Saturday, June 15, 2024

ಸತ್ಯ | ನ್ಯಾಯ |ಧರ್ಮ

ಅಣುಬಾಂಬ್ ದಾಳಿ: ಹಿರೋಶಿಮಾ ನಾಗಸಾಕಿ ಭಸ್ಮವಾದ ಕರಾಳ ಕಥನ

ಜಪಾನ್‌ ನ ಪ್ರಮುಖ ನಗರಗಳಾದ ಹಿರೋಶಿಮಾ, ನಾಗಸಾಕಿ ಮೇಲೆ ಅಮೆರಿಕ ಅಣುಬಾಂಬ್‌ ಹಾಕಿದ ಕರಾಳ ಘಟನೆಗೆ ಇದೀಗ 77 ವರ್ಷ. 1945 ರ ಆಗಸ್ಟ್‌ 6 ರಂದು ಹಿರೋಶಿಮಾ ನಗರದ ಮೇಲೆ ಅಣುಬಾಂಬ್‌ ಪ್ರಯೋಗ ಮಾಡಿದ ಅಮೆರಿಕ ಆಗಸ್ಟ್‌ 9 ರಂದು ನಾಗಸಾಕಿ ನಗರದ ಮೇಲೆ ಪರಮಾಣು ದಾಳಿ ನಡೆಸಿತ್ತು. ಈ ಅಣುಬಾಂಬ್‌ ದುರಂತವು ಇಂದಿಗೂ ಕೂಡ ಮನುಕುಲಕ್ಕೆ ಆತಂಕದ ಘಟನೆಯಾಗಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆಯ ಕುರಿತು ಪೀಪಲ್ ಮೀಡಿಯಾ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

ಆಗಸ್ಟ್ 6, 1945, ಹಿರೋಶಿಮಾ

Hiroshima (image courtesy BBC)

ಇಪ್ಪತ್ತನೆಯ ವಾಯುಪಡೆಯ 509 ನೇ ಕಾಂಪೋಸಿಟ್ ಗ್ರೂಪ್ ನ ಪೈಲಟ್ ಗಳು, ಮೆಕಾನಿಕ್ ಗಳು ಮತ್ತು ಸಿಬ್ಬಂದಿಗಳೆಲ್ಲರೂ ವಿಶೇಷವಾಗಿ ಮಾರ್ಪಡಿಸಿದ ಬಿ-29 ಯುದ್ಧ ವಿಮಾನಗಳ ತರಬೇತಿ ಪಡೆದಿದ್ದರು. ಅದು ಬಾಂಬ್ ದಾಳಿಗೆ ಸಿದ್ಧಪಡಿಸಲಾದ ವಿಮಾನ. 509 ನೇ ಕಮಾಂಡರ್ ಕರ್ನಲ್ ಪೌಲ್ ಡಬ್ಲ್ಯೂ ಟಿಬ್ಬೆಟ್ಸ್ ಅದರ ಪೈಲಟ್. 11 ಮಂದಿ ಸಿಬ್ಬಂದಿಯಿದ್ದ ಅದರಲ್ಲಿ ಮೇಜರ್ ಥಾಮಸ್ ಫೆರೆಬಿ ಬಾಂಬಾರ್ಡಿಯರ್ ಆಗಿದ್ದರು ಮತ್ತು ಮ್ಯಾನ್ ಹಾಟ್ಟನ್ ಪ್ರೊಜೆಕ್ಟ್ ನ ಮಾಜಿ ಆರ್ಡಿನೆನ್ಸ್ ತಜ್ಞ ಕ್ಯಾಪ್ಟನ್ ವಿಲಿಯಂ (‘ಡೀಕ್’) ಪಾರ್ಸನ್ಸ್ ವೆಪನರ್ ಆಗಿದ್ದರು.

ಟಿಬ್ಬೆಟ್ಸ್ ಈ ಕಾರ್ಯಾಚಣೆಗಾಗಿ ಸ್ವತಃ ವಿಮಾನ ಸಂಖ್ಯೆ 82 ನ್ನು ಆಯ್ಕೆ ಮಾಡಿದ್ದ ಮತ್ತು ಆಗಸ್ಟ್ 6, 1945 ರಂದು ಸರಿಸುಮಾರು ನಸುಕಿನ 2.45 ರ ಹೊತ್ತಿಗೆ ಟೇಕ್ ಆಫ್ ಮಾಡುವ ಸ್ವಲ್ಪ ಮೊದಲು  ಆತ ತನ್ನ ತಾಯಿಯ ಹೆಸರಾದ ‘ಎನೋಲಾ ಗೇ’ ಯನ್ನು  ವಿಮಾನದ ಮೂತಿಯ  ಮೇಲೆ ಬರೆಯಲು ನಿರ್ವಹಣಾ ಕೆಲಸಗಾರರಿಗೆ ಹೇಳಿದ. ಎನೋಲಾ ಗೇ ಜತೆಯಲ್ಲಿ ಎರಡು ಇತರ ಬಿ-29 ಗಳಿದ್ದವು. ಅವುಗಳ ಕೆಲಸ, ಬಾಂಬ್ ದಾಳಿ ಪೂರ್ವದಲ್ಲಿ ಪ್ರದೇಶದ ವೀಕ್ಷಣೆ ಮತ್ತು ಬಾಂಬ್ ದಾಳಿ ನಂತರದ ಸ್ಥಿತಿಯ ಚಿತ್ರೀಕರಣ.

