Tuesday, June 18, 2024

ಸತ್ಯ | ನ್ಯಾಯ |ಧರ್ಮ

ಆನು ದೇವೀ…‌ ಒಳಗಣವಳು…!

ಎಂಬ್ರೈಡರಿ ನಿಜಕ್ಕೂ ಡಿಫರೆಂಟಾಗೇ ಇತ್ತು. ನೇರ ಇರಬೇಕಿದ್ದದ್ದನ್ನು ಅಡ್ಡಕ್ಕೆ ಹೊಲಿಯಲಾಗಿತ್ತು. ಅಯ್ಯೋ ಇಲ್ಲೂ ಲಕ್ಕ್ ಕೈ ಕೊಟ್ಟು ಲುಕ್ಕ್ ಕೆಟ್ಟು ಹೋಯಿತೇ ಎಂದು ಮನದಲ್ಲಿ ಮರುಗುವ ಚಂದ್ರಾವತಿ ಬಡ್ಡಡ್ಕ ಅವರು ಬಟ್ಟೆ ಹೊಲಿಸಲು ಪಟ್ಟ ಪಡಿ ಪಾಟಲನ್ನು ಈ ಲಘು ಹಾಸ್ಯ ಪ್ರಬಂಧದಲ್ಲಿ ನವಿರಾಗಿ ಬಿಡಿಸಿಟ್ಟಿದ್ದಾರೆ.  ಓದಿ.. ಮನಸು ಹಗುರಾಗಿಸಿಕೊಳ್ಳಿ.

ಸಾಮಾನ್ಯವಾಗಿ ಸಲ್ವಾರ್ ಉರೂಫ್ ಚೂಡಿದಾರೆಂಬ ಉಡುಪಿನೊಳಕ್ಕೆ ನನ್ನನ್ನು ತೂರಿಸಿಕೊಂಡು ಮೇಲೊಂದು ದುಪ್ಪಟ್ಟವನ್ನು ಹೊದಿದುಕೊಂಡೋ ನೇತಾಡಿಸಿಕೊಂಡೋ ಓಡಾಡುತ್ತೇನೆ. ಇನ್ನೂ ಸೀರೆ ಉಡಲೇನು ಧಾಡಿ ಎಂದು ನನ್ನ ಕುಟುಂಬದ ಹಿರಿಕಿರಿಯರಾದಿ ಎಲ್ಲರಿಂದಲೂ ವ್ಯಕ್ತವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಟೀಕಿಸಿಕೊಂಡರೂ ದಪ್ಪ ಚರ್ಮದ ಎಮ್ಮೆಯಂತೆ (ಎಮ್ಮೆಯ ಕ್ಷಮೆ ಕೋರಿ) ಓಡಾಡುವವಳು ನಾನು. ಉಡುಪು ಅಂದಾಗ ನನ್ನ ಉಡುಪಿಗೂ ‘ಉಡುಪಿ’ಗೂ ನೇರಾನೇರಾ ಸಂಬಂಧವಿದೆ. ವರ್ಷಕ್ಕೊಂದು ಐದಾರು ಖಾದಿ ಬಟ್ಟೆ ಖರೀದಿಸಿ ಅದನ್ನು ಉಡುಪಿಯ ‘ಸಿಟಿಗರ್ಲ್ಸ್’ ಟೈಲರ್ ಬಳಿ ಹೊಲಿಸಿದರೆ ನನಗೆ ಮತ್ತೆ ಹೆಚ್ಚುವರಿ ಬಟ್ಟೆ ಬೇಕು ಎಂದೆನಿಸುವುದಿಲ್ಲ. ಇರೋ ಲೆಕ್ಕದ ಕುರ್ತಿಗಳನ್ನೇ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಹಾಕ್ಕೊಳ್ಳುವ ಖಯಾಲಿ ನಂದು. ತೆಗೆದಿಟ್ಟಂತೆ ಖರಾರುವಾಕ್ಕಾಗಿ ಹೊಲಿದುಕೊಡುವ ಸಿಟಿಗರ್ಲ್ಸ್‌ನ ಹುಚ್ಚು ಹಿಡಿಸಿದ್ದು ನನ್ನ ಗೆಳತಿ ಜ್ಯೋತಿ. ಬೆಂಗಳೂರಲ್ಲಿದ್ದಾಗ, ಚೆನ್ನೈಯಲ್ಲಿದ್ದಾಗ, ಮಂಗಳೂರಲ್ಲಿದ್ದಾಗಲೂ ಕೂಡ ಅಲ್ಲೇ ಬಟ್ಟೆ ಹೊಲಿಯಲು ಕೊಟ್ಟು ಕೊರಿಯರಲ್ಲಿ ತರಿಸಿಕೊಳ್ಳುತ್ತಿದ್ದೆ.

ನನ್ನ ಬದುಕಲ್ಲಿ ಕಂಡ ಇನ್ನೋರ್ವ ಟೈಲರ್ ನೆನಪಾಗುತ್ತಾರೆ. ಬೆಂಗಳೂರಿನವರು. ವಿಜಯನಗರ ಎಲ್ಲೋ ಇರಬೇಕು. ಪರಿಚಿತ ಆರ್ಕೆಸ್ಟ್ರಾ ಸಿಂಗರ್ ಒಬ್ಬರೊಂದಿಗೆ ಹೋಗಿದ್ದೆ. ಡಾ| ರಾಜ್ ಕುಮಾರ್ ಕುಟುಂಬದವರು, ಸಿನಿಮಾ ನಟಿಯರು ಅರಿವೆ ಹೊಲಿಸುವ ಸುಪ್ರಸಿದ್ಧ ಟೇಲರ್ ಅಂತೆ. ಸಾಮಾನ್ಯದವರು ಸುಮ್ಮನೆ ಹೋದರೆ ತಲೆ ಎತ್ತಿಯೂ ನೋಡುವುದಿಲ್ಲವಂತೆ. ಆ ಮನುಷ್ಯನ ಹೊಲಿಗೆಯೂ ಅಷ್ಟೇ ನೀಟ್ ಮತ್ತು ಫರ್ಫೆಕ್ಟ್! ಒಂದು ಚೂರೂ ಹೆಚ್ಚು ಕಮ್ಮಿ ಇರುವುದಿಲ್ಲ. ಕಮಕ್ ಕಿಮಕ್ ಎನ್ನದೆ ಅಳತೆ ಕೊಟ್ಟು ಬರಬೇಕು ಅಷ್ಟೆ.

ಈಗೀಗ ಅಷ್ಟು ದೂರ ಹೋಗೋದ್ಯಾರು, ಸಾಯ್ಲಾಚೆ ಅಂತ ರೆಡಿಮೇಡ್ ಕುರ್ತಿ ತಕ್ಕೊಂಡು ಸುಮ್ಮನಾಗುತ್ತೇನೆ. ಪ್ರಸ್ತುತ ನಾನು ವಾಸ್ತವ್ಯವಿರುವ ಸುತ್ತಮುತ್ತಲಿರುವ ಫೇಮಸ್ ಟೇಲರ್‌ಗಳ ಕೈಲಿ ಹೊಲಿಸಿ ಹಾಕಿ ನೋಡಾಯ್ತು. ಕೆಲವರಂತೂ ಥೇಟ್ ಗೋಣಿ ಚೀಲದ ಹಾಗೆ ನೇರವಾಗಿ ಹೊಲಿದು ಕೊಟ್ಟರು. ಮೂಟೆಯಂತೆ ಉರುಳುವ ನೀನು ಇದರಲ್ಲಿ ನಿನ್ನನ್ನು ತುಂಬಿಸಿಕೊ ಎಂದಿರಬೇಕು. ಇನ್ನೊಬ್ಬರು ವರಸೆಯಲ್ಲಿ ನನಗೆ ಮಾವ. ಅವರು ತುಂಬಾ ಅನುಭವಿ, ಹೊಲಿಗೆ ಚಂದ ಅವರ ಕೈಯಲ್ಲಿ ಹೊಲಿಸಿ ನೋಡು ಅಂದರು ನಮ್ಮ ಓನರು. ಹಾಗಾಗಿ ಒಂದು ಸೆಟ್ ಬಟ್ಟೆ ಕೊಟ್ಟಿದ್ದೆ. ಸುಮಾರು ಎರಡು ತಿಂಗಳ ಕಾಲ ಅವರ ಅಂಗಡಿಗೆ ಎಡತಾಕಿದ್ದೆ. ಅಯ್ಯೋ ಸೊಸೆ ನಾಳೆ ಬಾ, ನಾಡಿದ್ದು ಬಾ, ಎನ್ನುತ್ತಾ ಮುಂದಿನ ಸೋಮವಾರ ಖಂಡಿತ ಹೊಲಿದು ಕೊಡ್ತೇನೆ, ಛೇ ನಿನ್ನೆ ಮದುವೆಗೆ ಹೋಗಿದ್ದೆ, ನಾಳೆ ಮದುರಂಗಿಗೆ ಹೋಗಲುಂಟು ಎಂದೆಲ್ಲಾ ಸಬೂಬು ಹೇಳುತ್ತಾ, ನಿನ್ನ ಅಕ್ಕನ ಮಗಳ ಮದುವೆಗೆ ಗೇರೆಂಟಿ ಕೊಡ್ತೇನೆ ಎಂದೆಲ್ಲ ಹೇಳಿದ ಆ ನನ್ನ ಮಾವ ಇದ್ದಕ್ಕಿದ್ದಂತೆ ನಮ್ಮನೆಲ್ಲ ಬಿಟ್ಟೇ ಹೋದರು.

ಎಲಾ ದುರಾದೃಷ್ಟವೇ, ಅವರಿಗಿಂತ ನನ್ನದೊಂದು ಡ್ರೆಸ್ ಹೆಚ್ಚಲ್ಲ ಎಂದುಕೊಂಡು ಸುಮ್ಮನಾದೆ. ಒಂದು ದಿನ ಅವರ ಶಾಪ್ ಬಳಿ ಹಾದುಹೋಗಬೇಕಾದರೆ ಶಾಪ್ ತೆರೆದಿದ್ದನ್ನು ಕಂಡು ಒಳಹೊಕ್ಕೆ. ಅಲ್ಲಿದ್ದ ಅವರ ಶಿಷ್ಯೋತ್ತಮೆ ನಿಮ್ಮ ಬಟ್ಟೆ ಏನಾದರೂ ಇದೆಯೇ ಅಂತ ಕೇಳಿದರು. ಹೌದೆಂದ ನಾನು ಅಳತೆಯ ಬಟ್ಟೆ ಸಹಿತ ವಾಪಾಸು ತರಲು ಮುಂದಾದೆ. ಅಷ್ಟರಲ್ಲಿ ಆಕೆ, ನಾನು ಅವರಂತೇ ಹೊಲಿತೇನೆ ಎಂಬ ಭರವಸೆ ಕೊಟ್ಟು ವೊಲಂಟರಿ ಆಗಿ ಹೊಲಿದು ಕೊಟ್ಟರು. ಕಾಲರ್ ಇಟ್ಟು ಹೊಲೀತೀರಾ ಅಂತ ಮತ್ತೆ ಮತ್ತೆ ಕೇಳಿದ್ದೆ. ಓ….. ಹೇಗೆ ಬೇಕಿದ್ದರೂ ಹೊಲೀತೇನೆ ಎಂಬ ಗ್ಯಾರಂಟಿ ಕೊಟ್ಟಿದ್ದರು. ಡ್ರೆಸ್ ಮೆಟೀರಿಯಲ್‌ಗಿಂತ 100 ರೂಪಾಯಿ ಹೆಚ್ಚೇ ಮಜೂರಿ ಕೊಟ್ಟು ಮನೆಗೆ ತಂದು ಪ್ಯಾಕ್ ಬಿಚ್ಚುತ್ತಲೇ ಡ್ರೆಸ್ಸಿನ ಶೇಪ್, ಕೇರೆ ಹಾವಿನಂತ ಓರೆ ಕೋರೆ ಹೊಲಿಗೆಗಳು, ಹೇಗೇಗೋ ಒಂದು ಮಟ್ಟಸವಿಲ್ಲದ ಅಂಚುಗಳು, ಅಲ್ಲಿ ಇಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿದ್ದ ನೂಲು ಹೊಲಿಗೆಯ ಫಿನಿಶಿಂಗ್ ನೋಡಿಯೇ ಸುಸ್ತಾಗಿ ಅದನ್ನೂ ಹಾಕಿಯೂ ನೋಡದೇ ಅದೇ ಕವರಲ್ಲಿಟ್ಟು ಯಾರಿಗೋ ದಾಟಿಸಿದೆ. ಕಣ್ಣೆದುರಿದ್ದು ಪದೇಪದೆ ನಿಟ್ಟಿಸಿರು ಬಿಡುವ ಸಂಕಟದಿಂದ ಪಾರಾಗಿ, ವಸ್ತ್ರದಾನದ ಪುಣ್ಯ ಕಟ್ಟಿಕೊಂಡೆ.

