Home ಅಂಕಣ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಬಲಪಂಥೀಯ ರಾಷ್ಟ್ರೀಯತೆ: ಭಾರತ ಸಾಗುತ್ತಿರುವ ದಾರಿ ಯಾವುದು? ರಾಮ್ ಪುನಿಯಾನಿ ವಿಶ್ಲೇಷಣೆ

ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಬಲಪಂಥೀಯ ರಾಷ್ಟ್ರೀಯತೆ: ಭಾರತ ಸಾಗುತ್ತಿರುವ ದಾರಿ ಯಾವುದು? ರಾಮ್ ಪುನಿಯಾನಿ ವಿಶ್ಲೇಷಣೆ

0

ಯಾವುದೇ ದೇಶದ ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ಆಧಾರದ ಮೇಲೆ ಅಳೆಯಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೂರು ದೇಶಗಳ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ, ಅವರು ಹಿಂದೂತ್ವಕ್ಕೆ ವೈವಿಧ್ಯತೆಯನ್ನು ಸೇರಿಸುವ ಮೂಲಕ ಅದನ್ನು ವಿಸ್ತರಿಸಿದ್ದಾರೆ ಎಂದು ಕೆಲ ವಿಶ್ಲೇಷಕರು ಶ್ಲಾಘಿಸಿದ್ದಾರೆ.

ಆದರೆ, ಭಾರತದ ಶ್ರೀಮಂತ ಧಾರ್ಮಿಕ ವೈವಿಧ್ಯತೆಯನ್ನು ಒಳಗೊಳ್ಳುವಂತೆ ಹಿಂದುತ್ವವನ್ನು ಎಂದಾದರೂ ವಿಸ್ತರಿಸಲು ಸಾಧ್ಯವೇ? ಭಾರತವು ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕಗಳಲ್ಲಿ ತೀವ್ರವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ, ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಪ್ರಸ್ತುತ ಸ್ಥಿತಿಯನ್ನು ಹೇಗೆ ನೋಡುತ್ತಿವೆ ಎಂಬುದನ್ನು ಗಮನಿಸುವುದು ಮುಖ್ಯ.

ಕಳೆದ ಒಂದು ದಶಕದಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಗಮನಿಸಿದರೆ ವಾಸ್ತವ ಚಿತ್ರಣ ಸ್ಪಷ್ಟವಾಗುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್’ (ಕೆಯುಸಿಎಲ್) ಸಭೆಯಲ್ಲಿ ಮಾನವ ಹಕ್ಕು ಸಂಘಟನೆಗಳು ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಲೋಕಸಭೆಯಲ್ಲಿ 240 ಸಂಸದರನ್ನು, ರಾಜ್ಯಸಭೆಯಲ್ಲಿ 117 ಸಂಸದರನ್ನು ಹೊಂದಿದ್ದು, 20 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ; ಆದರೆ ದೇಶಾದ್ಯಂತ ಪಕ್ಷಕ್ಕೆ ಇರುವುದು ಕೇವಲ ಇಬ್ಬರು ಮುಸ್ಲಿಂ ಶಾಸಕರು ಮಾತ್ರ (ತ್ರಿಪುರಾ ಮತ್ತು ಮಣಿಪುರದಲ್ಲಿ ತಲಾ ಒಬ್ಬರು). ಸಾಮಾಜಿಕ ಚಿಂತನೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ದೂಷಿಸುವ ಪ್ರವೃತ್ತಿ ಹಿಂದೆಂದೂ ಕಾಣದ ಮಟ್ಟಕ್ಕೆ ತಲುಪಿದೆ. ದೆಹಲಿಯಲ್ಲಿ ಇಬ್ಬರು ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ನಡೆಸಿದ ಹಲ್ಲೆಯೂ ಇದಕ್ಕೆ ನಿದರ್ಶನವಾಗಿದೆ.

ಆರಂಭದಲ್ಲಿ ಮುಸ್ಲಿಮರನ್ನು ದ್ವೇಷ ಮತ್ತು ಹಿಂಸಾಚಾರದ ಗುರಿಯಾಗಿಸಲಾಗುತ್ತಿತ್ತು, ಆದರೆ ಈಗ ಅವರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ (Disenfranchise) ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕ್ರಿಯೆ ಎನ್‌ಆರ್‌ಸಿ ಮತ್ತು ಸಿಎಎ ಮೂಲಕ ಆರಂಭವಾಯಿತು. ಶಾಹೀನ್ ಬಾಗ್ ಪ್ರತಿಭಟನೆಗಳ ಫಲವಾಗಿ ಆ ಪ್ರಕ್ರಿಯೆಗಳು ಸದ್ಯಕ್ಕೆ ಸ್ಥಗಿತಗೊಂಡಿದ್ದರೂ, ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರನ್ನು ಕೈಬಿಡುವ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ರೂಪದಲ್ಲಿ ಹೊಸ ತಂತ್ರ ಜಾರಿಯಾಗಿದೆ.

