Saturday, June 29, 2024

ಸತ್ಯ | ನ್ಯಾಯ |ಧರ್ಮ

ಅಮಿತ್ ಶಾ ಕಾರ್ಯಕ್ರಮದಲ್ಲಿ ಹಿಂದಿ ಬ್ಯಾನರ್: ಕರವೇ ಕಿಡಿಕಿಡಿ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ ಕಾರ್ಯಕ್ರಮದಲ್ಲಿ ಹಿನ್ನೆಲೆ ಬ್ಯಾನರ್ ನಲ್ಲಿ ಸಂಪೂರ್ಣ ಹಿಂದಿ ಬಳಕೆ ಮಾಡಿರುವುದರ ವಿರುದ್ಧ ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅಮಿತ್ ಶಾ ಭಾಗವಹಿಸಿದ್ದು, ವೇದಿಕೆ ಸಂಪೂರ್ಣ ಹಿಂದಿಮಯವಾಗಿರುವುದು ಕನ್ನಡಪರರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಕರ್ನಾಟಕದಲ್ಲಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಬೇಕಿದೆ. ಸ್ವಾತಂತ್ರ ದೊರೆತ ನೆನಪಿಗಾಗಿ ಆಚರಿಸುತ್ತಿರುವ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ  ನೆಲದ ಭಾಷೆಯನ್ನೇ ಭಾರತ ಸರಕಾರ ಕಡೆಗಣಿಸುತ್ತಿರುವುದು ನಿಜಕ್ಕೂ ಖಂಡನಾರ್ಹ. ಇದನ್ನು ಕರವೇ ಕಟುವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಒಕ್ಕೂಟ ಸರ್ಕಾರ ಪದೇಪದೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಕ್ಕೆ ಧಕ್ಕೆಯಾದರೆ ಕರವೇ ಸಹಿಸುವುದಿಲ್ಲ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಈ ಕುರಿತು ಟ್ವೀಟ್ ಮಾಡಿದ್ದು, ಕನ್ನಡ ನಾಡಿನಿಂದ ಕನ್ನಡವನ್ನೇ ದೂರವಾಗಿಸುತ್ತಿರುವ ನಡೆಗಳ ನಡುವೆ ಯಾವ ಕಾರಣಕ್ಕಾಗಿ ಕನ್ನಡಿಗರು 75 ನೇ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸಬೇಕೋ ನನಗೆ ತಿಳಿಯುತ್ತಿಲ್ಲಾ. ಸ್ವತಂತ್ರ ಬಂದಿರೋದು ಹಿಂದಿ ಮೂಲಭೂತವಾದಿಗಳಿಗೆ, ಅಧಿಕಾರ ಬ್ರಿಟೀಶರಿಂದ ಹಿಂದಿ ಮೂಲಭೂತವಾದಿಗಳಿಗೆ ವರ್ಗಾವಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು