಲ್ಲಿ ಇದು ಮಾನಸಿಕವಾದದ್ದು. ದೈಹಿಕವಾಗಿ ಇದನ್ನು ನಿರ್ಮೂಲನೆ ಮಾಡಲಾರೆವು. ಅದಕ್ಕಾಗಿ ಅಂಬೇಡ್ಕರ್ ಸೋದರತ್ವವನ್ನು ಸಾಧಿಸಲು ಜಾತಿ ನಿರ್ಮೂಲನೆಗೆ ಪಣತೊಟ್ಟಿದ್ದರು.

 ಅಂಬೇಡ್ಕರ್ ರವರ ಜೀವನದಲ್ಲಿ ಜರುಗಿದ ಮೂರು ಅವಮಾನಗಳು ಅವರನ್ನು ಅಸಮಾನತ್ವದಿಂದ ಸಮಾನತ್ವದೆಡೆಗೆ ಕೊಂಡೊಯ್ದಿತೆಂದು ಚರಿತ್ರೆ ಹೇಳುತ್ತದೆ.

* ಅಂಬೇಡ್ಕರ್ ಅದೊಂದು ದಿನ ತನ್ನ ಸಹೋದರನೊಂದಿಗೆ ಬಹಳ ದೂರದಲ್ಲಿರುವ ಊರಿನತ್ತ ಪ್ರಯಾಣಿಸಬೇಕಾಯಿತು. ಮಧ್ಯದಲ್ಲಿ ಅಂಬೇಡ್ಕರ್ ಗೆ ವಿಪರೀತ ನೀರಿನ ದಾಹ ಉಂಟಾಯಿತು ಅಲ್ಲಿಯೆ ದೂರದಲ್ಲಿ ಅವರಿಗೆ ಮನೆಯೊಂದು ಕಂಡು ಬಂತು. ಎಲ್ಲಿಲ್ಲದ ಸಂತೋಷ. ಅಲ್ಲಿಗೆ ಹೋಗಿ ಆ ಮನೆಯವರನ್ನು ಕುಡಿಯಲು ನೀರು ಕೊಡಿ ಎಂದು ಕೋರಿದರು ಅಂಬೇಡ್ಕರ್. ಮನೆಯ ಯಜಮಾನ ನಿನ್ನದು ಯಾವ ಜಾತಿ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ತನ್ನ ಜಾತಿ ಹೇಳಿದ ಕ್ಷಣ ಆತನು ಕೋಪ ಹಾಗೂ ತಿರಸ್ಕಾರದಿಂದ ದೂರದಲ್ಲಿರುವ ಹೊಲಸು ನೀರಿನ ಗುಂಡಿ ತೋರಿಸಿ ಅಲ್ಲಿರುವ ನೀರು ಕುಡಿ ಅಂದರು. ಅಲ್ಲಿಯವರೆಗೂ ನೀರಿಗೆ ಬಣ್ಣ ಇರುವುದಿಲ್ಲವೆಂದು ತಿಳಿದಿದ್ದ ಅಂಬೇಡ್ಕರ್ ಅವರಿಗೆ ನೀರಿಗೂ ಜಾತಿ ಬಣ್ಣವಿದೆ ಎಂದು ಅಂದೇ ಸ್ಪಷ್ಟವಾಗಿ ತಿಳಿದು ಬಂದಿತು.

