Friday, July 4, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಗ್ರಾಮದಲ್ಲಿ ಹೂತು ಹಾಕಿರುವ ಶವಗಳಿಗೆ ‘ಮರುಜೀವ’; ಅನಾಮಧೇಯನಿಂದ ಎಸ್ಪಿಗೆ ದೂರು!

1995 ರಿಂದ 2014 ರ ಡಿಸೆಂಬರ್ ವರೆಗೆ ಧರ್ಮಸ್ಥಳ ಗ್ರಾಮದಲ್ಲಾದ ನಿಗೂಢ ಸಾವುಗಳಿಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯೊಬ್ಬ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ದೂರು ಪ್ರತಿಯ ಒಂದು ಪುಟ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈಗ 6 ಪುಟಗಳ ಒಟ್ಟಾರೆ ದೂರಿನ ಪ್ರತಿಗಳೂ ಕೂಡ ಮಾಧ್ಯಮಗಳಿಗೆ ಲಭ್ಯವಾಗಿದೆ.

ದೂರುದಾರ ವ್ಯಕ್ತಿ ಸುಮಾರು 19 ವರ್ಷಗಳ ಕಾಲ ಧರ್ಮಸ್ಥಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಸೇವೆ ಸಲ್ಲಿಸಿದ್ದು, 2014 ರ ನಂತರ ಪಾಪಪ್ರಜ್ಞೆಯಿಂದ ರಾತ್ರೋರಾತ್ರಿ ತನ್ನ ಇಡೀ ಕುಟುಂಬ ಸಮೇತ ಧರ್ಮಸ್ಥಳ ತೊರೆದು ನೆರೆಯ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೊನೆಗೆ ಈ ಸತ್ಯ ಇಲ್ಲೇ ಮಣ್ಣಾಗಬಾರದು ಎಂದು ಸ್ವಯಂಪ್ರೇರಿತನಾಗಿ ಬಂದು ದೂರು ದಾಖಲಿಸಿದ್ದೇನೆ… ಹಾಗೆಯೇ ತನಿಖೆಯ ಯಾವುದೇ ಸಂದರ್ಭದಲ್ಲೂ ನಾನು ಆಗಲಬಹುದಾದ ಸಂದರ್ಭದಲ್ಲಿ ಮುಂಜಾಗ್ರತೆಗಾಗಿ ಈ ದೂರು ಮತ್ತು ಕೆಲವು ಸಾಕ್ಷ್ಯಗಳನ್ನು ಸುಪ್ರೀಂಕೋರ್ಟ್ ನ ವಕೀಲರಾದ ಕೆವಿ ಧನಂಜಯ ಅವರಿಗೆ ಸಲ್ಲಿಸಿರುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಹೇಳುತ್ತಿರುವುದರ ಪುರಾವೆಯಾಗಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೃತದೇಹ ಹೂಳಿದ್ದ ಸ್ಥಳವೊಂದಕ್ಕೆ ರಹಸ್ಯವಾಗಿ ಹೋಗಿ ಕಳೇಬರವನ್ನು ಹೊರತೆಗೆದಿದ್ದೇನೆ” ಎಂಬ ಆಘಾತಕಾರಿ ಮಾಹಿತಿಗಳನ್ನೂ ಸಹ ದೂರುದಾರ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಪ್ರತಿ ಈ ರೀತಿಯಾಗಿದೆ
ಮಾನ್ಯರೇ,

ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪರಿಹಾರವಾಗದ ಪಾಪಪ್ರಜ್ಞೆಯಿಂದ ಹೊರಬರುವ ಸಲುವಾಗಿ ಈ ದೂರು ನೀಡುತ್ತಿದ್ದೇನೆ. ನಾನು ಕಂಡ ಕೊಲೆಗಳು. ಸ್ವೀಕರಿಸಿದ ಶವಗಳನ್ನು ಹೂತುಹಾಕದಿದ್ದರೆ ಆ ಶವಗಳ ಜೊತೆಯಲ್ಲೇ ಮಣ್ಣು ಪಾಲಾಗಿಸುವ ನಿರಂತರ ಜೀವಬೆದರಿಕೆ ಮತ್ತು ಥಳಿತಗಳ ನೋವಿನ ನೆನಪಿನ ಹೊರೆಯನ್ನು ಇನ್ನೂ ಹೊರಲು ನನ್ನಿಂದ ಸಾಧ್ಯವಿಲ್ಲ. ಈ ಮೂಲಕ ನಾನು ಬಹಿರಂಗಪಡಿಸುತ್ತಿರುವ, ಕೊಲೆಯಾದ ಅನೇಕ ಪುರುಷರು ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಯುವತಿಯರು ಮತ್ತು ಮಹಿಳೆಯರ ಮಾಹಿತಿಯನ್ನು ತೀವ್ರಗತಿಯಲ್ಲಿ ತನಿಖೆಗೊಳಪಡಿಸಿ, ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುವಂತೆ ಕೋರುತ್ತಿದ್ದೇನೆ.

ನಾನು 11 ವರ್ಷಗಳ ಹಿಂದೆ ಧರ್ಮಸ್ಥಳವನ್ನು ರಾತ್ರೋರಾತ್ರಿ ತೊರೆದೆ; ನನ್ನ ಸಣ್ಣ ಕುಟುಂಬವನ್ನೂ ನನ್ನೊಡನೆ ಎಳೆದೊಯ್ದೆ. ನೆರೆ ರಾಜ್ಯವೊಂದರಲ್ಲಿ ತಲೆಮರೆಸಿಕೊಂಡೆ. ಧರ್ಮಸ್ಥಳದಿಂದ ದೂರವಿದ್ದರೂ, ನಾನು ಮತ್ತು ನನ್ನ ಕುಟುಂಬ ಯಾವುದೇ ಕ್ಷಣದಲ್ಲಿ ಹಿಂದಿನವರಂತೆಯೇ ಕೊಲೆಗೊಳಗಾಗುತ್ತೇವೆ ಎಂಬ ಖಚಿತತೆ ನಮ್ಮನ್ನು ದಿನನಿತ್ಯ ಕಾಡಿದೆ.

ನಾನು ಹುಟ್ಟಿದ್ದು ಅತ್ಯಂತ ಕೆಳಗಿನದೆಂದು ಕರೆಯಲಾಗುವ ಜಾತಿಯಲ್ಲಿ. ನಾನು 1995 ರಿಂದ ಡಿಸೆಂಬರ್ 2014ರ ವರೆಗೆ ಧರ್ಮಸ್ಥಳ ದೇವಸ್ಥಾನದಡಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ, ನೇತ್ರಾವತಿ ನದಿಯ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೆಲಸವನ್ನು ನಿರ್ವಹಿಸುತ್ತಿದ್ದೆ. ನಿಯಮಿತ ಉದ್ಯೋಗವಾಗಿ ಪ್ರಾರಂಭವಾದದ್ದು ನಂತರದ ದಿನಗಳಲ್ಲಿ ಅತ್ಯಂತ ಭಯಾನಕ ಅಪರಾಧಗಳ ಸಾಕ್ಷ್ಯಗಳನ್ನು ಮರೆಮಾಚುವ ಕೆಲಸವಾಗಿ ಬದಲಾಯಿತು.

ನನ್ನ ಉದ್ಯೋಗದ ಆರಂಭದಲ್ಲಿ ಮೃತ ದೇಹಗಳು ಕಾಣಿಸಿಕೊಳ್ಳುವುದನ್ನು ನಾನು ಗಮನಿಸಿದೆ. ಮೊದಲಿಗೆ. ಇವು ಆತ್ಮಹತ್ಯೆ ಅಥವಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿದ ಮೃತ ದೇಹಗಳು ಎಂದು ನಾನು ಭಾವಿಸಿದ್ದೆ. ಅದರಲ್ಲಿ, ಮಹಿಳೆಯರ ಶವಗಳೇ ಹೆಚ್ಚಾಗಿದ್ದವು.

