Wednesday, November 5, 2025

ಸತ್ಯ | ನ್ಯಾಯ |ಧರ್ಮ

ಅಮೆರಿಕ: ಇತಿಹಾಸ ನಿರ್ಮಿಸಿದ ಝೋಹ್ರಾನ್ ಮಮ್ದಾನಿ; ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆ

ಝೋಹ್ರಾನ್ ಮಮ್ದಾನಿ ಅವರು ಅಮೆರಿಕಾದ ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇವಲ 33 ವರ್ಷದ ಯುವ ನಾಯಕ ಹಾಗೂ ಇಂಡಿಯನ್ ಅಮೆರಿಕನ್ ಮುಸ್ಲಿಂ ಸಮುದಾಯದ ಝೋಹ್ರಾನ್, ಈ ಹಿಂದೆ ನ್ಯೂಯಾರ್ಕ್‌ನ ಗವರ್ನರ್ ಆಗಿದ್ದ ತಮ್ಮದೇ ಪಕ್ಷದ ಪ್ರಭಾವಿ ನಾಯಕ ಆಂಡ್ರ್ಯೂ ಕೂಮೋ ಅವರನ್ನು ಸೋಲಿಸಿ ಈ ಪ್ರತಿಷ್ಠಿತ ಹುದ್ದೆಯನ್ನು ಪಡೆದಿದ್ದಾರೆ.

80 ಲಕ್ಷ ಜನಸಂಖ್ಯೆಯ ನ್ಯೂಯಾರ್ಕ್ ನಗರವು ಡೆಮಾಕ್ರಾಟ್‌ಗಳ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದರೂ, ತಳಮಟ್ಟದಲ್ಲಿ ಸಾವಿರಾರು ಕಾರ್ಯಕರ್ತರನ್ನು ಸಂಘಟಿಸಿ ವಿಭಿನ್ನ ಪ್ರಚಾರ ತಂತ್ರದ ಮೂಲಕ ಝೋಹ್ರಾನ್ ಅಸಾಧ್ಯವೆನಿಸಿದ್ದ ಗೆಲುವನ್ನು ಸಾಧಿಸಿದ್ದಾರೆ. ಅವರ ಗೆಲುವು ಕೇವಲ ರಾಜಕೀಯ ವಿಜಯವಲ್ಲದೆ, ಅಮೆರಿಕಾದ ರಾಷ್ಟ್ರೀಯ ರಾಜಕಾರಣದಲ್ಲಿ ಸಮಾಜವಾದಿ ಮತ್ತು ಜನಪರ ಚಿಂತನೆಗೆ ಜನ ಬೆಂಬಲ ಸಿಕ್ಕಿರುವುದನ್ನು ಸೂಚಿಸುತ್ತದೆ.

ಝೋಹ್ರಾನ್ ಮಮ್ದಾನಿ ಅವರು ಭಾರತೀಯ-ಉಗಾಂಡಾ ಮೂಲದ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು ಪ್ರಸಿದ್ಧ ಭಾರತೀಯ ಚಿತ್ರ ನಿರ್ದೇಶಕಿ ಮೀರಾ ನಾಯರ್ ಮತ್ತು ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಅವರ ಪುತ್ರ. ಅವರು ಉಗಾಂಡಾದಲ್ಲಿ ಜನಿಸಿ, ಏಳು ವರ್ಷದವರಿದ್ದಾಗ ನ್ಯೂಯಾರ್ಕ್‌ಗೆ ಬಂದರು ಮತ್ತು 2018 ರಲ್ಲಿ ಅಮೆರಿಕನ್ ಪ್ರಜೆಯಾದರು. ರಾಜಕೀಯಕ್ಕೆ ಬರುವ ಮೊದಲು ಅವರು ವಸತಿ ಸ್ಥಳಾಂತರದ ವಿರುದ್ಧ ಹೋರಾಡುವ ಬಡವರಿಗೆ ನೆರವಾಗುತ್ತಿದ್ದರು.

