Thursday, June 13, 2024

ಸತ್ಯ | ನ್ಯಾಯ |ಧರ್ಮ

ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು ; ಪೊಲೀಸರಿಗೆ ಸಿಗದ ‘ಬುದ್ಧಿವಂತ’

ಸಮಾಜದ ತಳ ವರ್ಗಗಳ ಅಪಹಾಸ್ಯ ಮಾಡುವ ಗಾದೆ ಮಾತು ಬಳಸಿದ ಆರೋಪದ ಮೇಲೆ ಚಿತ್ರನಟ ಉಪೇಂದ್ರ ವಿರುದ್ಧ ಹಲವು ಕಡೆಗಳಲ್ಲಿ ಪೊಲೀಸರಿಗೆ ದೂರು ಸಲ್ಲಿಕೆಯಾಗುತ್ತಿದೆ. ಈಗಾಗಲೇ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ಕೂಡಾ ದಾಖಲಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ನೇತೃತ್ವದ ಕರ್ನಾಟಕ ರಣಧೀರ ಪಡೆ ಕೂಡಾ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, FIR ಕೂಡಾ ದಾಖಲಾಗಿದೆ.

ಕರ್ನಾಟಕ ರಣಧೀರ ಪಡೆ ಸಂಘಟನೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್, “ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು/ಜಾತಿಗಳನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂಧನೆ ಮಾಡಿರುವ ನಟ ಉಪೇಂದ್ರ ವಿರುದ್ಧ ಕಲಂ 505 (1)(B)(C) , 153 a, 295, 295 A, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಅಟ್ರಾಸಿಟಿ ದಾಖಲು ಮಾಡುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ಉಪೇಂದ್ರ ಒಬ್ಬ ಬ್ರಾಹ್ಮಣ ಸಮುದಾಯದವರಾಗಿದ್ದು, ತಳ ಸಮುದಾಯ ಎಂದೇ ಗುರುತಿಸಿಕೊಂಡು ಬಂದ ಹೊಲಯ ಸಮುದಾಯದವರು ವಾಸಿಸುವ ಪ್ರದೇಶವನ್ನು ‘ಹೊಲಗೇರಿ’ ಎಂಬ ಪದದಿಂದ ಅವಹೇಳನಕಾರಿಯಾಗಿ ಬಳಸಿದ್ದಾರೆ. ಅದರಲ್ಲೂ ಊರು ಅಂದ್ರೆ ಕೆಟ್ಟ ಪ್ರದೇಶ, ಕೆಟ್ಟ ಜನರೂ ಇರುತ್ತಾರೆ ಎನ್ನುವುದನ್ನು ಹೇಳಲು ಹೋಗಿ, ‘ಊರು ಅಂದ್ರೆ ಹೊಲಗೇರಿ ಇರುತ್ತೆ, ನಾವು ಅಂತವರ ವಿರುದ್ಧ ಇರಬೇಕು..’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಸ್ಪಷ್ಟವಾಗಿ ದಲಿತ ನಿಂದನೆ ಅಡಿಯಲ್ಲಿ ಬರುವಂತದ್ದು ಎಂದೂ ಕರ್ನಾಟಕ ರಣಧೀರ ಪಡೆ ಆರೋಪಿಸಿದೆ.

ಇದು ನೇರವಾಗಿ ಸಮಾಜದ ಜನ ಇಂತವರ (ದಲಿತ ಸಮುದಾಯದವರ) ವಿರುದ್ಧವಾಗಿ ಇರಬೇಕು ಎಂದು ಕರೆ ನೀಡಲಾಗಿದೆ. ಸ್ಪಷ್ಟವಾಗಿ ಇದು ಸಮಾಜವನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಕೆಲಸ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆ ಉಂಟುಮಾಡುವ ಉದ್ದೇಶದಿಂದ ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸುವುದಾಗಿದೆ‌.. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಟ ಉಪೇಂದ್ರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬೈರಪ್ಪ ಹರೀಶ್ ಕುಮಾರ್ ಪೊಲೀಸರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ನಟ ಉಪೇಂದ್ರ ಮೇಲೆ FIR ದಾಖಲು ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯೊಬ್ಬರು ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇಲ್ಲೂ ಕೂಡಾ ಉಪೇಂದ್ರ ವಿರುದ್ಧ FIR ದಾಖಲಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ನಟ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೋಮವಾರದ ದಿನ ರಾಜ್ಯದ ಹಲವು ಕಡೆಗಳಲ್ಲಿ ದೂರು ದಾಖಲಾಗುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ : ಪೊಲೀಸರೊಡನೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ಉಪೇಂದ್ರ – ಫೋನ್‌ ಸ್ಚಿಚಾಫ್‌, ಮನೆಯಲ್ಲಿಲ್ಲ ಎನ್ನುತ್ತಿರುವ ಸೆಕ್ಯುರಿಟಿ

ಇತ್ತ ವಿಚಾರಣೆ ಹಿನ್ನೆಲೆಯಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಉಪೇಂದ್ರ ಅವರನ್ನು ಸಂಪರ್ಕಿಸಲು ಮುಂದಾದರೆ, ಉಪೇಂದ್ರ ಯಾರ ಕೈಗೂ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಮನೆಯಲ್ಲಿ ಸೆಕ್ಯೂರಿಟಿ ಕೊಟ್ಟ ಮಾಹಿತಿಯಂತೆ ಅವರು ಮನೆಯಲ್ಲಿ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್
ಈ ನಡುವೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರುದಾರ ದಲಿತ ಅಲ್ಲದ ಕಾರಣಕ್ಕೆ ಆ ಕೇಸಿನ ರದ್ದತಿಗೆ ಉಪೇಂದ್ರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಕೂಡಾ ನೀಡಿದೆ. ಆದರೆ ಬೈರಪ್ಪ ಹರೀಶ್ ಕುಮಾರ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿಗೆ ಉಪೇಂದ್ರ ಅವರಿಗೆ ಹೈಕೋರ್ಟ್ ನಿಂದ ತಡೆ ಸಿಕ್ಕಿಲ್ಲ.

ಬೈರಪ್ಪ ಹರೀಶ್ ಕುಮಾರ್ ತಮ್ಮ ದೂರಿನಲ್ಲಿ ದಾಖಲಿಸಿದ ಎಲ್ಲಾ ಕಲಂ ಅಡಿಯಲ್ಲೂ ಕೇಸು ದಾಖಲಾಗಿದೆ. ಮೇಲಾಗಿ ನಟ ಉಪೇಂದ್ರ ಯಾವ ಮಾನದಂಡದ ಅಡಿಯಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಕೇಸು ರದ್ಧತಿಗೆ ಅವಕಾಶ ಕೋರಿದ್ದರೋ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾದ ಕೇಸ್ ಇದಕ್ಕೆ ವ್ಯತಿರಿಕ್ತವಾಗಿದೆ. ಯಾಕೆಂದರೆ ಸ್ವತಃ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದಲೇ ಕೇಸ್ ದಾಖಲು ಮಾಡಲಾಗಿದೆ. ಹಾಗಾಗಿ ನಟ ಉಪೇಂದ್ರರಿಗೆ ಈ ಪ್ರಕರಣದಿಂದ ಬಿಡುಗಡೆ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು