ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಸೆಪ್ಟೆಂಬರ್ 4ರಂದು ‘ಫಾಕ್ಸ್ ನ್ಯೂಸ್’ ಸುದ್ದಿಸಂಸ್ಥೆಯ ಚರ್ಚಾ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಲಿದ್ದಾರೆ.
‘ಸೆಪ್ಟೆಂಬರ್ 4ರಂದು ಕಮಲಾ ಹ್ಯಾರಿಸ್ ಅವರಿಗೆ ಯಾವುದೇ ಕಾರಣಕ್ಕೂ ಚರ್ಚೆ ನಡೆಸಲು ಇಷ್ಟವಿಲ್ಲದಿದ್ದರೆ ಅಥವಾ ಸಾಧ್ಯವಾಗದಿದ್ದರೆ ತಿಳಿಸಲಿ, ಅವರು ಬರಲಿ ಬಿಡಲಿ, ನಾನು ಆದೇ ದಿನ ಸಂಜೆ ‘ಫಾಕ್ಸ್ ನ್ಯೂಸ್’ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಇದೀಗ ಕಮಲಾ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಘೋಷಿಸಿದೆ.
ಈಚೆಗೆ ಕಮಲಾ ಹ್ಯಾರಿಸ್ ಅವರ ವಿರುದ್ಧ ಡೊನಾಲ್ಡ್ ಟ್ರಂಪ್ ಜನಾಂಗೀಯ ಮಾತಿನ ದಾಳಿ ನಡೆಸಿದ್ದರು. ‘ಕಮಲಾ ಹ್ಯಾರಿಸ್ ಕಪ್ಪು ವರ್ಣೀಯರೋ ಅಥವಾ ಭಾರತೀಯರೋ’ ಎಂದು ಟ್ರಂಪ್ ಪ್ರಶ್ನಿಸಿದ್ದರು.
ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗಲು ಬಯಸುವವರೆಗೆ ಭಾರತ–ಅಮೆರಿಕ ಮೂಲದ ಕುರಿತು ಒತ್ತಿ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ವ್ಯಂಗ್ಯವಾಡಿದ್ದರು.
ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ ಡೊನಾಲ್ಡ್ ಟ್ರಂಪ್ ಅವರು 59 ವರ್ಷದ ಕಮಲಾ ಹ್ಯಾರಿಸ್ ಅವರನ್ನು ಎದುರಿಸಲಿದ್ದಾರೆ.