ಜಿರಿಬಾಮ್: ಮಣಿಪುರದಲ್ಲಿ ಮೈತೆಯಿ-ಹ್ಮಾರ್ ಸಮುದಾಯಗಳ ನಡುವೆ ಶಾತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೆ ಮತ್ತೊಂದು ಹಿಂಸಾಚಾರ ನಡೆದಿರುವ ಬಗ್ಗೆ ದಿ ಇಂಡಿಯನ್ ಎಕ್ಸಪ್ರೆಸ್ ವರದಿ ಪ್ರಕಟಿಸಿದೆ.
ಶಾಂತಿ ಕಾಪಾಡುವುದಾಗಿ ಉಬಯ ಸಮುದಾಯಗಳು ಒಪ್ಪಿಗೆ ಸೂಚಿಸಿದ 24 ಗಂಟೆ ಕಳೆಯುವುದೊರೊಳಗೆ ಈ ದುರ್ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಸೆಜಾಂಗ್ ಎಂಬ ಕುಕಿ ಹಳ್ಳಿಯ ಸಮೀಪವಿರುವ ಬೆಂಗಾಲಿ ಬಹುಸಂಖ್ಯಾತ ಪ್ರದೇಶವಾದ ಜಿರಿಬಾಮ್‌ನ ಲಾಲ್ಪಾನಿಯಲ್ಲಿ ಮೈತೆಯಿ ಕುಟುಂಬದ ಮನೆಗೆ ಬೆಂಕಿ ಹಚ್ಚಲಾಗಿದೆ.
“ಲಾಲ್ಪಾನಿ ಮೈತೆಯಿ ಸಮುದಾಯದ ನಿವಾಸಿಗಳು ವಾಸಿಸುತ್ತಿದ್ದ ಮನೆಗಳಿದ್ದ ಕಾಲನಿಯಲ್ಲಿ ಇರುವ ಮನೆ ಇದಾಗಿದೆ. ಈ ಪ್ರದೇಶದಲ್ಲಿ ಹಿಂಸಾಚಾರ ಸ್ಫೋಟಗೊಂಡ ನಂತರ, ಬಹುತೇಕ ಮಂದಿ ತಮ್ಮ ಮನೆಗಳನ್ನು ತೊರೆದು ಹೋಗಿದ್ದರು. ಈ ಪ್ರದೇಶದಲ್ಲಿನ ಭದ್ರತಾ ವೈಫಲ್ಯದ ಲಾಭವನ್ನು ಪಡೆದು, ಯಾರೋ ದುಷ್ಕರ್ಮಿಗಳುಮನೆಗೆ ಬೆಂಕಿಯಿಟ್ಟಿದ್ದಾರೆ. ಅವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ದುರ್ಘಟನಾ ಸ್ಥಳಕ್ಕೆ ನಾವು ಸಿಆರ್‌ಪಿಎಫ್‌ನೊಂದಿಗೆ ಸಂಯೋಜಿತ ತಂಡವನ್ನು ಕಳುಹಿಸಿದ್ದೇವೆ” ಎಂದು ಜಿರಿಬಾಮ್ ಪೊಲೀಸ್ ವರಿಷ್ಠಾಧಿಕಾರಿ ಎಂ ಪ್ರದೀಪ್ ಸಿಂಗ್ ತಿಳಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ನಾವು ಪರಿಸ್ಥಿತಿ ನಿಯಂತ್ರಿಸಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಸಲು ಸಭೆ ನಡೆಸುತ್ತಿದ್ದೇವೆ” ಎಂದು ಪ್ರದೀಪ್ ಸಿಂಗ್ ಹೇಳಿದ್ದಾರೆ.
ಗುರುವಾರ ಅಸ್ಸಾಂನ ಕ್ಯಾಚಾರ್‌ನಲ್ಲಿರುವ ಸಿಆರ್‌ಪಿಎಫ್ ಸೌಲಭ್ಯದಲ್ಲಿ ನಡೆದ ಮೈತೆಯಿ ಮತ್ತು ಹ್ಮಾರ್ ಸಮುದಾಯಗಳ ಪ್ರತಿನಿಧಿಗಳ ಸಭೆಯಲ್ಲಿ ಶಾಂತಿ ಒಪ್ಪಂದಕ್ಕೆ ಮಾಡಿಕೊಳ್ಳಲಾಗಿತ್ತು. ಜಿರಿಬಾಮ್ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿರಿಬಾಮ್ ಜಿಲ್ಲೆಯ ಥಾಡೌ, ಪೈಟೆ ಮತ್ತು ಮಿಜೋ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇ ಸಭೆಯ ಕೆಲವೇ ಗಂಟೆಗಳಲ್ಲಿ ಈ ಹಿಂಸಾಚಾರ ಮರುಕಳಿಸಿದೆ.