ಪಶ್ಚಿಮ ಬಂಗಾಳದ ಚುನಾವಣೆಗೂ ಮುನ್ನ ಸುಮಾರು 27 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಅನರ್ಹಗೊಳಿಸಲಾಗಿತ್ತು. ಎಸ್‌ಐಆರ್ ಪರಿಣಾಮವಾಗಿ ದೇಶದಲ್ಲಿ ‘ಮತದಾನದ ಹಕ್ಕುಳ್ಳವರು ಮತ್ತು ಇಲ್ಲದವರು’ ಎಂಬ ಎರಡು ವರ್ಗಗಳು ಸೃಷ್ಟಿಯಾಗಲಿದ್ದು, ಸುಮಾರು 16 ಕೋಟಿ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಎಚ್ಚರಿಸಿದ್ದಾರೆ.

ಇದಲ್ಲದೆ, ಮುಸ್ಲಿಮರ ವಿರುದ್ಧ ಬುಲ್ಡೋಜರ್ ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅದನ್ನು ಹೆಮ್ಮೆಯಂತೆ ಬಿಂಬಿಸಲಾಗುತ್ತಿದೆ. ಜತೆಗೆ ಮುಂಬರುವ ಕ್ಷೇತ್ರ ಮರುವಿಂಗಡಣೆಯು (Delimitation) ಬಿಜೆಪಿ ಪ್ರಾಬಲ್ಯದ ರಾಜ್ಯಗಳ ಪ್ರಾತಿನಿಧ್ಯವನ್ನು ಹೆಚ್ಚಿಸಲಿದೆ. ಮತ್ತೊಂದೆಡೆ, ಸಂವಿಧಾನ ಸಭೆಯ ಸಮಿತಿಯ ನಿರ್ಧಾರಕ್ಕೆ ವಿರುದ್ಧವಾಗಿ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹೇರುವ ಪ್ರಯತ್ನಗಳು ನಡೆದಿವೆ.

ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಹಲವು ರಾಜ್ಯಗಳು ತಂದಿರುವ “ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಗಳು” (ಮತಾಂತರ ನಿಷೇಧ ಕಾಯ್ದೆಗಳು) ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಬಳಕೆಯಾಗುತ್ತಿವೆ. ದುರ್ಬಲ ವರ್ಗಗಳು, ಆದಿವಾಸಿಗಳು ಮತ್ತು ದಲಿತರನ್ನು ಗುರಿಯಾಗಿಸಿ ಆರ್‌ಎಸ್‌ಎಸ್ ಅಂಗಸಂಸ್ಥೆಗಳು ‘ಘರ್ ವಾಪಸಿ’ ಅಭಿಯಾನಗಳನ್ನು ತೀವ್ರಗೊಳಿಸಿವೆ. ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (USCIRF) ಭಾರತವನ್ನು “ವಿಶೇಷ ಕಳವಳಕಾರಿ ದೇಶ” ಎಂದು ಕರೆದಿದೆ ಹಾಗೂ ಮೋಹನ್ ಭಾಗವತ್ ಅವರ ಭೇಟಿಯ ಸಂದರ್ಭದಲ್ಲೂ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಅನೇಕ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆದಿವೆ; ಕ್ರಿಸ್‌ಮಸ್ ಆಚರಣೆಗಳನ್ನು ಕದಡುವ ನೂರಾರು ಪ್ರಯತ್ನಗಳು ನಡೆದಿವೆ ಎಂದು ಅಂಕಣಕಾರ್ತಿ ತವ್ಲೀನ್ ಸಿಂಗ್ ಬರೆದಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಕಠಿಣ ಮತಾಂತರ ನಿಷೇಧ ಕಾಯ್ದೆಯು ವೈಯಕ್ತಿಕ ಆಯ್ಕೆಗಳಿಗೆ ಅಡ್ಡಿಯುಂಟುಮಾಡಿದೆ.

ಈ ಕಾಯ್ದೆಯಡಿ ಮತಾಂತರಗೊಳ್ಳಲು ಇಚ್ಛಿಸುವವರು 60 ದಿನ ಮುಂಚಿತವಾಗಿ ನೋಟಿಸ್ ನೀಡಬೇಕಿದ್ದು, ನಿಯಮ ಉಲ್ಲಂಘಿಸಿದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಭಯದ ವಾತಾವರಣದಿಂದಾಗಿ ಮುಂಬೈನ ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಬರುವವರಿಂದ ‘ಒಪ್ಪಿಗೆ ಪತ್ರ’ (Consent Form) ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜತೆಗೆ ಹೊಸ ಎಫ್‌ಸಿಆರ್‌ಎ ನಿಯಮಾವಳಿಗಳ ಮೂಲಕ ಮಾನವೀಯ ಕೆಲಸಗಳನ್ನು ಮಾಡುವ ಕ್ರಿಶ್ಚಿಯನ್ ಎನ್‌ಜಿಒಗಳ ಅನುದಾನಕ್ಕೆ ತಡೆ ಒಡ್ಡಲಾಗುತ್ತಿದೆ. ಇಂತಹ ವಾಸ್ತವದ ನಡುವೆ, ಹಿಂದುತ್ವದ ನಾಯಕರು ಬಳಸುವ ‘ವೈವಿಧ್ಯತೆ’ ಎಂಬ ಪದವು ಕೇವಲ ಅಲಂಕಾರಿಕ ಮಾತಾಗಿಯಷ್ಟೇ ಉಳಿದಿದೆ.

– ರಾಮ್‌ ಪುನಿಯಾನಿ

ಇದು ದಿ ವೈರ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಕನ್ನಡ ಅನುವಾದ

You cannot copy content of this page

Exit mobile version