ನನಗೆ ಇಲ್ಲಿ ಹೇಳಲಿರುವುದು ಸೀರೆ ಬ್ಲೌಸಿನ ಬಗ್ಗೆ. ಮಾತು ಎತ್ತೆತ್ತಲೋ ಹೊರಳಿತು ನೋಡಿ. ಅದೊಮ್ಮೆ ಅಚಾನಕ್ಕಾಗಿ ನಮ್ಮ ದೀಪಾಂಜಲಿ ಭಜನಾ ತಂಡದೊಂದಿಗೆ ತಿರುಪತಿಗೆ ಹೋಗಿದ್ದೆ. ಆಮೇಲೆ ತಂಡದಿಂದ ಆಕರ್ಷಿತಳಾದ ನಾನು ಸಾಧ್ಯವಾದಾಗೆಲ್ಲ ಲೋಕಲ್ ಭಜನೆಗಳಿಗೆ ಹೋಗತೊಡಗಿದೆ. (ಭಜನೆ ಹೇಳುವಲ್ಲಿ ನಾನು L ಬೋರ್ಡೇ, ಹಿಂದೆ ಕೂತು ಮಣಮಣ ಅನ್ನುವುದು) ಭಜನಾ ತಂಡದ ಡ್ರೆಸ್ ಕೋಡ್ ಇದೆ. ನಾನೊಬ್ಬಳು ಅದನ್ನು ಉಲ್ಲಂಘಿಸುವುದು ಚೆನ್ನಾಗಿಲ್ಲದ ಕಾರಣ, ಸೀರೆ ಉಡಬೇಕಾದ ಅನಿವಾರ್ಯತೆಗೆ ಬಿದ್ದೆ. ಭಜನಾ ಯೂನಿಫಾರಂ ರವಕೆ ಹೊಲಿಸಿ ಮನೆಗೆ ತಂದು ಹಾಕಿ ನೋಡಿದೆ. ಬೆನ್ನು ನಮ್ಮ ಜೂನಿಯರ್ ಕಾಲೇಜು ಮೈದಾನದಂತೆ ಊರಗಲ. ಕಿಲಾಡಿ ರವಕೆ ಭುಜದಿಂದ ಜಾರಿ ನಿಲ್ಲುವುದು. ಅಷ್ಟರಲ್ಲಿ ಒಳಗಿರುವ ಉಡುಪಿಗೆ ಅದೇನೂ ಕೆಟ್ಟ ಕುತೂಹಲವೋ ಪದೇ ಪದೇ ಇಣುಕಿ ನೋಡುವುದು. ಅಟ್ಟಮಟ್ಟೆ ಕಾಲು ಹಾಕಿ ಕುಳಿತಾಗ ಹಿಂಬದಿಯಲ್ಲಿ ಬ್ಲೌಸು ಎತ್ತರೆತ್ತರ ಉತ್ತರಕ್ಕೇರಿ ಅಲ್ಲಿಂದಲೂ ಇಣುಕಿ ನೋಡುವುದು ಯಾರಿಗೆ ಬೇಕು ಫಜೀತಿ. ಜತೆಗಿರುವವರೆಲ್ಲ ನನಗೆ ಮುಜುಗರವಾಗದಂತೆ ಏನೋ ಮಾತಾಡುವ ನೆಪದಲ್ಲಿ ಬಳಿ ಬಂದು ಭುಜದ ಬಳಿ, ಹಿಂಬದಿಯಲ್ಲಿ ಜಾರಲು ಹವಣಿಸುವ ಬ್ಲೌಸನ್ನು ಸರಿ ಮಾಡುವುದು. ‘ಆನು ದೇವಿ‌ ಒಳಗಣವಳು’ ಎನ್ನುತ್ತಾ ಇಣುಕುವವರನ್ನು ಒಳ ಕಳುಹಿಸುವುದು. ಮುಜುಗರದಿಂದ ನನ್ನ ಧ್ಯಾನವೆಲ್ಲ ಭಜನೆ ಬದಲಿಗೆ ಬ್ಲೌಸಿನ ಮೇಲೆ ಎನ್ನುವಂತಾಗಿತ್ತು. ದೇವರನ್ನು ನೆನೆಯದಿದ್ದರೂ ಪದೇಪದೇ ಟೈಲರನ್ನು ನೆನೆನೆನೆ ಮನವೇ ಎಂಬಂತಾಗಿತ್ತು ಪರಿಸ್ಥಿತಿ. ಮತ್ತೆ ನೋಡಿದರೆ ಹೆಚ್ಚಿನವರು ನನ್ನಂತೇ ಸಮಾನ ದುಃಖಿಗಳೇ. ಎಲ್ಲರ ಭುಜದಲ್ಲೂ ಬೆನ್ನಲ್ಲೂ ಇಣುಕು ದೃಶ್ಯಗಳು ಮಾಮೂಲಿ.

