Home ವಿದೇಶ ಅಮೆರಿಕದ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳೂ ಸೇರಿದಂತೆ ದಕ್ಷಿಣ ಏಷ್ಯನ್ನರ ವಿರುದ್ಧ ದ್ವೇಷ ಹರಡುವಿಕೆ ಹೆಚ್ಚಳ: ‘ಎಕ್ಸ್’ನಲ್ಲಿ...

ಅಮೆರಿಕದ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳೂ ಸೇರಿದಂತೆ ದಕ್ಷಿಣ ಏಷ್ಯನ್ನರ ವಿರುದ್ಧ ದ್ವೇಷ ಹರಡುವಿಕೆ ಹೆಚ್ಚಳ: ‘ಎಕ್ಸ್’ನಲ್ಲಿ 5.42 ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳು; ಸಿಎಸ್ಒಹೆಚ್ ವರದಿ

0

ಅಮೆರಿಕದ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಕ್ಷಿಣ ಏಷ್ಯಾ ಮೂಲದ ಸಮುದಾಯಗಳ ವಿರುದ್ಧ ಜನಾಂಗೀಯ ನಿಂದನೆ, ವಲಸೆ ವಿರೋಧಿ ಹೇಳಿಕೆಗಳು, ಧಾರ್ಮಿಕ ನಿಂದನೆ ಮತ್ತು ಬೆದರಿಕೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್’ (ಸಿಎಸ್‌ಒಹೆಚ್) ಬಿಡುಗಡೆ ಮಾಡಿರುವ ಹೊಸ ಅಧ್ಯಯನ ವರದಿ ತಿಳಿಸಿದೆ.

2025ರ ಜನವರಿಯಿಂದ 2026ರ ಜೂನ್‌ವರೆಗಿನ 18 ತಿಂಗಳುಗಳ ಅವಧಿಯಲ್ಲಿ ‘ಎಕ್ಸ್’ (ಟ್ವಿಟರ್), 4ಚಾನ್, 8ಚಾನ್ ಮತ್ತು ಗ್ಯಾಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡಿದ ವಿಷಯಗಳನ್ನು ಪರಿಶೀಲಿಸಿದ ಸಂಸ್ಥೆ, ಈ ಅವಧಿಯಲ್ಲಿ ಕೇವಲ ‘ಎಕ್ಸ್’ ವೇದಿಕೆಯಲ್ಲೇ ದಕ್ಷಿಣ ಏಷ್ಯನ್ನರನ್ನು ಗುರಿಯಾಗಿಸಿದ 5,42,360 ದ್ವೇಷಪೂರಿತ ಪೋಸ್ಟ್‌ಗಳನ್ನು ಗುರುತಿಸಿದೆ. ‘ಎಕ್ಸ್’ನಲ್ಲಿ ಪ್ರತಿ ತಿಂಗಳು ದಾಖಲಾಗುವ ಇಂತಹ ದ್ವೇಷ ಭಾಷಣದ ಪ್ರಮಾಣವು ಜನವರಿ 2025 ರಿಂದ ಜೂನ್ 2026 ರ ನಡುವೆ ಶೇಕಡಾ 75ರಷ್ಟು ಏರಿಕೆಯಾಗಿದೆ. ಇದಲ್ಲದೆ 2025 ರಲ್ಲಿ 4ಚಾನ್, 8ಚಾನ್ ಮತ್ತು ಗ್ಯಾಬ್ ವೇದಿಕೆಗಳಲ್ಲಿ 3,97,522 ದ್ವೇಷಪೂರಿತ ಉಲ್ಲೇಖಗಳು ದಾಖಲಾಗಿದ್ದು, ಇವುಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಕೇವಲ 4ಚಾನ್‌ನಿಂದಲೇ ಬಂದಿವೆ ಎಂದು ವರದಿ ಹೇಳಿದೆ.