ಅನೇಕ ಮಹಿಳಾ ಶವಗಳು ಬಟ್ಟೆ ಅಥವಾ ಒಳ ಉಡುಪುಗಳಿಲ್ಲದೆ ಕಂಡು ಬಂದವು. ಲೈಂಗಿಕ ಆಕ್ರಮಣ ಮತ್ತು ಹಿಂಸೆಯ ಸ್ಪಷ್ಟ ಲಕ್ಷಣಗಳನ್ನು ಕೆಲವು ಶವಗಳು ಹೊಂದಿದ್ದವು. ಆ ದೇಹಗಳ ಮೇಲೆ ಹಿಂಸೆಯನ್ನು ಸೂಚಿಸುವ ಗಾಯಗಳು ಅಥವಾ ಕತ್ತುಹಿಸುಕುವಿಕೆಯು ಕಂಡು ಬರುತ್ತಿದ್ದವು.

1998ರ ಸುಮಾರಿಗೆ, ನನ್ನ ಮೇಲ್ವಿಚಾರಕರು ಈ ದೇಹಗಳನ್ನು ಪೊಲೀಸರಿಗೆ ವರದಿ ಮಾಡುವ ಬದಲು. ನಾನು ಈ ದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ನಾನು ತಕ್ಷಣವೇ ನಿರಾಕರಿಸಿ, ಆ ಸಾವುಗಳನ್ನು ಪೊಲೀಸರಿಗೆ ತಿಳಿಸಬೇಕು ಎಂದು ಪ್ರತಿಕ್ರಯಿಸಿದಾಗ. ತೀವ್ರವಾಗಿ ಥಳಿಸಲ್ಪಟ್ಟೆ. ನಾನೇನಾದರೂ ಅವರ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದರೆ ಅಥವಾ ಅದರ ಬಗ್ಗೆ ಯಾರಿಗಾದರೂ ತಿಳಿಸಿದರೆ, “ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ. “ನಿನ್ನ ದೇಹವೂ ಉಳಿದ ಶವಗಳಂತೆ ಹೂತಲ್ಪಡುತ್ತದೆ” ಮತ್ತು “ನಿನ್ನ ಕುಟುಂಬದವರೆಲ್ಲರನ್ನೂ ಬಲಿ ಮಾಡುತ್ತೇವೆ’ ಎಂದು ಬೆದರಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ, ಆ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು ಹಿಂಜರಿದೊಡನೆಯೇ “ಕಣ್ಮರೆಯಾದ” ಎಂದು ಅವರು ಹೇಳುತ್ತಿದ್ದರು. ಅವರ ಬೆದರಿಕೆಯಲ್ಲಿ ಸಂಶಯವೇ ಇರಲಿಲ್ಲ – “ಪಾಲಿಸು ಇಲ್ಲವೇ ಕುಟುಂಬ ಸಮೇತವಾಗಿ ತುಂಡು ತುಂಡಾಗಿ ಕತ್ತರಿಸಲ್ಪಡು” ಎಂದಾಗಿತ್ತು.

ಮೃತದೇಹಗಳಿರುವ ನಿರ್ದಿಷ್ಟ ಸ್ಥಳಗಳಿಗೆ ಮೇಲ್ವಿಚಾರಕರು ನನ್ನನ್ನು ಕರೆಯುತ್ತಿದ್ದರು. ಅನೇಕ ಬಾರಿ, ಈ ದೇಹಗಳು ಅಪ್ರಾಪ್ತ ಹೆಣ್ಣು ಮಕ್ಕಳು/ ಮಹಿಳೆಯರದಾಗಿದ್ದವು. ಒಳ ಉಡುಪು ಇರದ, ಹರಿದ ಬಟ್ಟೆ ಮತ್ತು ಅವರ ಖಾಸಗಿ ಭಾಗಗಳಿಗೆ ಆಗಿದ್ದ ಗಾಯಗಳು ಅವರ ಮೇಲೆ ಕ್ರೂರ ಲೈಂಗಿಕ ಆಕ್ರಮಣವನ್ನು ಸೂಚಿಸುತ್ತಿದ್ದವು. ಕೆಲವು ದೇಹಗಳ ಮೇಲೆ ಆಸಿಡ್ ನಿಂದ ಸುಟ್ಟ ಗುರುತುಗಳೂ ಸಹ ಇರುತ್ತಿದ್ದವು.