ರೋಸಿ ಹೋದ ನಾನು ಮತ್ತೊಮ್ಮೆ ರವಕೆ ಹೊಲಿಸಲು ಹೋದಾಗ ಬೆನ್ನು ಇಷ್ಟು ವಿಶಾಲವಾಗಿ ಆಳವಾಗಿ ಇರುವುದರ ಸಮಸ್ಯೆಗಳನ್ನೆಲ್ಲ ಪರಿಪರಿಯಾಗಿ ವಿವರಿಸಿ, ಭಜನೆಗೆ ಕುಳಿತಾಗ ಎಲ್ಲ ಇಣುಕುತ್ತೆ ಎಂದೆಲ್ಲ ನನ್ನ ಕಂಠ ಶೋಷಣೆ ಮಾಡಿದಾಗ ನನ್ನೆಡೆಗೆ ಒಂದು ನಿಕೃಷ್ಟ ನೋಟ ಹರಿಸಿದ ಟೈಲರಿಣಿ ನನ್ನ ಭಜನಾ ಕಾರ್ಯಕ್ಕೆ ‘ಓ….. ಪದ್ಮಶ್ರೀ’ ಎಂದು ಲೇವಡಿ ಮಾಡಿದಳು. ಆದರೂ ಬಿಡದೆ ನನ್ನ ಕೌನ್ಸಿಲಿಂಗ್ ಛಾಳಿಯಂತೆ ಹಾಗಿರಬಾರದು, ಹೀಗಿರಬೇಕು ಎಂದೆಲ್ಲ ವಿವರಿಸಿ ಹೀಗೆ ಹೊಲಿಯಬೇಕೆಂದು ಹೇಳಿ ಬಂದೆ.

ಹೊಲಿದು ಸಿಕ್ಕಿದಾಗ ಆತುರಾತುರವಾಗಿ ಮನೆಗೆ ಬಂದು ಟ್ರೈ ಮಾಡಿದರೆ ನನ್ನ ಪಾಠವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ಮೊದಲಿನದ್ದಕ್ಕಿಂತಲೂ ಹೆಚ್ಚು ಆಳವಾಗಿ ಇನ್ನೇನೋ ಅಧ್ವಾನವಾಗಿತ್ತು. ಸೀರೆ ಉಟ್ಟಾಗ ಎಲ್ಲಿ ಇಣುಕುತ್ತೋ ಏನು ಕಾಣುತ್ತೋ ಎಂಬ ಧಾವಂತದಿಂದ ಅಲ್ಲಿ ಇಲ್ಲಿ ಸರಿ ಪಡಿಸಿಕೊಳ್ಳುವದೊಂದೇ ಕಾಯಕವಾಗೋಯ್ತು. ಈ ಅಗಲ ಬೆನ್ನು ರವಕೆಗಳನ್ನು ನೋಡಿದಾಗ ಬಿಸಿಲಿಗೆ ಹಪ್ಪಳವೋ ಸೆಂಡಿಗೆಯೋ ಒಣಗಿಸಬಹುದು ಎಂದು ಬ್ಲೌಸ್ ಹಾಕದ, ಬ್ಲೌಸಿನೊಳಗೆ ಹುದುಗಿರುವ ಹಲವು ಸಮಸ್ಯೆಗಳ ಕುರಿತು ಲವಲೇಶವೂ ಅರಿವಿಲ್ಲದ, ವಿರುದ್ಧ ಲಿಂಗದವರು ಕುಹಕವಾಡಿದ್ದೂ ಕಿವಿಯಾರೆ ಕೇಳಿಸಿಕೊಳ್ಳಬೇಕಾಯ್ತು.

