Home ದೇಶ ಕಲ್ಪ ಕೇದಾರ್ ದೇವಾಲಯ: ಪ್ರವಾಹದಲ್ಲಿ ಮುಳುಗಿದ ಉತ್ತರಾಖಂಡದ ಪ್ರಾಚೀನ ಶಿವ ದೇವಾಲಯ

ಕಲ್ಪ ಕೇದಾರ್ ದೇವಾಲಯ: ಪ್ರವಾಹದಲ್ಲಿ ಮುಳುಗಿದ ಉತ್ತರಾಖಂಡದ ಪ್ರಾಚೀನ ಶಿವ ದೇವಾಲಯ

0

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ಮೇಘಸ್ಫೋಟದಿಂದ ಭಾರಿ ಅನಾಹುತ ಸಂಭವಿಸಿದೆ. ಖೇರ್ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಇದರಿಂದ ಹರ್ಸಿಲ್ ಪ್ರದೇಶದಲ್ಲಿರುವ ಪ್ರಾಚೀನ ಕಲ್ಪಕೇದಾರ ಶಿವ ದೇವಾಲಯವು ಕೆಸರು ಮತ್ತು ಕಲ್ಲುಗಳಿಂದ ಆವೃತವಾಗಿ ಮುಳುಗಿಹೋಗಿದೆ. ದೇವಾಲಯದ ಶಿಖರ ಮಾತ್ರ ಚೂರೇ ಚೂರು ಕಾಣಿಸುತ್ತಿದೆ.

ಕಲ್ಪ ಕೇದಾರ್ ದೇವಾಲಯವು ಕೇದಾರನಾಥ ದೇವಾಲಯದಂತೆಯೇ ನಿರ್ಮಿತವಾಗಿದೆ. ಆ ದೇವಾಲಯದ ಶಿಖರ ಮತ್ತು ಕೇದಾರನಾಥ ದೇವಾಲಯದ ಶಿಖರ ಒಂದೇ ರೀತಿಯಲ್ಲಿ ಕಾಣುತ್ತವೆ. ಕಲ್ಪ ಕೇದಾರ್ ದೇವಾಲಯವು ಈ ಹಿಂದೆ ಕೂಡ ಪ್ರಕೃತಿ ವಿಕೋಪಕ್ಕೆ ಸಿಲುಕಿ ಜಲಾವೃತವಾಗಿತ್ತು. ಈ ಶಿವ ದೇವಾಲಯದ ವಾಸ್ತುಶಿಲ್ಪವು ಕತೂರಿ ಶೈಲಿಯಲ್ಲಿದೆ. ಕೇದಾರಧಾಮದಲ್ಲಿರುವ ಶಿವ ದೇವಾಲಯವನ್ನೂ ಇದೇ ಶೈಲಿಯಲ್ಲಿ ನಿರ್ಮಿಸಲಾಗಿದೆ.

1945ರಲ್ಲಿ ನಡೆಸಿದ ಉತ್ಖನನದಲ್ಲಿ ಈ ದೇವಾಲಯವು ಪತ್ತೆಯಾಗಿತ್ತು. ಹಲವು ಅಡಿ ಆಳಕ್ಕೆ ಅಗೆದು ಈ ದೇವಾಲಯವನ್ನು ಹೊರತೆಗೆಯಲಾಗಿತ್ತು. ಈ ದೇವಾಲಯವು ನೆಲಮಹಡಿಯಲ್ಲಿದೆ. ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಯಸುವ ಭಕ್ತರು ಕೆಳಮಟ್ಟಕ್ಕೆ ಇಳಿಯಬೇಕಾಗುತ್ತದೆ. ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಖೇರ್ ಗಂಗಾ ನದಿಯ ಹನಿಗಳು ಬೀಳುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ದೇವಾಲಯದ ಸುತ್ತಲೂ ಪ್ರಾಚೀನ ಶಿಲ್ಪಕಲಾ ಸೌಂದರ್ಯವೂ ಇದೆ. ಗರ್ಭಗುಡಿಯಲ್ಲಿರುವ ಶಿವಲಿಂಗವು ನಂದಿಯ ಹಿಂಭಾಗದ ಆಕಾರದಲ್ಲಿದೆ. ಒಂದು ರೀತಿಯಲ್ಲಿ ಕೇದಾರನಾಥ ದೇವಾಲಯದಲ್ಲಿರುವ ಶಿವನ ರೂಪಕ್ಕೆ ಹೋಲುತ್ತದೆ.

ಹಿಮಾಲಯದಲ್ಲಿರುವ ರಹಸ್ಯ ಸಂಪತ್ತು ಎಂದು ಕಲ್ಪ ಕೇದಾರ್ ದೇವಾಲಯವನ್ನು ಗುರುತಿಸಲಾಗಿದೆ. ಗಂಗಾ ನದಿಯ ಮೂಲಸ್ಥಾನವು ಆ ದೇವಾಲಯದಲ್ಲೇ ಇದೆ ಎಂದು ಕೆಲವರು ಭಾವಿಸುತ್ತಾರೆ. ಈ ದೇವಾಲಯವನ್ನು ಪಾಂಡವರು ನಿರ್ಮಿಸಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. 1935-38ರ ನಡುವೆ ಸಂಭವಿಸಿದ ಭೂಕಂಪದಿಂದ ಈ ದೇವಾಲಯವು ಮುಳುಗಿದೆ ಎಂದು ಹೇಳಲಾಗುತ್ತದೆ. ಉತ್ತರಕಾಶಿ ಜಿಲ್ಲಾ ಕೇಂದ್ರದಿಂದ ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿ ನದಿಯ ದಡದಲ್ಲಿ ಕಲ್ಪಕೇದಾರ್ ದೇವಾಲಯವಿದೆ.

ಸೋಮವಾರ ಬಂದ ಪ್ರವಾಹದಿಂದ ಭಾರಿ ವಿನಾಶ ಸಂಭವಿಸಿದೆ. 20 ರಿಂದ 25 ಹೋಟೆಲ್‌ಗಳು ನೆಲಸಮವಾಗಿವೆ. ಒಂದು ಶಿಬಿರದಲ್ಲಿದ್ದ 12 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಪ್ರಸ್ತುತ, ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಸೇನಾಪಡೆಗಳು ರಕ್ಷಣಾ ಕಾರ್ಯಗಳನ್ನು ಕೈಗೊಂಡಿವೆ. ಉತ್ತರಕಾಶಿ-ಹರ್ಸಿಲ್ ರಸ್ತೆಯಲ್ಲಿರುವ ಭಟ್ವಾಡಿ ಬಳಿ ರಸ್ತೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಪ್ರವಾಹದ ರಭಸಕ್ಕೆ ಅದು ಕೊಚ್ಚಿಹೋಗಿದೆ. ಹರ್ಸಿಲ್ ಮಾರ್ಗವನ್ನು ರಾತ್ರಿಯಿಡೀ ಮುಚ್ಚಲಾಗಿತ್ತು.

https://x.com/alok_bhatt/status/1787194648630268244

You cannot copy content of this page

Exit mobile version