* ಒಂದು ದಿನ ಅಂಬೇಡ್ಕರ್ ಬಿರುಬೇಸಿಗೆಯಲ್ಲಿ ಅವರ ಅಣ್ಣನೊಂದಿಗೆ ಕೋರೆಗಾಂವ್‌ನಲ್ಲಿರುವ ತಮ್ಮ ತಂದೆ ಬಳಿಗೆ ಹೊರಟರು. ಕೋರೆಗಾಂವ್ ಸ್ಟೇಷನ್ ಗೆ ಹೋದ ಮೇಲೆ ಮನೆ ತಲುಪಲು ಎತ್ತಿನ  ಗಾಡಿಯೊಂದಿಗೆ ಮಾತನಾಡಿ ಹೊರಟರು. ಗಾಡಿಸ್ವಲ್ಪ ದೂರ ಹೋಗುತ್ತಿದ್ದಂತೆ ಗಾಡಿಯವನಿಗೆ ಇವರು ಅಸ್ಪೃಶ್ಯರೆಂದು ತಿಳಿಯಿತು. ತಕ್ಷಣ ತನ್ನ ಗಾಡಿಯನ್ನು ನಿಲ್ಲಿಸಿ ನೀವು ಇಳಿಯಿರಿ ಎಂದು ಜೋರು ಮಾಡಿದ. ಅವರ ಸಾಮಾನುಗಳನ್ನು ಕೆಳಗೆ ಹಾಕಿದ. ಗಾಡಿ ಎತ್ತುಗಳಿಗೆ ಮೈಲಿಗೆ ಆಗಿದೆ ನೀವು ಕೂಡಬೇಡಿ ಇಳಿಯಿರಿ ಎಂದು ಅಬ್ಬರಿಸಿದ. ಆಗ ಅವರು ತುಂಬಾ ಬಳಲಿದ್ದರು ಗಾಡಿಯವನ ಬೈಗುಳ ಜೀರ್ಣಿಸಿಕೊಳ್ಳುತ್ತಲೇ ನಿಮಗೆ ಮೊದಲು ಮಾತನಾಡಿದಕ್ಕಿಂತ ಎರಡು ಪಟ್ಟು ಹಣ ಕೊಡುವೆ ಎಂದು ಬೇಡಿಕೊಂಡರು. ಆಗ ಗಾಡಿಯವನು ಒಪ್ಪಿಕೊಂಡ. ಹಣದ ಮುಂದೆ ಜಾತಿ ತಲೆಬಾಗಿತು. ಆದರೇನಂತೆ ಅಹಂ ಎದುರಾಯಿತು. ನಾನು ಗಾಡಿ ಕೊಡುತ್ತೇನೆ ಆದರೆ ನಿಮ್ಮ ಜಾತಿಯಿಂದ ಮೈಲಿಗೆಯಾದ ಗಾಡಿ ನಾನು ನಡೆಸುವುದಿಲ್ಲವೆಂದ. ಅಂಬೇಡ್ಕರ್ ಅವರ ಅಣ್ಣ ಗಾಡಿ ನಡೆಸುತ್ತಿದ್ದರೆ ಗಾಡಿಯವನು ಉರಿಬಿಸಿಲಲ್ಲಿ ಗಾಡಿಯ ಹಿಂದೆ ನಡೆದುಕೊಂಡೇ ಬಂದ. ಪ್ರಾಣ ಹೋದರೂ ಪರವಾಗಿಲ್ಲ ಮೈಲಿಗೆ ಆಗಬಾರದು ಎಂದುಕೊಂಡ ಗಾಡಿಯವನ ವರ್ತನೆ ಅಂಬೇಡ್ಕರ್ ರವರ ಮನಸನ್ನು ತೀವ್ರ ಘಾಸಿಗೊಳಿಸಿತು, ಹೃದಯ ಚುಚ್ಚಿತು.

