Wednesday, August 20, 2025

ಸತ್ಯ | ನ್ಯಾಯ |ಧರ್ಮ

‘ದಿ ವೈರ್’ ಪತ್ರಕರ್ತರ ಮೇಲೆ ಮತ್ತೊಂದು ದೇಶದ್ರೋಹದ ಪ್ರಕರಣ: ಎಡಿಟರ್ಸ್‌ ಗಿಲ್ಡ್ ಖಂಡನೆ

ದೆಹಲಿ: ಜುಲೈನಲ್ಲಿ ತಮ್ಮ ಮೇಲೆ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೊಸ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ‘ದಿ ವೈರ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಸೇರಿದಂತೆ ಅದರ ಪತ್ರಕರ್ತರ ವಿರುದ್ಧ ಯಾವುದೇ ತರಾತುರಿಯ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ದಿನವೇ ಅಸ್ಸಾಂ ಪೊಲೀಸರು ಮತ್ತೊಂದು ದೇಶದ್ರೋಹ ಪ್ರಕರಣ ದಾಖಲಿಸಿ ವರದರಾಜನ್ ಮತ್ತು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ಗುವಾಹಟಿ ಕ್ರೈಂ ಬ್ರಾಂಚ್ ಸಮನ್ಸ್ ಜಾರಿ ಮಾಡಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಸೈಮರ್‌ಜ್ಯೋತಿ ರೇ ಅವರು ವರದರಾಜನ್ ಅವರಿಗೆ ನೀಡಿದ ಸಮನ್ಸ್‌ನಲ್ಲಿ ಎಫ್‌ಐಆರ್ ದಿನಾಂಕ ಅಥವಾ ಆರೋಪಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಮತ್ತು ಎಫ್‌ಐಆರ್ ಪ್ರತಿಯನ್ನೂ ಲಗತ್ತಿಸಲಾಗಿಲ್ಲ.

ಆಗಸ್ಟ್ 14ರಂದು ‘ದಿ ವೈರ್’ ಕಚೇರಿಗೆ ಸಮನ್ಸ್ ತಲುಪಿದ್ದು, ಆಗಸ್ಟ್ 18ರಂದು ಕರಣ್ ಥಾಪರ್ ಅವರಿಗೂ ಇದೇ ರೀತಿಯ ಸಮನ್ಸ್ ತಲುಪಿದೆ. ಆಗಸ್ಟ್ 22ರಂದು ಗುವಾಹಟಿಯ ಪಾನ್‌ಬಜಾರ್‌ನಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಹಾಜರಾಗಲು ಸಮನ್ಸ್‌ನಲ್ಲಿ ಸೂಚಿಸಲಾಗಿದೆ. ಹಾಜರಾಗದಿದ್ದಲ್ಲಿ ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಅದರಲ್ಲಿ ಎಚ್ಚರಿಸಲಾಗಿದೆ.

ವರದರಾಜನ್ ಮತ್ತು ಕರಣ್ ಥಾಪರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದನ್ನು ಪತ್ರಕರ್ತರ ಸಂಘಗಳು ತೀವ್ರವಾಗಿ ಖಂಡಿಸಿವೆ. ಅಸ್ಸಾಂ ಪೊಲೀಸರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ (PCI), ಇಂಡಿಯನ್ ವುಮೆನ್ ಪ್ರೆಸ್ ಕಾರ್ಪ್ಸ್, ಮತ್ತು ಎಡಿಟರ್ಸ್ ಗಿಲ್ಡ್ ಆಕ್ರೋಶ ವ್ಯಕ್ತಪಡಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page