ಈ ಮೆಶಿನ್ ಎಂಬ್ರೈಡರಿ ಭರಾಟೆ ಜೋರಾದಾಗ ನೀನ್ಯಾಕೆ ಎಂಬ್ರೈಡರಿ ಮಾಡಿಸುದಿಲ್ಲ ಎಂಬ ಪ್ರಶ್ನೆಗಳು ಎದುರಾದವು. ಸೀರೆಗಿಂತ ಹೆಚ್ಚು ದುಡ್ಡು ಕಕ್ಕಿ ಕಸೂತಿ ಹಾಕಿಸೋದು ಅನ್‌ಸೈಂಟಿಫಿಕ್ ಅಂತ ನಾನು ಇಕನಾಮಿಕ್ಸ್ ಪಾಠ ಮಾಡಿದ್ದೆ. ಆದರೆ, ನಮ್ಮ ಮನೆಯಲ್ಲೇ ಮದುವೆ ಎದ್ದಾಗ, ಅಕ್ಕನ ಮಗಳೇ ಮದುಮಗಳಾದಾಗ ಸರಬರ ರೇಷ್ಮೆ ಸೀರೆ ಉಟ್ಟು ಓಡಾಡದಿದ್ದರೆ ಹೇಗೆ? ಜೀವಮಾನದಲ್ಲಿ ಮೊದಲ ಬಾರಿಗೆ ನನ್ನ ಸ್ವಂತ ಸಂಪಾದನೆಯಲ್ಲಿ ದುಬಾರಿ ರೇಷ್ಮೆ ಸೀರೆ ಖರೀದಿಸಿದೆ. ಅದೆಷ್ಟೇ ಖರ್ಚಾಗಲೀ ಈ ರವಕೆಗೆ “ಎಂಬ್ರೈಡರಿ ಹಾಕಿಸುವುದೇ” ಎಂದು ತೀರ್ಮಾನಿಸಿದ್ದೆ. ಅದರೊಂದಿಗೆ ಮದುಮಗಳೂ ನನಗೆ ಕೊಟ್ಟ ದುಬಾರಿ ರೇಷ್ಮೆ ಸೀರೆಯ ರವಕೆಗೂ ಕಸೂತಿ ಹಾಕಿಸಬೇಕು ಎಂದು ಉದಾರವಾಗಿ ನಿರ್ಧರಿಸಿ, ವಿವಾಹೋತ್ಸಾಹದಲ್ಲಿ, ಸ್ಟಿಚ್ಚಿಂಗ್ ಉನ್ಮಾದದ ಆವೇಶದ ಹೆಜ್ಜೆ ಇಟ್ಟು ರವಕೆ ಹೊಲಿಸಲು ದಾಪುಗಾಲಿಟ್ಟೆ.