ಎನೋಲಾ ಗೇ ಆಕಾಶಕ್ಕೆ ಹಾರಿದ ನಂತರವಷ್ಟೇ ಪಾರ್ಸನ್ಸ್ ‘ಲಿಟಲ್ ಬಾಯ್’ ಗೆ (ಬಾಂಬ್ ನ ಹೆಸರು) ಅಂತಿಮ ಘಟಕಗಳನ್ನು ಸೇರಿಸಿದ (ಯಾಕೆಂದರೆ, ಮಾರ್ಪಡಿಸಲಾದ ಬಿ-29 ವಿಮಾನಗಳು ಟೇಕ್ ಆಫ್ ಆಗಿದ್ದಾಗ ಈ ಹಿಂದೆ ಅಪಘಾತಕ್ಕೀಡಾಗಿದ್ದವು. ಅಣುಬಾಂಬ್ ಹೊಂದಿರುವ ವಿಮಾನ ಟೇಕ್ ಆಫ್ ಆಗುವಾಗ ಅಪಘಾತಕ್ಕೆ ಈಡಾದರೆ ಪರಿಣಾಮ ಘೋರ). ಆಕಾಶ ಸ್ವಚ್ಛವಿತ್ತು ಮತ್ತು ಗುರಿಯನ್ನು ಸಮೀಪಿಸುವಾಗ ‘ಎನೋಲಾ ಗೇ’ ಗೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಬೆಳಿಗ್ಗೆ 7.15 (ಟಿನಿಯನ್ ಸಮಯ) ಪಾರ್ಸನ್ಸ್ ಶಸ್ತ್ರಾಸ್ತ್ರವನ್ನು ಸಜ್ಜುಗಳಿಸಿದ ಮತ್ತು ಎನೋಲಾ ಗೇ ದಾಳಿಗೆ ನಿಗದಿಪಡಿಸಲಾದ  31,000 ಅಡಿ ಎತ್ತರವನ್ನು ಏರಿತು. ಮೊದಲ ಗುರಿ (ಹಿರೋಶಿಮಾ) ಮತ್ತು ಎರಡನೆಯ ಗುರಿಗಳ (ಕೊಕುರಾ ಮತ್ತು ನಾಗಸಾಕಿ) ಮೇಲೆ ಹವಾಮಾನ ಹೇಗಿದೆ ಎಂದು ನೋಡಲು ಇತರ ವಿಮಾನಗಳು ಮುಂದೆ ಹಾರಿದವು. ಮಿಶನ್ ಪೈಲಟ್ ಹಿರೋಶಿಮಾದ ಮೇಲೆ ಸ್ವಲ್ಪ ಮೋಡದ ಹೊದಿಕೆ ಇದೆ, ಆದರೂ ಆ ಗುರಿಯತ್ತ ಮುಂದುವರಿಯಬಹುದು ಎಂದು ಟಿಬ್ಬೆಟ್ಸ್ ಗೆ ರೇಡಿಯೋ ಸಂದೇಶ ನೀಡಿದರು.

ಸ್ಥಳೀಯ ಕಾಲಮಾನ ಬೆಳಿಗ್ಗೆ 8.00 ಗಂಟೆಯ ನಂತರ ಎನೋಲಾ ಗೇ ಸಿಬ್ಬಂದಿಗೆ ಹಿರೋಶಿಮಾ ಕಂಡಿತು. ಸುಮಾರು 8.12 ರ ಸಮಯ ಟಿಬ್ಬೆಟ್ಸ್ ಬಾಂಬ್ ದಾಳಿ ನಡೆಸಲು ಫೆರೆಬಿಗೆ ವಿಮಾನದ ನಿಯಂತ್ರಣ ಬಿಟ್ಟುಕೊಟ್ಟ. ಫೆರೆಬಿಯ ಗುರಿ ಅಯೋಯಿ ಸೇತುವೆಯಾಗಿದ್ದು, ಅದು ಓಟಾ ನದಿಯ ಮೇಲೆ ವಿಶಿಷ್ಟವಾದ ಇಂಗ್ಲಿಷ್ ನ ಟಿ ಆಕಾರದ ಹರವು. ಟಿಬ್ಬೆಟ್ಸ್ ತನ್ನ ಸಿಬ್ಬಂದಿಗೆ ತಮ್ಮ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವಂತೆ ಸೂಚಿಸಿದ. 8.15 ಕ್ಕೆ ಬಾಂಬನ್ನು ಬೀಳಿಸಲಾಯಿತು. ಬಾಂಬ್ ಸ್ಫೋಟದ ಪರಿಣಾಮದ ವ್ಯಾಪ್ತಿಯನ್ನು ತಪ್ಪಿಸಿಕೊಳ್ಳಲು ಟಿಬ್ಬೆಟ್ಸ್ ತನ್ನ ಯುದ್ಧ ವಿಮಾನವನ್ನು ಕ್ಷಿಪ್ರವಾಗಿ ಬಂದ ದಾರಿಯತ್ತ ತಿರುಗಿಸಿದ.