ಈ ದ್ವೇಷಪೂರಿತ ನಿರೂಪಣೆಗಳು ಭಾರತೀಯರು, ಪಾಕಿಸ್ತಾನಿಗಳು, ಬಾಂಗ್ಲಾದೇಶಿಗರು ಎಂಬ ಭಿನ್ನತೆಯನ್ನು ಕಡೆಗಣಿಸಿ, ಒಟ್ಟಾರೆಯಾಗಿ ಎಲ್ಲರನ್ನೂ ಗುರಿಯಾಗಿಸುತ್ತಿವೆ. ಅಲ್ಲದೆ ಹಿಂದೂಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧಾರ್ಮಿಕ ಹಿನ್ನೆಲೆಯ ಜನರ ಮೇಲೂ ದಾಳಿ ನಡೆಸಲಾಗುತ್ತಿದೆ. ದಕ್ಷಿಣ ಏಷ್ಯನ್ನರನ್ನು ‘ಆಕ್ರಮಣಕಾರರು’, ‘ಅಮೆರಿಕನ್ನರ ಉದ್ಯೋಗ ಕದಿಯುವವರು’ ಅಥವಾ ಜನಸಂಖ್ಯಾ ಅಪಾಯ ಎಂದು ಬಿಂಬಿಸುವ ಪೋಸ್ಟ್‌ಗಳು ‘ಎಕ್ಸ್’ನಲ್ಲಿ ದಾಖಲಾದ ಒಟ್ಟು ದ್ವೇಷ ಭಾಷಣದಲ್ಲಿ ಶೇಕಡಾ 45ರಷ್ಟಿವೆ. ಜೊತೆಗೆ, ‘ಪಜೀತ್’ (pajeet) ಎಂಬ ಜನಾಂಗೀಯ ನಿಂದನಾತ್ಮಕ ಪದವು ‘ಎಕ್ಸ್’ನ ಶೇಕಡಾ 30ರಷ್ಟು ಪೋಸ್ಟ್‌ಗಳಲ್ಲಿ ಹಾಗೂ ಇತರ ವೇದಿಕೆಗಳ ಶೇಕಡಾ 45ರಷ್ಟು ಉಲ್ಲೇಖಗಳಲ್ಲಿ ಬಳಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದ ಎಚ್-1ಬಿ (H-1B) ವೀಸಾ ಕಾರ್ಯಕ್ರಮವು ಈ ಆನ್‌ಲೈನ್ ದ್ವೇಷಕ್ಕೆ ಪ್ರಮುಖ ಪ್ರಚೋದಕವಾಗಿದೆ.ಎಚ್-1ಬಿ ವೀಸಾ ಪಡೆಯುವವರಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಭಾರತೀಯರೇ ಆಗಿರುವುದರಿಂದ, ಭಾರತೀಯ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಗುರಿಯಾಗುತ್ತಿದ್ದಾರೆ. ಲಿಂಕ್ಡ್‌ಇನ್ ಮುಂತಾದ ವೃತ್ತಿಪರ ವೇದಿಕೆಗಳಿಂದ ದಕ್ಷಿಣ ಏಷ್ಯನ್ನರ ಹೆಸರು, ಭಾವಚಿತ್ರ, ಕಚೇರಿ ವಿವರಗಳನ್ನು ಕದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವರು ಇವರ ವಿರುದ್ಧ ವಲಸೆ ಅಧಿಕಾರಿಗಳಿಗೆ ದೂರು ನೀಡಲು ಪ್ರಚೋದಿಸುತ್ತಿದ್ದರೆ, ಸಾಮಾಜಿಕ ಮಾಧ್ಯಮ ಪ್ರಭಾವಿಗಳು (ಇನ್‌ಫ್ಲುಯೆನ್ಸರ್‌ಗಳು) ಅವರ ಮನೆ ಮತ್ತು ಕೆಲಸದ ಸ್ಥಳಗಳಿಗೆ ತೆರಳಿ ವಿಡಿಯೋ ಮಾಡಿ ಅವಮಾನಿಸುತ್ತಿದ್ದಾರೆ.

ರಾಜಕೀಯ ಬೆಳವಣಿಗೆಗಳೂ ಈ ದ್ವೇಷ ಹೆಚ್ಚಲು ಕಾರಣವಾಗಿವೆ. ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ, ಸೆಕೆಂಡ್ ಲೇಡಿ ಉಷಾ ವ್ಯಾನ್ಸ್ ಹಾಗೂ ಹಲವು ಸಂಸದರು ಆನ್‌ಲೈನ್ ದಾಳಿಗೆ ತುತ್ತಾಗಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಹಿನ್ನೆಲೆಯುಳ್ಳವರೂ ಗುರಿಯಾಗುತ್ತಿರುವುದು ಈ ದ್ವೇಷ ಕೇವಲ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಭಾರತೀಯ ಮೂಲದ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಏಷ್ಯನ್ನರ ವಿರುದ್ಧ ಜನಾಂಗೀಯ ದ್ವೇಷ ಹರಡಲು ಜನರೇಟಿವ್ ಕೃತಕ ಬುದ್ಧಿಮತ್ತೆಯನ್ನು (ಎಐ) ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿರುವುದನ್ನೂ ವರದಿ ಎತ್ತಿ ತೋರಿಸಿದೆ.ನೈರ್ಮಲ್ಯ, ಬಾಹ್ಯ ರೂಪ, ಧರ್ಮ ಮತ್ತು ಅಪರಾಧಗಳಿಗೆ ಸಂಬಂಧಿಸಿದ ಹಳೆಯ ಪೂರ್ವಾಗ್ರಹಗಳನ್ನು ಎಐ ನೆರವಿನಿಂದ ಅವಹೇಳನಕಾರಿ ಚಿತ್ರಗಳು ಮತ್ತು ವಿಡಿಯೋಗಳನ್ನಾಗಿ ಪರಿವರ್ತಿಸಿ ಸಾಮೂಹಿಕವಾಗಿ ಹಂಚಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಈ ಪೂರ್ವಾಗ್ರಹಗಳನ್ನು ಕೇವಲ ಬಿಂಬಿಸುತ್ತಿಲ್ಲ, ಬದಲಾಗಿ ಸಾಮಾನ್ಯೀಕರಿಸಲು ನೆರವಾಗುತ್ತಿವೆ; ಇದು ದಕ್ಷಿಣ ಏಷ್ಯಾ ಸಮುದಾಯಗಳ ನಾಗರಿಕ ಹಕ್ಕುಗಳು, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಗೆ ದೊಡ್ಡ ಸವಾಲಾಗಿದೆ ಎಂದು ಅಧ್ಯಯನ ಎಚ್ಚರಿಸಿದೆ.

You cannot copy content of this page

Exit mobile version