ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು: ಲಡಾಖ್ ಹಿಂಸಾಚಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋನಮ್ ವಾಂಗ್ಚುಕ್ ಆಗ್ರಹ

ದೆಹಲಿ: ಲಡಾಖ್‌ನ ಲೇಹ್‌ನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಲಡಾಖ್‌ನಲ್ಲಿ ನಡೆದ ನರಮೇಧಕ್ಕೆ ಅವರೇ ಹೊಣೆಗಾರರಾಗಿದ್ದು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 24 ರಂದು ಮೃತಪಟ್ಟ ನಾಲ್ವರು ಸ್ಥಳೀಯರ ಸ್ಮರಣಾರ್ಥ 20 ಕಿಲೋಮೀಟರ್ ಪಾದಯಾತ್ರೆ ನಡೆಸಿದ ನಂತರ ಲೇಹ್‌ನ ಎನ್‌ಡಿಎಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ವಾಂಗ್ಚುಕ್ ಮಾತನಾಡಿದರು. “ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಿ ಲಡಾಖ್ ನರಮೇಧದ ಜವಾಬ್ದಾರಿಯನ್ನು ಹೊರಬೇಕು. ಈ ಸಾವುಗಳಿಗೆ ಅವರೇ ನೇರ ಹೊಣೆ. ಅಮಿತ್ ಶಾ ರಾಜೀನಾಮೆ ನೀಡಲೇಬೇಕು,” ಎಂದು ಅವರು ಗುಡುಗಿದರು. ಪೊಲೀಸರ ಕ್ರಮವನ್ನು ಖಂಡಿಸಿ ಗುರುವಾರ ಲಡಾಖ್‌ನಾದ್ಯಂತ ಸಂಪೂರ್ಣ ಬಂದ್ ಆಚರಿಸಲಾಗಿತ್ತು.

ಕಳೆದ ಆರು ವರ್ಷಗಳಿಂದ ತಮ್ಮ ಹೋರಾಟ ಸಂಪೂರ್ಣ ಶಾಂತಿಯುತವಾಗಿ ಸಾಗುತ್ತಿತ್ತು ಎಂದು ವಾಂಗ್ಚುಕ್ ಸ್ಮರಿಸಿದರು. “ಬಿಜೆಪಿ ತನ್ನ 2020 ರ ಚುನಾವಣಾ ಪ್ರಣಾಳಿಕೆಯಲ್ಲಿ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಲಡಾಖ್‌ಗೆ ಸಾಂವಿಧಾನಿಕ ಭದ್ರತೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ನಂತರ ತನ್ನ ಮಾತಿನಿಂದ ಹಿಂದೆ ಸರಿಯಿತು. ನಮ್ಮ ಯುವಕರು ಆ ಭರವಸೆಗಳನ್ನು ನೆನಪಿಸಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು ಅಥವಾ ಪೊಲೀಸ್ ಠಾಣೆಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಯಿತು. ಇದೆಲ್ಲವೂ ದೆಹಲಿಯ ನಿರ್ದೇಶನದ ಮೇರೆಗೇ ನಡೆದಿದೆ,” ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಲಡಾಖ್ ನಿಯೋಗ ದೆಹಲಿಗೆ ತೆರಳಿದ್ದ ಸಂದರ್ಭವನ್ನು ಪ್ರಸ್ತಾಪಿಸಿದ ಅವರು, ಎರಡು ವರ್ಷಗಳ ಕಾಲ 15 ಸುತ್ತಿನ ಸಭೆಗಳು ನಡೆದರೂ ಅಮಿತ್ ಶಾ ಯಾವುದೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿಲ್ಲ ಎಂದರು. ಸ್ವತಃ ಪ್ರಧಾನಮಂತ್ರಿಯವರೇ ಲಿಖಿತ ಭರವಸೆ ನೀಡಿದರೂ ಲಡಾಖ್‌ಗೆ ಆರನೇ ಶೆಡ್ಯೂಲ್ ಅನ್ವಯಿಸುವುದಿಲ್ಲ ಎಂದು ಅಮಿತ್ ಶಾ ಕಡ್ಡಿ ಮುರಿದಂತೆ ಹೇಳಿದ್ದರು ಎಂದು ವಾಂಗ್ಚುಕ್ ಬಹಿರಂಗಪಡಿಸಿದರು.

ಕೇಂದ್ರ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳದಿರುವುದೇ ಲಡಾಖ್‌ನಲ್ಲಿ ಭುಗಿಲೆದ್ದ ಆಕ್ರೋಶಕ್ಕೆ ಮೂಲ ಕಾರಣವಾಗಿದ್ದು, ಗೋಲಿಬಾರ್‌ನಲ್ಲಿ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಳ್ಳಲು ಆಡಳಿತದ ವಿಶ್ವಾಸದ್ರೋಹವೇ ಕಾರಣ ಎಂದು ಅವರು ನೋವು ವ್ಯಕ್ತಪಡಿಸಿದರು. ದೇಶಕ್ಕೆ ಅಗತ್ಯವಿದ್ದಾಗಲೆಲ್ಲಾ ಲಡಾಖ್‌ನ ಜನರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದು, ಲಡಾಖ್‌ಗೆ ನ್ಯಾಯ ದೊರಕಿಸಿಕೊಡುವುದು ಇಡೀ ದೇಶದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ 24 ರಂದು ಲಡಾಖ್‌ಗೆ ಪೂರ್ಣ ರಾಜ್ಯ ಸ್ಥಾನಮಾನ ಹಾಗೂ ಆರನೇ ಶೆಡ್ಯೂಲ್ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ, 44 ಮಂದಿ ಗಾಯಗೊಂಡಿದ್ದರು. ಈ ಘಟನೆಯ ನಂತರ ವಾಂಗ್ಚುಕ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರು ತಿಂಗಳ ಕಾಲ ಜೋಧ್‌ಪುರ ಜೈಲಿನಲ್ಲಿ ಇರಿಸಲಾಗಿತ್ತು.

ಇತ್ತೀಚೆಗೆ ಲಡಾಖ್‌ಗೆ ಸಂವಿಧಾನದ 371 (ಕೆ) ವಿಧಿಯ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ನೀಡುವ ಪ್ರಸ್ತಾಪವನ್ನು ಕೇಂದ್ರ ಮುಂದಿಟ್ಟಿದ್ದು, ಜೊತೆಗೆ 20 ಮಂದಿಯ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಲೆಫ್ಟಿನೆಂಟ್ ಗವರ್ನರ್ ನಿರ್ಧರಿಸಿರುವ ಹೊತ್ತಿನಲ್ಲೇ ವಾಂಗ್ಚುಕ್ ಈ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು