Tuesday, July 2, 2024

ಸತ್ಯ | ನ್ಯಾಯ |ಧರ್ಮ

ವಿಚಾರವಾದಿ ಆನಂದ್ ತೇಲ್ತುಂಬ್ಡೆ ಬಿಡುಗಡೆ

ಎಲ್ಗಾರ್ ಪರಿಷತ್ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 2 ವರ್ಷ 7 ತಿಂಗಳ ಸುದೀರ್ಘ ಜೈಲಿನಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ಕುಟುಂಬಸ್ಥರಾದ ಆನಂದ್ ತೇಲ್ತುಂಬ್ಡೆಯವರು ಇಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

ಬಾಂಬೆ ಹೈಕೋರ್ಟ್ ಕಳೆದ ವಾರ ತೇಲ್ತುಂಬ್‌ಡೆಯವರಿಗೆ ಜಾಮೀನು ನೀಡಿತ್ತು. ಆದರೆ ಈ ಜಾಮೀನನ್ನು ಪ್ರಶ್ನಿಸಿ NIA ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಜೊತೆಗೆ ಬಿಡುಗಡೆಗೆ ಏಳು ದಿನಗಳ ತಡೆಯನ್ನೂ ಕೋರಿತ್ತು. ಆದರೆ ಸುಪ್ರೀಂಕೋರ್ಟ್ NIA ಕೋರಿದ ತಡೆ ಅರ್ಜಿಯನ್ನು ತಿರಸ್ಕರಿಸಿ ಬಾಂಬೆ ಹೈಕೋರ್ಟ್ ನಿರ್ಧಾರವನ್ನು ಎತ್ತಿ ಹಿಡಿದಿದೆ.

ನವೆಂಬರ್ 25 ರ ಶುಕ್ರವಾರ ತೇಲ್ತುಂಬ್ಡೆಯವರಿಗೆ ಸಂಬಂಧಿಸಿದಂತೆ ಬಿಡುಗಡೆಯ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸಿ ಇನ್ನು ಜೈಲಿನಿಂದ ಹೊರ ಬರುವ ಪ್ರಕ್ರಿಯೆ ಒಂದಕ್ಕೇ ಬಾಕಿ ಉಳಿಸಿಕೊಂಡಿತ್ತು. ಹಾಗೇ ನವೆಂಬರ್ 26 ರ ಶನಿವಾರ ಇಂದು ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಆನಂದ್ ತೇಲ್ತುಂಬ್ಡೆಯವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದಾರೆ.

ಎಲ್ಗಾರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣವು ಗಲಭೆಗೆ ಕಾರಣವಾಗಿದೆ ಎಂಬುದು NIA ದೂರಾಗಿದೆ. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದಾರೆ ಎಂದು NIA ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ತೇಲ್ತುಂಬ್ಡೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. NIA ಆರೋಪಿಸಿದಂತೆ ಯುಎಪಿಎ ಕಾಯಿದೆಯಡಿ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ಜಾಮೀನಿನ ಆದೇಶದ ವೇಳೆ ಹೇಳಿತ್ತು. ನಂತರ ಜಾಮೀನಿಗೆ ತಡೆ ಕೋರಿದ್ದ NIA ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

Related Articles

ಇತ್ತೀಚಿನ ಸುದ್ದಿಗಳು