ನನ್ನನ್ನು ಬಹಳವಾಗಿ ಕಾಡಿರುವ ಘಟನೆಯೊಂದಿದೆ; 2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್ ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ನನ್ನನ್ನು ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡೆನು. ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಆದರೆ, ಅವಳ ಲಂಗ ಮತ್ತು ಒಳಉಡುಪುಗಳು ಇರಲಿಲ್ಲ. ಅವಳ ದೇಹವು ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳನ್ನು ಹೊಂದಿತ್ತು. ಅವಳ ಕುತ್ತಿಗೆಯ ಮೇಲೆ ಕತ್ತುಹಿಸುಕಿರುವ ಗುರುತುಗಳು ಇದ್ದವು. ನನಗೆ ಗುಂಡಿ ಅಗೆಯಲು ಮತ್ತು ಅವಳ ಶಾಲಾ ಬ್ಯಾಗ್ ನೊಂದಿಗೆ ಅವಳನ್ನು ಹೂಳಲು ನಿರ್ದೇಶಿಸಿದರು. ಆ ಸನ್ನಿವೇಶವು ಇಂದಿಗೂ ಮಾಸಿಲ್ಲ.

ಮತ್ತೊಂದು ಮರೆಯಲಾಗದ ಘಟನೆಯು 20ರ ಹರೆಯದ ಮಹಿಳೆಯ ಮೃತ ದೇಹದ್ದಾಗಿತ್ತು. ಆಕೆಯ ಮುಖ ಆಸಿಡ್ ನಿಂದ ಸುಡಲಾಗಿತ್ತು. ಆ ದೇಹವನ್ನು ದಿನಪತ್ರಿಕೆಯಿಂದ ಮುಚ್ಚಲಾಗಿತ್ತು. ಅಕೆಯ ದೇಹವನ್ನು ಹೂಳದೆ. ಆಕೆಯ ಪಾದರಕ್ಷೆ ಮತ್ತು ಅವಳ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಅವಳೊಂದಿಗೆ ಸುಡಲು ನನಗೆ ಮೇಲ್ವಿಚಾರಕರು ಸೂಚಿಸಿದರು.

ಮತ್ತು, ಧರ್ಮಸ್ಥಳ ಪ್ರದೇಶದಲ್ಲಿ ಭಿಕ್ಷಾಟನೆಗೆ ಬಂದ ಬಡ ಮತ್ತು ನಿರ್ಗತಿಕ ಪುರುಷರು ವ್ಯವಸ್ಥಿತವಾಗಿ ಕೊಲೆಯಾದ ಅನೇಕ ಘಟನೆಗಳಿಗೆ ನಾನು ಸಾಕ್ಷಿಯಾದೆ. ಅವರನ್ನು ಕೊಲ್ಲುವ ವಿಧಾನವು ಅತ್ಯಂತ ಕ್ರೂರವಾಗಿತ್ತು. ಅವರನ್ನು ಕೊಠಡಿಯ ಕುರ್ಚಿಗಳಿಗೆ ಕಟ್ಟಲಾಗುತ್ತಿತ್ತು ಮತ್ತು ಟವಲ್ ಗಳನ್ನು ಬಳಸಿ ಹಿಂದಿನಿಂದ ಹಿಡಿದು ಉಸಿರುಗಟ್ಟಿಸಲಾಗುತ್ತಿತ್ತು. ಈ ಕೊಲೆಗಳು ನನ್ನ ಸಮ್ಮುಖದಲ್ಲೇ ನಡೆದವು. ದೂರದ ಅರಣ್ಯ ಪ್ರದೇಶಗಳಲ್ಲಿ ಈ ದೇಹಗಳನ್ನು ಹೂತು ಹಾಕಲು ನನಗೆ ನಿರ್ದೇಶನ ನೀಡುತ್ತಿದ್ದರು.