‘ಲಿಟಲ್ ಬಾಯ್’ ನೆಲದಿಂದ 1900 ಅಡಿ ಎತ್ತರದ ಮಟ್ಟಕ್ಕೆ ಇಳಿಯಲು 45 ಸೆಕೆಂಡ್ ತೆಗೆದುಕೊಂಡಿತು. ಬಳಿಕ ಶಿಮಾ ಆಸ್ಪತ್ರೆಯ ಮೇಲೆ ಆಗಸದಲ್ಲಿ ಸ್ಫೋಟಿಸಿತು. ತಕ್ಷಣ ನೆಲದ ಮಟ್ಟದ ತಾಪಮಾನ 7000 ಡಿಗ್ರಿ ಸೆಲ್ಶಿಯಸ್ ಗೆ ಏರಿತು. ಪ್ರಬಲ ಸ್ಫೋಟದ ಕಂಪನ ಭೂಪ್ರದೇಶವನ್ನು ಆವರಿಸಿತು. ಬೃಹತ್ ಅಣಬೆಯಾಕಾರದ ಮೋಡವು 40,000 ಅಡಿಗಳಿಗಿಂತ (12 ಕಿಮೀ) ಎತ್ತರಕ್ಕೆ ಏರಿತು. ಸ್ಫೋಟವನ್ನು ನೇರವಾಗಿ ಗಮನಿಸಿದ ಎನೋಲಾಗೇ ಯ ಟೇಲ್ ಗನ್ನರ್ ಬಾಬ್ ಕರೆನ್ ಈ ಭೀಕರ ದೃಶ್ಯವನ್ನು ‘ನರಕಸದೃಶ’ ಎಂದು ವಿವರಿಸಿದ. ಹಿರೋಶಿಮಾದ ಬಾನಿನಲ್ಲಿ ಉಂಟಾದ ಅಣಬೆ ಮೋಡವು 640 ಕಿಮೀ ದೂರದವರೆಗೂ ಗೋಚರಿಸಿತು.

ಆಗಸ್ಟ್ 9, 1945, ನಾಗಸಾಕಿ

Nagasaki (image courtesy DM.Com)

ನಸುಕಿನ 3.47 ಕ್ಕೆ ಬಿ-29 ‘ಬಾಕ್ ‍ಸ್ಕಾರ್’ ಯುದ್ಧ ವಿಮಾನವು ಟಿನಿಯನ್ ನಿಂದ ಬಾನಿಗೆ ಚಿಮ್ಮಿತು. ಮೇಜರ್ ಚಾರ್ಲ್ ಸ್ ಸ್ವೀನಿಯು ಪೈಲಟ್ ಆಗಿದ್ದ. ಬೊಂಬಾರ್ಡಿಯರ್ ಆಗಿ ಕ್ಯಾಪ್ಟನ್ ಕೆರ್ಮಿಟ್ ಬೀಹಾನ್ ಇದ್ದ. ವೆಪನರ್ ಆಗಿ ಮ್ಯಾನ್ ಹಟನ್ ಯೋಜನೆಯ ಹಿರಿಯ ಕಮಾಂಡರ್ ಫ್ರೆಡ್ರಿಕ್ ಆಶ್ವರ್ತ್ ಜತೆಗಿದ್ದ. ಬಾಂಬ್ ನ ಹೆಸರು ‘ಫ್ಯಾಟ್ ಮ್ಯಾನ್’. ‘ಲಿಟಲ್ ಬಾಯ್’ ಗೆ ಭಿನ್ನವಾಗಿ ಫ್ಯಾಟ್ ಮ್ಯಾನ್ ನನ್ನು ಬಾಕ್ ಸ್ಕಾರ್ ಗೆ ಏರಿಸುವ ಮೊದಲೇ ಸಂಪೂರ್ಣ ಜೋಡಣೆ ಮಾಡಲಾಗಿತ್ತು. ಉದುರಿಸಲು ಸೂಕ್ತವಾಗುವ ಹಾಗೆ ಆಕಾಶಕ್ಕೆ ಏರಿದ ತಕ್ಷಣ ಆಶ್ವರ್ತ್ ಅದನ್ನು ವಿಮಾನಕ್ಕೆ ಜೋಡಿಸಿದ. ಹಿರೋಶಿಮಾದಲ್ಲಿ ಮಾಡಿದಂತೆಯೇ ಹವಾಮಾನ ಪರಿಸ್ಥಿತಿ ತಪಾಸಣೆ ಮಾಡಲು ಇತರ ಬಿ 29 ವಿಮಾನಗಳು ಮುಂದುಗಡೆ ಹಾರುತ್ತಿದ್ದವು. ಕೊಕುರಾದ ಮೇಲೆ ಆಕಾಶ ಸುಮಾರಾಗಿ ಸ್ವಚ್ಛ ಇದೆ ಎಂದು ವರದಿ ಮಾಡಲಾಯಿತು.