ಅಸ್ತಿತ್ವದಲ್ಲಿರುವ ರವಕೆಗಳು ಹೇಗೆಲ್ಲ ಜಾರುತ್ತವೆ ಹೇಗೆಲ್ಲಾ ಕಾಟಕೊಡುತ್ತವೆ ಎಂಬುದರ ಡೆಮೋಗಾಗಿ ಸೀರೆ ಉಟ್ಟು ಹೋಗಿದ್ದೆ. ಭಯಂಕರ ಬಿಜಿಯಾಗಿದ್ದ ಟೈಲರಿಣಿ, ಕೈಲಿದ್ದ ಕೆಲಸ ಪೂರ್ತಿಗೊಳಿಸಿ ಕೊನೆಗೂ ನನ್ನತ್ತ ಎದ್ದು ಬಂದವಳಿಗೆ ಬ್ಲೌಸು ಹೇಗೆಲ್ಲ ಕಾಟಕೊಡುತ್ತದೆ ಎಂದು ಹೇಳಿ ಎಲ್ಲೆಲ್ಲ ಹೇಗೇಗೆ ಬೇಕು ಎಂದು ವಿವರಿಸಿ, ಇಷ್ಟೇ ಆಳ ಸಾಕು ಎಂದು ತೋರಿಸಲು ಒಂದು ಅಕ್ಕನ ಬ್ಲೌಸನ್ನು ಒಯ್ದು ಕೊಟ್ಟೆ. ಎಲ್ಲದಕ್ಕೂ ಗೋಣಾಡಿಸಿ ಪುಸ್ತಕದಲ್ಲಿ ಬರೆದುಕೊಂಡಳು, ಡಿಫರೆಂಟಾಗಿರಬೇಕು ಒಂದು ಎಂಬ್ರೈಡರಿ ಡಿಸೈನ್ ಸೆಲೆಕ್ಟ್ ಮಾಡಿದೆ. ಪದೇಪದೇ ಹಾಗೆಬೇಕು ಹೀಗೇ ಬೇಡ ಎಂದೆಲ್ಲ ವಿವರಿಸಿಯೇ ವಿವರಿಸಿದೆ. ಒಮ್ಮೆ ನಿನ್ನ ಉಪನ್ಯಾಸ ಮುಗಿಸಿ ನಡಿ ಇಲ್ಲಿಂದ ಎಂಬ ಮುಖಭಾವ ಹೊತ್ತಿದ್ದ ಅವಳು ಗೋಣಾಡಿಸಿಕೊಂಡಳು. ಎಷ್ಟು ಕೇಳಿಸಿಕೊಂಡಳೋ ದೇವರಿಗೇ ಗೊತ್ತು.

ಬ್ಲೌಸುಗಳು ರೆಡಿ ಆಗಿವೆ ಎಂಬ ಸೂಚನೆ ಬಂದಾಗ ಆಸೆಯಿಂದ ಓಡಿದೆ. ಕೈಗೆ ಸಿಕ್ಕ ಬ್ಲೌಸು ನೋಡುತ್ತಲೇ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ಹಾಕಿ ನೋಡಿದರೆ ರವಕೆಗಳೆಲ್ಲ ನನ್ನಕ್ಕನ ಅಳತೆಗೆ ಸಿದ್ಧವಾಗಿದ್ದವು. ಆದರೆ ಬೆನ್ನಿನ ಆಳ ಮಾತ್ರ ಮತ್ತೂ ಒಂದಿಂಚು ಇಳಿದಿತ್ತು. ಎಂಬ್ರೈಡರಿ ನಿಜಕ್ಕೂ ಡಿಫರೆಂಟಾಗೇ ಇತ್ತು. ನೇರ ಇರಬೇಕಿದ್ದದ್ದನ್ನು ಅಡ್ಡಕ್ಕೆ ಹೊಲಿಯಲಾಗಿತ್ತು. ಅಯ್ಯೋ ಇಲ್ಲೂ ಲಕ್ಕ್ ಕೈ ಕೊಟ್ಟು ಲುಕ್ಕ್ ಕೆಟ್ಟು ಹೋಯಿತೇ ಎಂದು ಮನದಲ್ಲಿ ಮರುಗಿದೆ.

