Monday, September 15, 2025

ಸತ್ಯ | ನ್ಯಾಯ |ಧರ್ಮ

“ಮಿರಾಯ್”: ದೃಶ್ಯ ವೈಭವದ ನಡುವೆ, ಕೇಸರಿ ಸಿದ್ಧಾಂತದ ಷಡ್ಯಂತ್ರ

“..ಅಶೋಕ ಸಾಮ್ರಾಟನ ಮೂಲ ಆಶಯವಾಗಿ “ಯುದ್ಧ ಬೇಡ, ಬುದ್ಧ ಬೇಕು” ಎಂಬ ಸಂದೇಶದೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದನೆಂದು ನಮಗೆ ತಿಳಿದಿದೆ. ಆದರೆ ಮಿರಾಯ್ ಚಿತ್ರದಲ್ಲಿ, ಅಶೋಕನನ್ನು ಸಂಪೂರ್ಣ ವಿಭಿನ್ನವಾಗಿ ಚಿತ್ರಿಸಲಾಗಿದೆ..” ಯುವ ಬರಹಗಾರ ನಿತಿನ್ ಕೃಷ್ಣ ಅವರ ಬರಹದಲ್ಲಿ

ತೆಲುಗು ಚಿತ್ರ ಮಿರಾಯ್, ಪ್ರೇಕ್ಷಕರಿಗೆ ಅತ್ಯದ್ಭುತ ದೃಶ್ಯ ವೈಭೋಗ ನೀಡಿದರೂ, ಅದರ ಕಥಾಹಂದರ ಹಾಗೂ ತತ್ತ್ವಪ್ರದರ್ಶನ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಕಾರ್ತಿಕ್ ಗಟ್ಟಮನೇನಿ ನಿರ್ದೇಶನದ, ಟಿ.ಜಿ ವಿಶ್ವಪ್ರಸಾಧ್ ಹಾಗೂ ಕೃತಿ ಪ್ರಸಾದ್ ರ “ಪೀಪಲ್ ಮೀಡಿಯಾ ಫ್ಯಾಕ್ಟರಿ” ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ ಈ ಚಿತ್ರ, ಕೇವಲ ಫ್ಯಾಂಟಸಿ ಆಧಾರಿತ ಮನೋರಂಜನೆಯಾಗಿ ಉಳಿದಿದ್ದರೆ ವಿಶೇಷ ಸಮಸ್ಯೆ ಉಂಟಾಗುತ್ತಿರಲಿಲ್ಲ.

ಆದರೆ ಕಥೆಯ ತತ್ತ್ವವಸ್ತು, ವಿಶೇಷವಾಗಿ ಅಶೋಕನ ಪಾತ್ರದ ವಿಭಿನ್ನ ನಿರೂಪಣೆ, ಧಾರ್ಮಿಕ–ತತ್ತ್ವ ಚರ್ಚೆಗಳಿಗೆ ಕಾರಣವಾಗಿದೆ.

ಅಶೋಕನ ಇತಿಹಾಸ vs ಚಿತ್ರದಲ್ಲಿನ ನಿರೂಪಣೆ
ಇತಿಹಾಸದ ಪ್ರಕಾರ, ಕಾಳಿಂಗ ಯುದ್ಧದ ಭೀಕರತೆ ನೋಡಿ ಅಶೋಕನು ಆಳವಾದ ಖಿನ್ನತೆಗೆ ಒಳಗಾಗಿ, “ಯುದ್ಧ ಬೇಡ, ಬುದ್ಧ ಬೇಕು” ಎಂಬ ಸಂದೇಶದೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದನೆಂದು ನಮಗೆ ತಿಳಿದಿದೆ. ಆದರೆ ಮಿರಾಯ್ ಚಿತ್ರದಲ್ಲಿ, ಅಶೋಕನನ್ನು ಸಂಪೂರ್ಣ ವಿಭಿನ್ನವಾಗಿ ಚಿತ್ರಿಸಲಾಗಿದೆ.