2020 ರಲ್ಲಿ ಅವರು ನ್ಯೂಯಾರ್ಕ್ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಆಗ ಅವರು ಪ್ರಪ್ರಥಮ ಇಂಡಿಯನ್ ಅಮೆರಿಕನ್, ಪ್ರಥಮ ಉಗಾಂಡಾ ಮೂಲದ ವ್ಯಕ್ತಿ ಮತ್ತು ಅಸೆಂಬ್ಲಿಗೆ ಆಯ್ಕೆಯಾದ ಮೂರನೇ ಮುಸ್ಲಿಂ ವ್ಯಕ್ತಿಯಾಗಿದ್ದರು. ಈಗ ಅವರು ನ್ಯೂಯಾರ್ಕ್‌ನ ಪ್ರಪ್ರಥಮ ಇಂಡಿಯನ್ ಅಮೆರಿಕನ್ ಮತ್ತು ಪ್ರಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಝೋಹ್ರಾನ್ ತಮ್ಮ ನಿಲುವಿನಲ್ಲಿ ಸ್ಪಷ್ಟವಾದ ಡೆಮಾಕ್ರಾಟಿಕ್ ಸಮಾಜವಾದಿ ಸಿದ್ಧಾಂತವನ್ನು ಹೊಂದಿದ್ದಾರೆ. ಅವರು ತಾನು ಅಧ್ಯಕ್ಷ ಟ್ರಂಪ್ ಪಾಲಿನ ಅತ್ಯಂತ ಕೆಟ್ಟ ದುಃಸ್ವಪ್ನ ಎಂದೇ ಬಣ್ಣಿಸಿಕೊಂಡಿದ್ದಾರೆ ಮತ್ತು ಟ್ರಂಪ್ ಆಡಳಿತದ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅವರ ಪ್ರಚಾರದ ಪ್ರಮುಖ ಗುರಿ ವಿಶ್ವದ ಅತ್ಯಂತ ದುಬಾರಿ ನಗರವಾದ ನ್ಯೂಯಾರ್ಕ್‌ನಲ್ಲಿ ದುಡಿಯುವ ವರ್ಗದವರಿಗೆ ಜೀವನವನ್ನು ಸುಲಭಗೊಳಿಸುವುದಾಗಿತ್ತು.

ಈ ನಿಟ್ಟಿನಲ್ಲಿ, ನಗರದ ಅತಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿ ದುಡಿಯುವವರಿಗೆ ಅಗತ್ಯ ವಸ್ತುಗಳು ಕೈಗೆಟಕುವಂತೆ ಮಾಡುವುದು ಅವರ ಪ್ರಮುಖ ಯೋಜನೆಯಾಗಿದೆ. ಬರ್ನಿ ಸ್ಯಾಂಡರ್ಸ್ ಮತ್ತು ಅಲೆಕ್ಸಾಂಡ್ರಾ ಒಕಾಸಿಯೊರಂತಹ ಪ್ರಗತಿಪರ ಡೆಮಾಕ್ರಾಟ್ ನಾಯಕರು ಅವರನ್ನು ಬೆಂಬಲಿಸಿದ್ದರು. ಚುನಾವಣಾ ಪ್ರಕ್ರಿಯೆ ಬಗ್ಗೆ ಆಕರ್ಷಕ ಕಿರು ವಿಡಿಯೋಗಳು, ಬಾಲಿವುಡ್ ಉಲ್ಲೇಖಗಳು ಮತ್ತು ಆಗಾಗ್ಗೆ ಹಿಂದಿ-ಉರ್ದು ಮಾತುಗಳ ಮೂಲಕ ಅವರು ಜನರನ್ನು ನೇರವಾಗಿ ತಲುಪುವ ವಿಭಿನ್ನ ಪ್ರಚಾರ ತಂತ್ರವನ್ನು ಬಳಸಿದ್ದರು.

ಝೋಹ್ರಾನ್ ಅವರ ಈ ಗೆಲುವು ಅನೇಕ ಬಲಾಢ್ಯ ವಿರೋಧಿಗಳನ್ನು ಮೆಟ್ಟಿ ನಿಂತು ಸಾಧಿಸಿದ ವಿಜಯವಾಗಿದೆ. ಮಾಜಿ ಗವರ್ನರ್ ಕೂಮೋಗೆ ಮಾಜಿ ಅಧ್ಯಕ್ಷ ಬಿಲ್ ಗೇಟ್ಸ್ ಮತ್ತು ಮಾಜಿ ಮೇಯರ್ ಬ್ಲೂಮ್‌ಬರ್ಗ್ ಸೇರಿದಂತೆ ಪ್ರಭಾವಿಗಳ ಬೆಂಬಲವಿತ್ತು. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಕೂಮೋ ಬೆಂಬಲಿಗರು ಝೋಹ್ರಾನ್ ವಿರುದ್ಧ ಪ್ರಚಾರಕ್ಕಾಗಿ 25 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದರು. ಇದರ ಜೊತೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ಕೂಡ ಝೋಹ್ರಾನ್‌ರನ್ನು ಕಟುವಾಗಿ ವಿರೋಧಿಸಿದ್ದರು.

ಇಷ್ಟೆಲ್ಲಾ ವಿರೋಧಗಳ ನಡುವೆಯೂ ಝೋಹ್ರಾನ್ ಕೂಮೋ (ಸ್ವತಂತ್ರ ಅಭ್ಯರ್ಥಿಯಾಗಿ) ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲೀವ್ ಅವರನ್ನು ಸೋಲಿಸಿ ಭಾರೀ ಜನಬೆಂಬಲದೊಂದಿಗೆ ಗೆಲುವು ಸಾಧಿಸಿ, ಪ್ರಗತಿಪರ, ಜಾತ್ಯತೀತ ಮತ್ತು ಸಮಾಜವಾದಿ ಚಿಂತನೆಗೆ ಜನಾದೇಶ ದೊರಕಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page