Monday, January 12, 2026

ಸತ್ಯ | ನ್ಯಾಯ |ಧರ್ಮ

ಹುಬ್ಬಳ್ಳಿಯಲ್ಲೇ ನಡೆದ ಮತ್ತೊಂದು ಭೀಕರ ಕೊ*ಲೆ ; ನೇಹಾ ಸಾವಿಗೆ ಮರುಗಿದವರು ಈಗೆಲ್ಲಿ?

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರ ಪುತ್ರಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.

ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ (20) ಎಂದು ಗುರುತಿಸಲಾಗಿದ್ದು, ವಿಶ್ವ ಅಲಿಯಾಸ್​ ಗಿರೀಶ್​ ಎಂಬಾತ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆಮಾರಿಸಿಕೊಂಡಿದ್ದಾನೆ. ಪೊಲೀಸರು ಆರೋಪಿ ವಿಶ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಪಿ ಹಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ, ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆ ಕೂಡ ನೇಹಾ ಹಿರೇಮಠ್ ಕೊಲೆ ಪ್ರಕರಣದಂತೆಯೇ ಕಂಡುಬಂದರೂ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಲು ಈ ವರಗೆ ಯಾವುದೇ ಸೆಲೆಬ್ರಿಟಿಗಳೂ ರಾಜಕಾರಣಿಗಳು ಅಥವಾ ಸಂಘ ಸಂಸ್ಥೆಗಳು ಮುಂದಾಗದಿರುವ ಬಗ್ಗೆ ಹಲವು ಅನುಮಾನ ಮೂಡಿದೆ. ಆರೋಪಿ ಬೇರೆ ಧರ್ಮದವನಾದರೆ ಮಾತ್ರ ದನಿ ಎತ್ತುವ ಮಂದಿಯ ಬೂಟಾಟಿಕೆ ಬಗ್ಗೆಯೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆಯೇ ಆರೋಪಿ ವಿಶ್ವ, ನೇಹಾ ಮಾದರಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅದರಂತೆಯೇ ಬುಧವಾರ (ಮೇ 15) ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪತ್ತೆ ಹಚ್ಚಲಾಗುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page