* ಅಂಬೇಡ್ಕರ್ ಅವರ ಬುದ್ಧಿವಂತಿಕೆಗೆ ಮಾರುಹೋದ ಬರೋಡ ಮಹಾರಾಜ ಉನ್ನತ ಶಿಕ್ಷಣ ಪಡೆದ ನಂತರ ತನ್ನ ಬಳಿ ಕೆಲಸ ಮಾಡಬೇಕೆಂದು ಶರತ್ತು ವಿಧಿಸಿ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಿದರು. ಅವರಿಗೆ ನೀಡಿದ ಮಾತಿನಂತೆ ವಿದೇಶಿ ಶಿಕ್ಷಣ ಪಡೆದು 1917ರಲ್ಲಿ ಬರೋಡಕ್ಕೆ ಬಂದರು. ಅಂಬೇಡ್ಕರ್ ಗೆ ಸ್ವಾಗತ ಹೇಳಬೇಕೆಂದು ಮಹಾರಾಜರು ತಮ್ಮ ಸಿಬ್ಬಂದಿಗೆ ಸೂಚಿಸಿದರು. ಆದರೆ ಒಬ್ಬ ದಲಿತನನ್ನು ಅದೇಗೆ ಸ್ವಾಗತಿಸುವುದೆಂದು ಹಿಂಜರಿದರು. ಕೊನೆಗೆ ಅವರಿಗೆ ಇರಲು ಸಣ್ಣ ಕೋಣೆಯೂ ಸಿಗಲಿಲ್ಲ. ಅನಿವಾರ್ಯವಾಗಿ ಪಾರ್ಸಿ ಆಶ್ರಮದಲ್ಲಿ ಆಶ್ರಯ ಪಡೆದ ಅಂಬೇಡ್ಕರ್ ರಾಜರ ಮಿಲಿಟರಿ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅದಾಗಿಯೂ ಸಂಸ್ಥಾನದ ನೌಕರರು ಅವರನ್ನು ತಿರಸ್ಕಾರದಿಂದ ಕಾಣುತ್ತಿದ್ದರು. ಕಣ್ಣೆತ್ತಿ ನೋಡಲು ಸಹ ಇಷ್ಟಪಡುತ್ತಿರಲಿಲ್ಲ. ಅವರ ನೆರಳು ತಮ್ಮ ಮೇಲೆ ಬೀಳಬಾರದೆಂದು ದೂರ ದೂರ ನಡೆಯುತ್ತಿದ್ದರು. ಹಾಗಾಗಿ ಅಂಬೇಡ್ಕರ್ ಯಾವಾಗಲೂ ಗ್ರಂಥಾಲಯದಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಪುಸ್ತಕಗಳು ದೂರ ಮಾಡುವುದಿಲ್ಲ, ಮುಟ್ಟಿದರು ಏನು ಹೇಳುವುದಿಲ್ಲ ಆದ್ದರಿಂದ ಅವೇ ಅವರಿಗೆ ಜೀವನದ ಶಾಶ್ವತ ಗೆಳೆಯರಾದರು. ಅವಮಾನ ಜರಗಿದ ಸ್ಥಳದಲ್ಲಿಯೇ ಆಕಾಶ ತಾಕುವಂತಹ ಆತ್ಮ ಗೌರವ, ಆತ್ಮಸ್ಥೈರ್ಯ ಒಡಮೂಡಿತು.