ನನ್ನ ಉದ್ಯೋಗಾವಧಿಯಲ್ಲಿ, ಧರ್ಮಸ್ಥಳ ಪ್ರದೇಶದಾದ್ಯಂತ ಹಲವಾರು ಸ್ಥಳಗಳಲ್ಲಿ ಮೃತ ದೇಹಗಳನ್ನು ಹೂತು ಹಾಕಿರುತ್ತೇನೆ. ಕೆಲವೊಮ್ಮೆ. ನಿರ್ದೇಶಿಸಿದಂತೆ ಮೃತ ದೇಹಗಳನ್ನು ಡೀಸೆಲ್ ಬಳಸಿ ಸುಟ್ಟು ಹಾಕಿರುತ್ತೇನೆ. ಯಾವುದೇ ಕುರುಹು ಸಿಗದಂತೆ ಸುಟ್ಟು ಹಾಕಬೇಕೆಂದು ನಿರ್ದೇಶಿಸುತ್ತಿದ್ದರು. ಈ ರೀತಿ ವಿಲೇವಾರಿಯಾದ ಮೃತ ದೇಹಗಳು ನೂರಾರು.

2014ರ ಹೊತ್ತಿಗೆ. ನಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆಯು ಅಸಹನೀಯವಾಗಿತ್ತು. ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಯೂ ಲೈಂಗಿಕ ಕಿರುಕುಳಕ್ಕೊಳಗಾದಾಗ ನಾವೆಲ್ಲರೂ ಅಲ್ಲಿಂದ ಕೂಡಲೇ ತಪ್ಪಿಸಿಕೊಳ್ಳಬೇಕೆಂದು ಅರಿತೆವು. ಇಲ್ಲವಾದಲ್ಲಿ, ಅಲ್ಲೇ ಅಂತ್ಯ ಕಾಣುವ ಭಯ ಜೋರಾಯಿತು.

ಡಿಸೆಂಬರ್ 2014ರಲ್ಲಿ, ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಸುಳಿವು ಯಾರಿಗೂ ಸಿಗದಂತೆ ಖಚಿತಪಡಿಸಿಕೊಂಡೆ. ಅಂದಿನಿಂದ ಈವರೆಗೆ, ನೆರೆ ರಾಜ್ಯವೊಂದರಲ್ಲಿ ಜೀವ ಭಯದಿಂದ ತಲೆಮರೆಸಿಕೊಂಡು ವಾಸಿಸುತ್ತಿದ್ದೇವೆ. ನಿವಾಸಗಳನ್ನೂ ಬದಲಾಯಿಸುತ್ತಿದ್ದೇವೆ. ಆದರೆ, ಮಾನಸಿಕ ಪಾಪ ಪ್ರಜ್ಞೆಯ ಹೊರೆಯಲ್ಲಿಯೇ ಇನ್ನೂ ಬದುಕುತ್ತಿದ್ದೇನೆ.

ಆದರೆ, ನನ್ನ ಆತ್ಮ ಸಾಕ್ಷಿಯು ಇನ್ನೂ ಮೌನ ಮುಂದುವರೆಸಲು ಅನುಮತಿಸುತ್ತಿಲ್ಲ. ಮಣ್ಣಾಗಿ ಹೋದ ಅವರೆಲ್ಲರೂ ಯಾರೆಂದು ಮತ್ತು ಅವರ ಅತ್ಯಾಚಾರ ಹಾಗೂ ಕೊಲೆಗೆ ಕಾರಣಕರ್ತರು ಯಾರೆಂದು ಇನ್ನಾದರೂ ಎಲ್ಲರಿಗೂ ಗೊತ್ತಾಗಬೇಕೆಂದು ನಿರ್ಧರಿಸಿರುವೆ. ನನ್ನ ಬದುಕಿಗೆ ಅಂಟಿರುವ ಅಪಾಯದ ಹೊರತಾಗಿಯೂ ನಾನು ಮಾತನಾಡಲೇಬೇಕೆಂದು ತೀರ್ಮಾನಿಸಿರುವೆ.

