ಮೂಡ ಹಗರಣದ ವಿರುದ್ಧ ಜೆಡಿಎಸ್ – ಬಿಜೆಪಿ ಮೈಸೂರು ಯಾತ್ರೆಗೆ ಸಜ್ಜುಗೊಳ್ಳುತ್ತಿದ್ದಂತೆ, ಬಿಜೆಪಿ ಪಕ್ಷ ಈ ಹಿಂದೆ ಜೆಡಿಎಸ್ ಪಕ್ಷದ ಅಕ್ರಮದ ಬಗ್ಗೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದು ಈಗ ದೊಡ್ಡ ಸುದ್ದಿ ಮಾಡುತ್ತಿದೆ.
ಈ ಬಗ್ಗೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, “ಇದೇ ಜೆಡಿಎಸ್ ನ ದೊಡ್ಡ ಗೌಡರ ಕುಟುಂಬ ಮೈಸೂರಿನಲ್ಲಿ ಎಷ್ಟು ಅಕ್ರಮವಾಗಿ ಸೈಟ್ ಹೊಡೆದಿದೆ ಎಂದು ಸ್ವತಃ ಬಿಜೆಪಿ ಸುದ್ದಿ ಪತ್ರಿಕೆಯಲ್ಲಿ ಜಾಹೀರಾತು ನೀಡಿತ್ತು. ಇದೇ ಬಿಜೆಪಿ ಇಂದು ಜೆಡಿಎಸ್ ಜೊತೆ ಸೇರಿಕೊಂಡು ಯಾತ್ರೆ ಮಾಡುವುದು ನಗೆಪಾಟಲಿನ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ.
ಅದಕ್ಕೆ ಸರಿಯಾಗಿ ಈಗ ಹರಿದಾಡುತ್ತಿರುವ ಜೆಡಿಎಸ್ ವಿರುದ್ಧ ಬಿಜೆಪಿ ಮಾಡಿರುವ ಅಕ್ರಮದ ದಾಖಲೆ ಪಟ್ಟಿ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚಿತ ವಿಚಾರವಾಗಿದೆ.
ಅವುಗಳಲ್ಲಿ ಮೂಡಾ ಅಡಿಯಲ್ಲಿ 300 x 200 ಆಡಿ ಆಳತೆಯ ನಿವೇಶನ ದೇವೇಗೌಡರ ಕುಟುಂಬ ಪಡೆದುಕೊಂಡಿತ್ತು. ಆಮೇಲೆ ದಿನಾಂಕ 9-12-2000ರಂದು ಮೂಡಾಗೆ ಪತ್ರ ಬರೆದು ನಿವೇಶನದ ಸ್ವಾಧೀನ ಪತ್ರ ಪಡೆದ ಬಗ್ಗೆ ಉಲ್ಲೇಖವಿದೆ.

ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 2007ರ ಸೆಪ್ಟೆಂಬರ್- ಅಕ್ಟೋಬರ್ ಎರಡೇ ತಿಂಗಳಿನಲ್ಲಿ ‘ಜಿ’ ಪ್ರವರ್ಗದಡಿಯಲ್ಲಿ ಮೈಸೂರು ನಗರ ಒಂದರಲ್ಲೇ ತನ್ನ ಆಪ್ತರು, ಹಿತೈಷಿಗಳಿಗೆ 46 ನಿವೇಶನ ಹಂಚಿಕೆ ಮಾಡಿದ ಬಗ್ಗೆಯೂ ಬಿಜೆಪಿ ಆರೋಪ ಮಾಡಿದ ಉಲ್ಲೇಖವಿದೆ.
ಹಾಗೆಯೇ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಪಕ್ಕ ಹಾಗೂ ರಿಂಗ್ ರೋಡ್ ಬಳಿ ಚಿನ್ನದಷ್ಟೇ ಬೆಲೆ ಬಾಳುವ 153 ಎಕರೆ ಭೂಮಿಯನ್ನು 2006- 2007ರಲ್ಲಿ ಡಿ-ನೋಟಿಫೈ ಮಾಡಿದ್ದಾರೆ. ಈ ಜಮೀನಿನ ಈಗಿನ ಬೆಲೆ ಸುಮಾರು 450 ಕೋಟಿ ರೂ. ಆಗಿದ್ದು ಇದನ್ನು ನೆರೆ ರಾಜ್ಯಗಳ ಮೂರು ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂಬ ಆರೋಪ ಸೇರಿದಂತೆ ಮೈಸೂರು ನಗರವೊಂದರಲ್ಲೇ 36 ನಿವೇಶನ ಹಂಚಿಕೆ- ಇದರಲ್ಲಿ 20 ನಿವೇಶನ ಕುಟುಂಬದ ಸದಸ್ಯರ ಪಾಲಿನ ಬಗ್ಗೆಯೂ ಬಿಜೆಪಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಇನ್ನೂ ಈ ಪ್ರಕರಣವನ್ನ ಸಿಐಡಿಗೆ ವಹಿಸುವ ಬೇಡಿಕೆಯ ಬಗ್ಗೆ ವ್ಯಂಗ್ಯವಾಡಿದ ಕೃಷ್ಣಬೈರೇಗೌಡ “ಪಾಪ ರಾಘವೇಂದ್ರ ಬ್ಯಾಂಕ್ ನಲ್ಲಿ ಹಣ ಹೂಡಿ ಕಳಕೊಂಡಿದ್ದ ಯಾವ ಬಡ ಬ್ರಾಹ್ಮಣನಿಗೆ ಸಿಬಿಐ ನ್ಯಾಯ ಕೊಡಿಸಿದೆ ಹೇಳಿ? ಇಂತಹ ಸಂಸ್ಥೆಯನ್ನ ನಂಬಿ ಈ ಪ್ರಕರಣವನ್ನ ತನಿಖೆಗೆ ನೀಡಬೇಕಾ” ಎಂದು ಪ್ರಶ್ನಿಸಿದರು.
ಸಧ್ಯ ಜೆಡಿಎಸ್ ವಿರುದ್ಧ ಬಿಜೆಪಿ ಪಕ್ಷ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಅಡಿಯಲ್ಲೂ ಕಾಂಗ್ರೆಸ್ ಈಗ ತನಿಖೆ ಕೈಗೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕು. ಮೂಡಾ ಹಗರಣದ ಬಗ್ಗೆ ವಿಪರೀತ ಕಾಳಜಿ ತೋರಿದ ಜೆಡಿಎಸ್ ಗೆ ಈಗ ತನ್ನ ಮಿತ್ರಪಕ್ಷಗಳ ಹಿಂದಿನ ಆರೋಪವೇ ಮುಳುವಾಗಿದ್ದು ಯಾವ ಸಂದರ್ಭದಲ್ಲಿಯೂ ತಿರುಗಿ ನಿಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.