ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಅಕ್ರಮ ನುಸುಳುವಿಕೆ ಮತ್ತು ಜಾನುವಾರು ಅಕ್ರಮ ಸಾಗಣೆ ಸಂಪೂರ್ಣವಾಗಿ ನಿಲ್ಲಲಿದ್ದು, ಅದು ಅಸಾಧ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹಾಗೂ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಿಸಿದರು. ಬಂಗಾಳದಲ್ಲಿ ಬಿಜೆಪಿಯ ಈ ಗೆಲುವು ಕೇವಲ ಸಂಘಟನೆಯ ವಿಸ್ತರಣೆಯಲ್ಲ, ಬದಲಿಗೆ ಇದು ರಾಷ್ಟ್ರೀಯ ಭದ್ರತೆಗೆ ಸಿಕ್ಕ ಜನಾದೇಶವಾಗಿದೆ ಎಂದು ಅವರು ಬಣ್ಣಿಸಿದರು.
ಈ ಜಯವು ರಾಷ್ಟ್ರೀಯ ಭದ್ರತೆಯಲ್ಲಿದ್ದ ದೊಡ್ಡ ರಂಧ್ರವನ್ನು ಸರಿಪಡಿಸುವ ಗುರಿ ಹೊಂದಿದೆ. ಇನ್ಮುಂದೆ ಪಶ್ಚಿಮ ಬಂಗಾಳದಲ್ಲಿ ನುಸುಳುವಿಕೆ ಮತ್ತು ಗೋವುಗಳ ಕಳ್ಳಸಾಗಣೆ ನಡೆಯಲು ಸಾಧ್ಯವೇ ಇಲ್ಲ ಎಂದು ಅಮಿತ್ ಶಾ ಅವರು ಟಿಎಂಸಿ ವಿರುದ್ಧ ಗುಡುಗಿದರು.
ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತದಲ್ಲಿ ಆಡಳಿತ ವ್ಯವಸ್ಥೆಯ ರಾಜಕೀಯೀಕರಣ ಮತ್ತು ರಾಜಕೀಯದ ಅಪರಾಧೀಕರಣ ನಡೆದಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಬಿಜೆಪಿಯ ಆಡಳಿತದಲ್ಲಿ ಇಂತಹ ಕೃತ್ಯಗಳಿಗೆ ಆಸ್ಪದ ಇರುವುದಿಲ್ಲ ಎಂದು ಭರವಸೆ ನೀಡಿದರು.
ನೂತನ ಶಾಸಕರ ಸಭೆಯಲ್ಲಿ ಎಂಟು ಪ್ರಸ್ತಾವನೆಗಳು ಬಂದಿದ್ದು, ಎಲ್ಲದರಲ್ಲೂ ಸುವೇಂದು ಅಧಿಕಾರಿ ಅವರ ಹೆಸರೇ ಇತ್ತು. ಬೇರೆ ಯಾವುದೇ ಹೆಸರೂ ಸೂಚಿತವಾಗದ ಕಾರಣ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಾ ತಿಳಿಸಿದರು.
ದಶಕಗಳಿಂದ ರಾಜ್ಯದಲ್ಲಿ ಮನೆ ಮಾಡಿದ್ದ ಭಯ ಮತ್ತು ರಾಜಕೀಯ ಹಿಂಸಾಚಾರದ ವಾತಾವರಣದ ನಡುವೆಯೂ ಬಿಜೆಪಿಯನ್ನು ಬೆಂಬಲಿಸಿದ ಬಂಗಾಳದ ಜನತೆಗೆ ಶಾ ಧನ್ಯವಾದ ಅರ್ಪಿಸಿದರು. ಅನೇಕ ಹಿಂಸಾಚಾರಗಳ ನಡುವೆಯೂ ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ನಮಗೆ ಭಾರಿ ಬಹುಮತ ನೀಡಿದ್ದಾರೆ ಎಂದರು.