ಕಳಿಂಗ ಯುದ್ಧದ ಗೆಲುವಿಗೆ ಅಶೋಕನಲ್ಲಿದ್ದ ಕೆಲ ವಿಶೇಷ ಶಕ್ತಿಯೇ ಕಾರಣ ಎಂದು ಸಿನೆಮಾದ ಮೊದಲ ಸೀನ್’ನಲ್ಲೇ ತೋರಿಸುತ್ತಾರೆ. ಯುದ್ಧದ ಬಳಿಕ ಅವನು ತನ್ನಲ್ಲಿದ್ದ ವಿಶೇಷ ಶಕ್ತಿಯೇ ಜಯಕ್ಕೆ ಕಾರಣವೆಂದು ನಂಬುತ್ತಾನೆ. ಆ ಶಕ್ತಿಯು ಮುಂದಿನ ಪೀಳಿಗೆಗಳಿಗೆ ತಲುಪಬೇಕು, ಒಂದು ವೇಳೆ ಆ ಶಕ್ತಿಗಳು ಮುಂದಿನ ಪೀಳಿಗೆಗಳಲ್ಲಿ ತಪ್ಪು ಕೈಗೆ ಸಿಕ್ಕರೆ ಪ್ರಪಂಚವೇ ನಾಶವಾಗಬಹುದು ಎಂಬ ಭಯದಿಂದ, ಅವನು ಒಂಬತ್ತು ಪುಸ್ತಕಗಳನ್ನು ರಚಿಸಿ, ಅವುಗಳ ರಕ್ಷಣೆಗೆ ಒಂಬತ್ತು ಯೋಧರನ್ನು ತರಬೇತಿ ಮಾಡುತ್ತಾನೆ.

ಈ ಪುಸ್ತಕಗಳಲ್ಲಿ ಅಮರತ್ವ ಹಾಗೂ ದೇವತ್ವ ನೀಡುವ ತಂತ್ರಗಳು ಅಡಗಿವೆ ಎಂದು ತೋರಿಸಲಾಗಿದೆ. ಇದು ಅಶೋಕನ ನಾಸ್ತಿಕ–ಅಹಿಂಸಾ ತತ್ತ್ವವನ್ನು ಮರೆಮಾಚಿ, ತಂತ್ರ–ಮಂತ್ರಗಳ ಕಲ್ಪನೆಗಳನ್ನು ಕೇಂದ್ರವಾಗಿಸುವ ಪ್ರಯತ್ನವಾಗಿದೆ. ಇಂತಹ ನಿರೂಪಣೆ, ಇತಿಹಾಸದ ಅರ್ಥವನ್ನು ತಲೆಕೆಳಗಾಗಿಸುವಂತೆ ಕಾಣುತ್ತದೆ.

ಪಾತ್ರಗಳ ಹೆಸರಿನ ಆಯ್ಕೆ ಮತ್ತು ಅದರ ತತ್ತ್ವಬಿಂಬ
ಚಿತ್ರದಲ್ಲಿ ಪಾತ್ರಗಳಿಗೆ ನೀಡಿರುವ ಹೆಸರುಗಳು ಸಹ ಚರ್ಚಾರ್ಹ. ಹೀರೋ ತೇಜ ಸಜ್ಜ “ವೇಧ ಪ್ರಜಾಪತಿ” ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ವೇಧ” ಎಂಬ ಪದವನ್ನು ಬೌದ್ಧ ಚಿಂತನೆಗಳು ತಿರಸ್ಕರಿಸುತ್ತವೆ.

ವಿಲನ್ ಮಂಚು ಮನೋಜ್ “ಮಹಬೀರ ಲಾಮ” ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾನೆ. “ಲಾಮ” ಎಂಬುದು ಬೌದ್ಧ ಪರಂಪರೆಯಲ್ಲಿ ಗುರುಗಳಿಗೆ ಬಳಸುವ ಪದ.

ಈ ಹೆಸರಿನ ಆಯ್ಕೆ ಕೇವಲ ಕಲ್ಪನೆಯಲ್ಲ, ಬೌದ್ಧ ತತ್ತ್ವದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ವೀಕ್ಷಕರಿಗೆ ಅನ್ನಿಸುತ್ತದೆ. ಹೀಗಾಗಿ ಕಥೆಯು ಕೇವಲ ಫ್ಯಾಂಟಸಿ ಅಲ್ಲ, ಬೌದ್ಧ ಧರ್ಮದ ಪ್ರತಿಪಾದನೆಯ ವಿರುದ್ಧವಾಗಿ ರೂಪುಗೊಂಡಿದೆ ಎಂಬ ಅಭಿಪ್ರಾಯ ಮೂಡುತ್ತದೆ.

ಮಹಬೀರ ಲಾಮನ ಹಿನ್ನೆಲೆ
ವಿಲನ್ ಮಹಬೀರ ಲಾಮನ ಪಾತ್ರದಾರಿಯ ಹಿನ್ನೆಲೆಯನ್ನು, ನಿರ್ದೇಶಕರು ಸಾಮಾಜಿಕ ಶೋಷಣೆಯಿಂದ ಪೀಡಿತನಾಗಿರುವ ಬಾಲಕನ ಬೆಳವಣಿಗೆಯನ್ನು ತೋರಿಸಿದ್ದಾರೆ.