ನಾನು ಹೇಳುತ್ತಿರುವುದರ ಪುರಾವೆಯಾಗಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೃತ ದೇಹ ಹೂಳಿದ್ದ ಸ್ಥಳವೊಂದಕ್ಕೆ ರಹಸ್ಯವಾಗಿ ಹೋಗಿ ಕಳೇಬರವನ್ನು ಹೊರತೆಗೆದಿದ್ದೇನೆ. ಈ ಸ್ಥಳದ ವಿವರವನ್ನು ತನಿಖಾಧಿಕಾರಿಗೆ ನೀಡಲು ಸಿದ್ಧನಿರುವೆ. ಈ ಕಳೇಬರದ ಛಾಯಾಚಿತ್ರ ಮತ್ತು ಕಳೇಬರವನ್ನೇ ಈ ದೂರಿನೊಂದಿಗೆ ಸಲ್ಲಿಸುತ್ತಿದ್ದೇನೆ.

ಧರ್ಮಸ್ಥಳ ಪ್ರದೇಶದಾದ್ಯಂತ ನನ್ನ ಜೀವ ಉಳಿಸಿಕೊಳ್ಳಲು, ಅನಿವಾರ್ಯವಾಗಿ ಮತ್ತು ರಹಸ್ಯವಾಗಿ ಮೃತ ದೇಹಗಳನ್ನು ಹೂತು ಹಾಕಿರುವ ಸ್ಥಳಗಳನ್ನು ತನಿಖಾಧಿಕಾರಿಗೆ ತೋರಿಸಲು ನಾನು ಸಿದ್ಧನಿರುವೆ. ನಾನು ಹೂತಿಟ್ಟ ಶವಗಳ ಅವಶೇಷಗಳನ್ನು ಪೊಲೀಸ್ ಸಮ್ಮುಖದಲ್ಲಿ ಹೊರತೆಗೆಯಲು ಸಿದ್ಧನಿರುವೆ.

ಈ ದೂರಿನಲ್ಲಿ ಹೇಳಿರುವ ಆರೋಪಿತರು ಧರ್ಮಸ್ಥಳ ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟವರು ಮತ್ತು ಇತರೆ ಸಿಬ್ಬಂದಿಗಳು ಮೃತದೇಹಗಳನ್ನು ಹೂತು ಹಾಕುವಂತೆ ನಿರ್ದೇಶನ ನೀಡಿ ನನಗೆ ನಿರಂತರ ಜೀವ ಬೆದರಿಕೆ ಮತ್ತು ಹಿಂಸೆಯನ್ನು ನೀಡುತ್ತಿದ್ದವರು ಇವರೇ. ಆದರೆ, ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಈ ದೂರಿನಲ್ಲಿಯೇ ಬಹಿರಂಗಪಡಿಸಲು ನನಗೆ ಸಾಧ್ಯವಿರುವುದಿಲ್ಲ. ನಾನು ಹೆಸರಿಸುವ ಕೆಲವು ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಗಳಾಗಿದ್ದು, ಅವರನ್ನು ವಿರೋಧಿಸುವವರನ್ನು ತೊಡೆದುಹಾಕುವ ಪ್ರವೃತ್ತಿ ಹೊಂದಿರುವವರಾಗಿದ್ದಾರೆ. 2018ರ ಸಾಕ್ಷಿ ರಕ್ಷಣೆಯಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ದೊರೆತ ಕೂಡಲೇ, ಎಲ್ಲಾ ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಮತ್ತು ಅವರ ನಿರ್ದಿಷ್ಟ ಪಾತ್ರಗಳನ್ನು ಒಳಗೊಂಡಂತೆ ಸಂಪೂರ್ಣ ವಿವರವನ್ನು ಬಹಿರಂಗಗೊಳಿಸಲು ಸಿದ್ಧನಿರುವೆ.