ಹಾಗೆಯೇ, ಮಹಿಳಾ ಹಕ್ಕುಗಳು, ಸ್ವಾತಂತ್ರ್ಯ, ಆತ್ಮ ಗೌರವದ ಬಗ್ಗೆ ಅಂಬೇಡ್ಕರ್ ರವರಿಗೆ ಸ್ಪಷ್ಟವಾದ ಅಭಿಪ್ರಾಯಗಳಿವೆ. ಒಂದು ಸಮಾಜ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಮಹಿಳೆಯರ ಅಭಿವೃದ್ಧಿಗೆ ಮಾನದಂಡ ಎಂದು ಹೇಳುತ್ತಿದ್ದರು. ಹೆಣ್ಣು ಮಗು ಹುಟ್ಟಿದರೆ ಬೌದ್ಧ ಸಂಪ್ರದಾಯ ದುಃಖಮಯ ಘಟನೆ ಎಂದು ಭಾವಿಸುವುದಿಲ್ಲ. ಹೆಣ್ಣು ಮಗು ಗಂಡು ಮಗುವಿಗೆ ಸಮಾನ ಎಂದು ಹೇಳಿದವರು ಬುದ್ಧ. ಬದಲಾದ ಸಮಾಜದಲ್ಲಿ ಬದಲಾಗಬೇಕು ಮೂಢನಂಬಿಕೆಗಳನ್ನು ದೂರವಿರಿಸಬೇಕು ಎಂದು ಅವರು ಒತ್ತಿ ಹೇಳುತ್ತಿದ್ದರು. ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಬಾಲ್ಯ ವಿವಾಹದಿಂದ ದೂರವಿರಲು ಸೂಚಿಸಿದರು. ಹಳೆಯ ಹಾಗೂ ಹರಿದ ಬಟ್ಟೆ ಹಾಕಬೇಡಿ.ಇದರ ಉದ್ದೇಶ ಆಡಂಬರದಿಂದ ತಯಾರಾಗಿದೆ ಎಂದು ಅಲ್ಲ. ಜಾತಿ ಆಧಾರಿತ ವಸ್ತ್ರಧಾರಕ್ಕೆ ವಿರೋಧ ಹೇಳುವುದಾಗಿದೆ. ಗ್ಯಾಸ್ ದೀಪಗಳನ್ನು ಹೊತ್ತು ನಡೆಯಬೇಡಿ. ಹಾಡು ಆಗಲಿ, ಕೆಲಸವಾಗಲಿ, ಧರಿಸುವ ಬಟ್ಟೆಯಾಗಲಿ ಆತ್ಮ ಗೌರವಕ್ಕೆ ಪೆಟ್ಟು ಕೊಡುವ ಯಾವುದೇ ಕ್ರಮಕ್ಕೆ ಅನುಮತಿಸಬಾರದೆಂದು ದಲಿತ ಸ್ತ್ರೀಯರಿಗೆ ಹೇಳುತ್ತಿದ್ದರು. ಕುಟುಂಬ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಕೆಲವು ಹಕ್ಕುಗಳನ್ನು ಒದಗಿಸುತ್ತಾ ತಾನು ತಯಾರಿಸಿದ “ಹಿಂದೂ ಕೋಡ್ ” ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟ್ ನಲ್ಲಿ ಅಂಗೀಕಾರ ಪಡೆಯಲು ಶತ ಪ್ರಯತ್ನ ನಡೆಸಿದರು ಅಂಬೇಡ್ಕರ್. ಮಸೂದೆ ಪಾಸ್ ಆಗಲಿಲ್ಲ. ಇದಕ್ಕೆ ಪ್ರತಿಭಟನೆಯಾಗಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ತ್ರೀಯರ ಹಕ್ಕುಗಳ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದರು.

 ನಿಮ್ಮ ಗುಲಾಮಗಿರಿತನ ನೀವೇ ಕಳೆದುಕೊಳ್ಳಬೇಕು. ಅದಕ್ಕಾಗಿ ದೇವರ ಮೇಲೆ ಹಾಗೂ ಮಹಾತ್ಮರ ಮೇಲೆ ಆಧಾರವಾಗಿರಬೇಡಿ ಎಂದು ಹೇಳಿದ ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ, ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತನೆಗಳು ಇಂದಿಗೂ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇವೆ.

 ಏಪ್ರಿಲ್ 14 ಭಾರತ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಬಿಆರ್ ಅಂಬೇಡ್ಕರ್ ರವರ ಜನ್ಮದಿನ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್.

ನೀನು ನಿನಗಾಗಿ ಜೀವನ ಮಾಡಬೇಡ, ಜನರಿಗಾಗಿ ಜೀವನ ಮಾಡು ಎಂಬ ಮಾತನ್ನು ಮನದಟ್ಟು ಮಾಡುತ್ತಾ ಸಂವಿಧಾನದ ಆಶಯಗಳನ್ನು ಉಳಿಸುತ್ತ ಸುಭದ್ರ ದೇಶವನ್ನು ಕಟ್ಟುವತ್ತ ಹೆಜ್ಜೆ ಇಡೋಣ.

ಆಯೇಷಾ ಝಬಿ, ಮೈಸೂರು

ಲೇಖಕಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ

Related Articles

ಇತ್ತೀಚಿನ ಸುದ್ದಿಗಳು