ಸಮಾಜದಿಂದ ಶೋಷಿತನಾದ ಆತ, ಕಾಲಕ್ರಮೇಣವಾಗಿ ಸೇಡು ತೀರಿಸಲು ಹೊರಟು ಊರನ್ನೇ ಸುಡುತ್ತಾನೆ. ದೇವರನ್ನು ನಿರಾಕರಿಸಿ, ತಾನೇ ದೇವರಾಗಲು ಹೊರಡುತ್ತಾನೆ.

ಶಕ್ತಿಶಾಲಿಗಳು ಮಾತ್ರ ಬದುಕಬೇಕು, ಬಲಹೀನರು ಅಳಿದುಹೋಗಬೇಕು ಎಂಬುದು ಅವನ ತತ್ತ್ವ.

ಆದರೆ ಚಿತ್ರದಲ್ಲಿ ಅವನ ತಪ್ಪುಗಳನ್ನು ಬಿಂಬಿಸುವಾಗ, ಅವನನ್ನು ಹೀಗೆ ಮಾಡಿದ ಸಮಾಜದ ಅನ್ಯಾಯವನ್ನು ಯಾವ ಒಂದು ಪಾತ್ರವೂ ಪ್ರಶ್ನಿಸಲಿಲ್ಲ, ಪ್ರಶ್ನಿಸುವ ಧೈರ್ಯವೂ ನಿರ್ದೇಶಕರಲ್ಲಿ ಕಾಣಿಸಲಿಲ್ಲ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ, ಸಮರ್ಥಿಸಿಕೊಂಡಂತೆ ಕಾಣುತ್ತದೆ. ಹೀಗಾಗಿ ಕಥೆಯ ಒಳಸಂಘರ್ಷ ಏಕಪಕ್ಷೀಯವಾಗಿ ಬಿಂಬಿತವಾಗಿದೆ.

“ಲಾಮ” ವಿರುದ್ಧ ಹೊರಡುವ “ವೇಧನಿಗೆ ಸಹಾಯ ಮಾಡಲು ಮೈಥಾಲಜಿಕಲ್ ಪಾತ್ರಗಳ ಬಳಕೆ
ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ, ವೇಧನಿಗೆ ಸಹಾಯ ಮಾಡಲು ಅಗಸ್ತ್ಯ ಮುನಿ, ಸಿಂಪತಿ ಹಾಗೂ ಶ್ರೀರಾಮನಂತಹ ಪೌರಾಣಿಕ ಪಾತ್ರಗಳನ್ನು ಬಳಸಲಾಗಿದೆ. ಇವರು ಒಟ್ಟಾಗಿ ಮಹಬೀರ ಲಾಮನು ಅಶೋಕ ಬರೆದ ಒಂಬತ್ತು ಪುಸ್ತಕಗಳನ್ನು ಪಡೆಯದಂತೆ ತಡೆಯುತ್ತಾರೆ.

ಈ ರೀತಿಯ ಕಥಾಹಂದರ, ಬೌದ್ಧ ತತ್ತ್ವವನ್ನು ಹಿನ್ನಡೆಸಲು ಪುರಾಣಿಕ ಪ್ರತಿಮೆಗಳನ್ನೇ ಎದುರುಗೊಳ್ಳುವಂತೆ ತೋರ್ಪಡುತ್ತದೆ. ಇದು ಬೌದ್ಧ–ಹಿಂದು ತತ್ತ್ವಗಳ ನಡುವಿನ ಸಂಘರ್ಷವನ್ನು ಚಿತ್ರೀಕರಿಸಿರುವಂತೆ ಕಾಣುತ್ತದೆ.

ಹಾಲಿವುಡ್ ಪ್ರಭಾವ
ಮಿರಾಯ್ ಚಿತ್ರವು ಹಾಲಿವುಡ್‌ನ ಅವೆಂಜರ್ಸ್ ಸರಣಿಯ ಭಾರತೀಯ ಆವೃತ್ತಿಯಂತೆ ನೇರವಾಗಿ ಕಾಣುತ್ತದೆ. ಅವೆಂಜರ್ಸ್ನ ಇನ್ಫಿನಿಟಿ ಸ್ಟೋನ್ಸ್‌ಗೆ ಇಲ್ಲಿ ಅಶೋಕನ ಒಂಬತ್ತು ಪುಸ್ತಕಗಳು.
ಥ್ಯಾನೋಸ್‌ ಇಲ್ಲಿ ಮಹಬೀರ ಲಾಮ.
ಅವೆಂಜರ್ಸ್ ಇಲ್ಲಿ ತೇಜ ಸಜ್ಜ ಮತ್ತು ಅವರ ತಂಡ.

