ಬೆಳ್ತಂಗಡಿ: 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ (20) ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಸುಜಾತ ಭಟ್ (60) ಜುಲೈ 15ರ ಸಂಜೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾದ ನಂತರ, ತಮ್ಮ ವಕೀಲರೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಸುಜಾತ ಭಟ್ ಅವರು ತಮ್ಮ ವಕೀಲ ಮಂಜುನಾಥ್ ಎನ್. ಜೊತೆಗೆ ಜುಲೈ 15ರಂದು ಎಸ್‌ಪಿಯವರನ್ನು ಭೇಟಿಯಾಗಿ, ತಮ್ಮ ಮಗಳ ನಾಪತ್ತೆಯ ಬಗ್ಗೆ ವಿವರವಾಗಿ ತಿಳಿಸಿ, ನ್ಯಾಯಕ್ಕಾಗಿ ಮನವಿ ಮಾಡಿದರು. ಎಸ್‌ಪಿಯವರು ದೂರು ದಾಖಲಿಸಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕಳುಹಿಸಿದರು. ಅದರಂತೆ, ರಾತ್ರಿ 8 ಗಂಟೆಗೆ ಸುಜಾತ ಭಟ್ ಅವರು ಧರ್ಮಸ್ಥಳ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ್ ಅವರಿಗೆ ದೂರು ಸಲ್ಲಿಸಿದರು. ಪೊಲೀಸರು ದೂರನ್ನು ಸ್ವೀಕರಿಸಿ, ಮುಂದಿನ ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
2003ರಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್, ಇಬ್ಬರು ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ನಿಗೂಢವಾಗಿ ಕಾಣೆಯಾಗಿದ್ದರು.
ಇತ್ತೀಚೆಗೆ, ಧರ್ಮಸ್ಥಳದಲ್ಲಿ ಮೃತದೇಹವೊಂದನ್ನು ಹೂತಿರುವುದಾಗಿ ದೂರು ನೀಡಿದ್ದ ವ್ಯಕ್ತಿಯೊಬ್ಬರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಯೂಟ್ಯೂಬ್‌ನಲ್ಲಿ ನೋಡಿದ ಸುಜಾತ ಭಟ್, ವಕೀಲರ ಸಹಾಯದೊಂದಿಗೆ ಎಸ್‌ಪಿ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
“ನನಗೆ ನನ್ನ ಮಗಳ ಅಸ್ಥಿಪಂಜರದ ಕಳೇಬರವನ್ನು ಹುಡುಕಿಕೊಡಬೇಕು. ಡಿಎನ್‌ಎ ಪರೀಕ್ಷೆ ಮಾಡಿ, ಆ ಕಳೇಬರವನ್ನು ನನಗೆ ಒಪ್ಪಿಸಬೇಕು. ನಂತರ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನಡೆಸಿ, ಮುಕ್ತಿಯನ್ನು ಕೊಡಬೇಕು. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ, ಯಾರ ವಿರುದ್ಧವೂ ದೂರು ನೀಡಿಲ್ಲ. ನನಗೆ ಬೇರೆ ಏನೂ ಬೇಡ” ಎಂದು ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.