Friday, September 19, 2025

ಸತ್ಯ | ನ್ಯಾಯ |ಧರ್ಮ

ಭಾರತಕ್ಕೆ ಟ್ರಂಪ್ ಸರ್ಕಾರದಿಂದ ಮತ್ತೊಂದು ಆಘಾತ: ಇರಾನ್ ಬಂದರು ಮೇಲಿನ ನಿರ್ಬಂಧ ವಿನಾಯಿತಿ ರದ್ದು

ಹೊಸದಿಲ್ಲಿ: ಇರಾನ್‌ನ ಚಾಬಹಾರ್ ಬಂದರಿನಲ್ಲಿ ಕಾರ್ಯಾಚರಣೆಗಳ ನಿರ್ವಹಣೆಗಾಗಿ 2018 ರಲ್ಲಿ ನೀಡಲಾಗಿದ್ದ ನಿರ್ಬಂಧಗಳ ವಿನಾಯಿತಿಯನ್ನು (Waiver) ರದ್ದುಗೊಳಿಸಲಾಗುವುದು ಎಂದು ಅಮೆರಿಕ ಘೋಷಿಸಿದೆ.

ಈ ನಿರ್ಧಾರದಿಂದಾಗಿ ಬಂದರು ಅಭಿವೃದ್ಧಿಯಲ್ಲಿ ಪಾಲುದಾರನಾಗಿರುವ ಭಾರತದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಸೆಪ್ಟೆಂಬರ್ 29 ರಿಂದ ಜಾರಿಗೆ ಬರಲಿರುವ ಈ ಕ್ರಮದ ಹಿಂದೆ ಇರಾನ್ ಮೇಲೆ ಗರಿಷ್ಠ ಮಟ್ಟದ ಒತ್ತಡ ಹೇರುವುದು ಅಮೆರಿಕದ ಉದ್ದೇಶವಾಗಿ ಕಾಣುತ್ತಿದೆ.

ನಿರ್ಬಂಧ ವಿನಾಯಿತಿ ರದ್ದತಿ ಹಿನ್ನೆಲೆ

ಇರಾನ್ ಫ್ರೀಡಮ್ ಅಂಡ್ ಕೌಂಟರ್-ಪ್ರೊಲಿಫರೇಷನ್ ಆಕ್ಟ್ (IFCA) ಅಡಿಯಲ್ಲಿ 2018 ರಲ್ಲಿ ಬಂದರು ಪ್ರದೇಶದಲ್ಲಿ ವಿವಿಧ ದೇಶಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳಿಂದ ಅಮೆರಿಕ ವಿನಾಯಿತಿ ನೀಡಿತ್ತು. ಇದರಿಂದಾಗಿ ಭಾರತ ಸೇರಿದಂತೆ ಇತರ ದೇಶಗಳು ಅಮೆರಿಕದ ನಿರ್ಬಂಧಗಳನ್ನು ಎದುರಿಸದೆ ಬಂದರಿನಲ್ಲಿ ತಮ್ಮ ಕಾರ್ಯಗಳನ್ನು ಮುಂದುವರಿಸಲು ಅವಕಾಶ ದೊರಕಿತ್ತು.

ಚಾಬಹಾರ್ ಬಂದರು ಭಾರತಕ್ಕೆ ವ್ಯೂಹಾತ್ಮಕವಾಗಿ ಅತ್ಯಂತ ನಿರ್ಣಾಯಕವಾಗಿದೆ. ಇದು ಪಾಕಿಸ್ತಾನವನ್ನು ಸ್ಪರ್ಶಿಸದೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ವಾಣಿಜ್ಯ ಮಾರ್ಗವನ್ನು ಒದಗಿಸುತ್ತದೆ.

ಇರಾನ್ ಆಡಳಿತವನ್ನು ಪ್ರತ್ಯೇಕಗೊಳಿಸಲು ಗರಿಷ್ಠ ಮಟ್ಟದ ಒತ್ತಡ ತರುವ ನೀತಿಯ ಭಾಗವಾಗಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ (ಸೆಪ್ಟೆಂಬರ್ 16) ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿರ್ಧಾರವು ಜಾರಿಗೆ ಬಂದ ನಂತರ ಚಾಬಹಾರ್ ಬಂದರಿನಲ್ಲಿ ಕಾರ್ಯನಿರ್ವಹಿಸುವ ದೇಶಗಳ ಮೇಲೆ IFCA ಅಡಿಯಲ್ಲಿ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ. ಅಮೆರಿಕದ ಈ ಇತ್ತೀಚಿನ ನಿರ್ಧಾರವು ಭಾರತವನ್ನು ತೀವ್ರ ಇಕ್ಕಟ್ಟಿನ ಸ್ಥಿತಿಗೆ ತಳ್ಳಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page