ಈ ಹೋಲಿಕೆಗಳು ಚಿತ್ರಕ್ಕೆ ಮೂಲತ್ವವನ್ನು ಕಳಚಿವೆ.

ದೃಶ್ಯ ವೈಭವ ಮತ್ತು ತಾಂತ್ರಿಕ ಶಕ್ತಿ
ನಿರ್ದೇಶಕ ಕಾರ್ತಿಕ್ ಗಟ್ಟಮನೇನಿ ದೃಶ್ಯ ವೈಭೋಗವನ್ನು ತೋರಿಸುವಲ್ಲಿ, “ಪೀಪಲ್ ಮೀಡಿಯಾ ಫ್ಯಾಕ್ಟರಿ”ರವರ ನಿರ್ಮಾಣದ ವಾಲ್ಯೂ, ಪ್ರತಿ ಫ್ರೆಮ್ ನಲ್ಲಿಯೂ ವಿಜೃಂಭಣೆಯಿಂದ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಕೆ, ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಮಟ್ಟದ ಮುದ್ರೆಯನ್ನು ಮೂಡಿಸಿದೆ.
ನಿರ್ಮಾಣದ ಮಟ್ಟ, ಸೆಟ್ ವಿನ್ಯಾಸ, ದೃಶ್ಯ ಸಂಯೋಜನೆ—all at par with international standards.
ಇದು ಚಿತ್ರದ ಪ್ರಮುಖ ಬಲವಾಗಿದೆ.

ನಟರ ಅಭಿನಯ ಮತ್ತು ಸಂಗೀತ
ತೇಜ ಸಜ್ಜ ಮತ್ತು ಮಂಚು ಮನೋಜ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಉಳಿದ ಕಲಾವಿದರು ಸಹ ತಮ್ಮ ಪಾತ್ರದಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಹರಿ ಗೌರ ಅವರ ಸಂಗೀತ ಸರಾಸರಿ ಮಟ್ಟದಲ್ಲಿದ್ದು, ಪ್ರೇಕ್ಷಕರ ಮೇಲೆ ಬಲವಾದ ಪ್ರಭಾವ ಬೀರುವಲ್ಲಿ ವಿಫಲವಾಗಿದೆ.

ಒಟ್ಟಾರೆ ವಿಮರ್ಶೆ
ಸುಮಾರು ₹60 ಕೋಟಿ ವೆಚ್ಚದಲ್ಲಿ ಮೂಡಿ ಬಂದ ಮಿರಾಯ್, ದೃಶ್ಯ ವೈಭವದಲ್ಲಿ ಹೊಸ ಮಟ್ಟ ತಲುಪಿದರೂ, ಕಥೆ ಹಾಗೂ ತತ್ತ್ವ ಪ್ರದರ್ಶನದಲ್ಲಿ ಗಂಭೀರ ಅಸಮತೋಲನ ತೋರಿಸಿದೆ.

ಅಶೋಕ ಹಾಗೂ ತಾನು ಬರೆದ ಪುಸ್ತಕಗಳು ಎಂದು ಬಿಂಬಿಸಲ್ಪಟ್ಟಾಗ, ಬೌದ್ಧ ಧರ್ಮದ ನಾಸ್ತಿಕ, ಅಹಿಂಸಾ ತತ್ತ್ವವನ್ನು ಕಡೆಗಣಿಸಿ, ತಂತ್ರ–ಮಂತ್ರ, ಅಮರತ್ವ–ದೇವತ್ವದ ಕಲ್ಪನೆಯತ್ತ ಕತೆ ಸಾಗಿ ಹೋಗಿದೆ.

ವಿಲನ್‌ನ ಹಿನ್ನೆಲೆ ಹಾಗೂ ಸಮಾಜದ ಶೋಷಣೆ ಕುರಿತಂತೆ ನಿರ್ದೇಶಕರು, ಸಾಮಾಜಿಕವಾದ ಸಮತೋಲನೆ ತೋರುವಂತಹ ನೀರೂಪಣೆ ನೀಡಲಿಲ್ಲ.

ಹಾಲಿವುಡ್ ಪ್ರಭಾವದಿಂದ ಕಥೆ ಮೂಲತ್ವ ಕಳೆದುಕೊಂಡಿದೆ.

ಅಂತಿಮವಾಗಿ, ಮಿರಾಯ್ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬವಾದರೂ, ಮನಸ್ಸಿಗೆ ತೃಪ್ತಿ ನೀಡದ ಸಿನಿಮಾ.
ರೇಟಿಂಗ್: 2 – 2.5 / 5

Related Articles

ಇತ್ತೀಚಿನ ಸುದ್ದಿಗಳು

You cannot copy content of this page