ಸುಳ್ಳು ಮಾಹಿತಿಯನ್ನು ಸಲ್ಲಿಸುವ ಪರಿಣಾಮಗಳ ಸಂಪೂರ್ಣ ಜ್ಞಾನದೊಂದಿಗೆ ನಾನು ಈ ದೂರನ್ನು ನೀಡುತ್ತಿದ್ದೇನೆ. ಮೇಲೆ ಹೇಳಿದ ವಿಚಾರವು ನನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿಯೇ ಹೇಳಿರುತ್ತೇನೆಂದು ದೃಢೀಕರಿಸುತ್ತೇನೆ. ನಾನು ಹೇಳಿರುವುದರ ಸತ್ಯತೆಯನ್ನು ಸ್ಥಾಪಿಸಲು ಪಾಲಿಗ್ರಾಫ್ ಅಥವಾ ಇನ್ಯಾವುದೇ ಪರೀಕ್ಷೆಗೆ ಒಳಪಡಲು ಸಿದ್ಧನಿದ್ದೇನೆ.

ಮುಂದುವರೆದು, ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಹೂತು ಹಾಕಿರುವ ನೂರಾರು ಮೃತದೇಹಗಳು ವಿಧಿವತ್ತಾದ ಗೌರವ ಮತ್ತು ಅಂತ್ಯ ಸಂಸ್ಕಾರಗಳಿಂದ ವಂಚಿತವಾಗಿರುತ್ತವೆ. ಈಗ ಹೊರತೆಗೆಯುವ ಕಳೇಬರಗಳಿಗೆ ಗೌರವ ಪೂರಕ ಅಂತ್ಯಸಂಸ್ಕಾರವಾದಲ್ಲಿ ಆ ನೊಂದ ಆತ್ಮಗಳಿಗೆ ಶಾಂತಿ ಸಿಕ್ಕಿ ನನ್ನ ಪಾಪ ಪ್ರಜ್ಞೆಯೂ ಕಡಿಮೆ ಆಗುತ್ತದೆ ಎಂಬ ನಂಬಿಕೆ ನನ್ನದು. ಈ ಕಾರಣದಿಂದಾಗಿ, ನಾನು ಹೂತಿಟ್ಟ ನೂರಾರು ಶವಗಳನ್ನು ಹೊರ ತೆಗೆಯಲು ಕಾನೂನಿನ ಅನ್ವಯ ಅವಕಾಶ ಮಾಡಿಕೊಡಬೇಕಾಗಿ ವಿನಂತಿ.

ಸಧ್ಯ 29 ವರ್ಷಗಳಿಂದ ಹೂತಿಟ್ಟ ಸತ್ಯಗಳಿಗೆ ಮುಕ್ತಿ ಸಿಗಬಹುದೇ ಎಂಬುದು ಈ ಮುಂದಿನ ಯಕ್ಷಪ್ರಶ್ನೆಯಾಗಿದೆ. ಅನಾಮಧೇಯ ದೂರುದಾರ ವ್ಯಕ್ತಿಯೇ ಬಾಯ್ಬಿಟ್ಟಂತೆ ನೂರಾರು ಶವಗಳು ಧರ್ಮಸ್ಥಳ ಗ್ರಾಮದಲ್ಲಿ ಮಣ್ಣಲ್ಲಿ ಮಣ್ಣಾಗಿರಬಹುದಾದಲ್ಲಿ ಬಹುಶಃ ದೇಶದ ಇತಿಹಾಸದಲ್ಲೇ ಇಂತಹ ದೊಡ್ಡ ಮಾರಣ ಹೋಮ ಎಲ್ಲೂ ಆಗಿರಲಾರದು ಎಂಬುದು ಅತ್ಯಂತ ಕುತೂಹಲ ಮತ್ತು ಆತಂಕಕಾರಿ ಸಂಗತಿಯಾಗಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇನ್ನು ಮುಂದಾದರೂ ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ಅಪರಾಧಿಗಳನ್ನು ಅಡಗಿರುವ ಬಿಲದಿಂದ ಹೊರತೆಗೆದು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲಿಸುವರೇ ಎಂಬ ಪ್ರಶ್ನೆ ಈಗ ಎಲ್ಲರ ಮುಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page