ನನ್ನ ಮೈನ್ ಸೀರೆಯ ತೋಳು ಅತ್ಲಾಗೆ ಉದ್ದವೂ ಅಲ್ಲ ಇತ್ಲಾಗೆ ಗಿಡ್ಡವೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿ ನನ್ನನ್ನು ಅಣಕಿಸಿತು. ದರ್ಜಿ ‘ನನ್ನ’ ಮರ್ಜಿಯನ್ನು ಕಡೆಗಣಿಸಿ ‘ತನ್ನ’ ಮರ್ಜಿಯಂತೆ ಹೊಲಿದಿಟ್ಟಿದ್ದಳು. ಎಲ್ಲಾ ರವಕೆಗಳಿಗೂ ಒಂದೊಂದು ಹೊಲಿಗೆ ಹಾಕಿ ಮದುವೆ ಮುಗಿದ ಮೇಲೆ ಬಾ ಸರಿ ಮಾಡಿ ಕೊಡುತ್ತೇನೆ ಎಂಬ ಆಶ್ವಾಸನೆ ಕೊಟ್ಟಳು. ಮದುವೆಗಾಗಿ ಎಕ್ಸ್‌ಕ್ಲೂಸೀವ್ ಆಗಿ ತಂದ ಜವಳಿ. ಮದುವೆ ಮುಗಿದನಂತರ ಸರಿ ಮಾಡಿವುದಂತೆ! ಕರ್ಮ. ಹಿಂದಿನ ಜನ್ಮದಲ್ಲಿ ನಾನು ಟೈಲರಾಗಿದ್ದು ಎಲ್ಲರ ರವಕೆಯನ್ನು ಎರ್ರಾಬಿರ್ರಿ ಕತ್ತರಿಸಿ ಬೆನ್ನು ಭುಜವೆಲ್ಲ ಅಳತೆಯಿಲ್ಲದಂತೆ ಆಳವಾಗಿ ತೋಡಿ, ನೇತಾಡಿ, ಜೋತಾಡಿದ್ದಿರಬೇಕು; ಅದಕ್ಕೇ ಈ ಜನ್ಮದಲ್ಲಿ ಈ ಆಳದ ಶಿಕ್ಷೆ ನನಗೆ ಎಂದು, ಎಂಬ ಕರ್ಮ ಸಿದ್ಧಾಂತವನ್ನು ಅಳವಡಿಸಿಕೊಂಡು ಸುಮ್ಮನಾದೆ.

ಮತ್ತು ಈಗೀಗ ಭಜನೆಗೆ ಹೋಗುವಾಗ ಏನು ಬೇಕಾದರೂ ಇಣುಕಲಿ, ಎಲ್ಲಿ ಬೇಕಾದರೂ ಜಾರಲಿ, ರವಕೆ ಹೇಗೆ ಬೇಕಿದ್ದರೂ ಜಾರಿ ಹಾರಿ ಎಗರಾಡಲಿ ಎಂಬ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡು (ವಿಧಿಯಿಲ್ಲದೆ) ಸೆರಗನ್ನು ಮೈತುಂಬಾ ಚೆನ್ನಾಗಿ ಹೊದಿದು ಕೊಂಡು ಹೋಗಲು ಆರಂಭಿಸಿದೆ. ನೀವೆಂತ ಮುದುಕಿಯಾ ಅಂತ ನನ್ನ ಸಹ ಭಜನಾ ಮಣಿಗಳು ಆಕ್ಷೇಪದ ಮಾತನ್ನಾಡಿದರು. ನಾನೂ, ಎಳೇ ಮುದುಕಿ ಅಲ್ಲವೇ ಎಂದು ಮಾತು ತೇಲಿಸಿ, ಸೆರಗನ್ನು ಮತ್ತೊಮ್ಮೆ ಸರಿಪಡಿಸಿ ಹೊದ್ದುಕೊಂಡೆ. ಹೀಗಾದರೂ, ಕನಿಷ್ಠ ಭಜನೆ ಮೇಲಾದರೂ ಗಮನ ಹರಿಸಬಹುದು ಎಂದು. ನೋಡಿದವರಾರೋ, ಏನು ಭಕ್ತಿ, ಏನು ಸಂಸ್ಕಾರ ಎಷ್ಟು ಚಂದ ಸೆರಗು ಹೊದಿದು ಕುಳಿತಿದ್ದಾರೆ ಎನ್ನುವುದು ಕಿವಿಗೆ ಬಿತ್ತಾ, ಇಷ್ಟು ದಿನ ಅನುಭವಿಸಿದ ಜಾರುವ, ಇಣುಕುವ ಕಿರಿಕಿರಿಯ ಬೇಗುದಿ ಎಲ್ಲ ಕರಗಿ ಹೋಯಿತು!

ಚಂದ್ರಾವತಿ ಬಡ್ಡಡ್ಕ
ಹಿರಿಯ ಪತ್ರಕರ್ತರು, ವೃತ್ತಿಪರ ಅನುವಾದಕರು. ಅರೆಭಾಷೆ ಅಂಕಣ “ಹರ್ಟೆ’ ಮತ್ತು ಸಂಗಾತಿಯಲ್ಲಿ ‘ಚಾಂದಿನಿ’ ಇವರು ಈಗ ಬರೆಯುತ್ತಿರುವ ಅಂಕಣಗಳು.

Related Articles

ಇತ್ತೀಚಿನ ಸುದ್ದಿಗಳು