ಸ್ಥಳೀಯ ಕಾಲಮಾನ ಬೆಳಗಿನ 9.45 ಕ್ಕೆ ಬಾಕ್ ಸ್ಕಾರ್ ಕೊಕುರಾವನ್ನು ತಲಪಿತು. ಆಗ  ದಟ್ಟ ಮೋಡ ಮತ್ತು ಮಂಜು ಆವರಿಸಿ ಕೆಳಗೆ ಏನೂ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು; ಹಿಂದಿನ ರಾತ್ರಿ ಯಹಾಟಾ ಎಂಬ ಪಕ್ಕದ ನಗರದ ಮೇಲೆ ನಡೆದ ಬಾಂಬು ದಾಳಿಯ ಪರಿಣಾಮ ಇರಬೇಕು. ಮೂರು ಬಾರಿ ಯತ್ನಿಸಲಾಯಿತಾದರೂ ಯಶ ಸಿಗಲಿಲ್ಲ. ಗುರಿಯು (ನಗರದ ಬೃಹತ್ ಶಸ್ತ್ರ ಸಂಗ್ರಹಾಗಾರ) ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕೊಕುರಾದ ಮೇಲೆ ಹಾರುತ್ತಾ ಸುಮಾರು 45 ನಿಮಿಷಗಳು ವ್ಯರ್ಥವಾದವು. ಇಂಧನ ಮುಗಿಯುತ್ತ ಬಂದಿತ್ತು. ಅಲ್ಲದೆ ಜಪಾನಿನ ವಿಮಾನ ನಿರೋಧಕ ರಕ್ಷಣಾ ವ್ಯವಸ್ಥೆಯ ಭಯವೂ ಇತ್ತು. ಹಾಗಾಗಿ ಎರಡನೆ ಗುರಿಯತ್ತ ಹಾರಲು ನಿರ್ಧರಿಸಲಾಯಿತು. ಪೈಲಟ್ ಸ್ವೀನಿಯು ವಿಮಾನವನ್ನು ದಕ್ಷಿಣಕ್ಕೆ  ನಾಗಸಾಕಿಯತ್ತ ತಿರುಗಿಸಿದ.

ಹಾಗೆ ನೋಡಿದರೆ, ಭೌಗೋಳಿಕವಾಗಿ ನಾಗಸಾಕಿ ಸೂಕ್ತ ಗುರಿಯಾಗಿರಲಿಲ್ಲ. ಹಿರೋಶಿಮಾ ಮಟ್ಟಸವಾಗಿದ್ದು ನಗರ ಕೇಂದ್ರದ ಸನಿಹದಲ್ಲಿ ಭಿನ್ನ ಲಕ್ಷಣವನ್ನು ಹೊಂದಿದ್ದರೆ, ನಗರ ಪ್ರದೇಶವಾದ ನಾಗಸಾಕಿಯು ಎರಡು ಕರಾವಳಿ ಕಣಿವೆಗಳಾಗಿ ವಿಭಜನೆಗೊಂಡಿದ್ದು, ನಡುವೆ ಶಿಖರ ಶ್ರೇಣಿಯಿತ್ತು. ನಗರದ ಹತ್ತಿರದ ಬಂದರು ಪ್ರದೇಶದ ಶಸ್ತ್ರ ಕಾರ್ಖಾನೆ ಮಿಟ್ಸುಬಿಷಿಯು ದಾಳಿಯ ಪ್ರಧಾನ ಗುರಿಯಾಗಿತ್ತು. ಜನದಟ್ಟಣೆಯ ಎರಡು ಕಣಿವೆಗಳ ನಡುವೆ ಇದು ಇತ್ತು.  ಆದರೆ ಹಿರೋಶಿಮಾದಲ್ಲಿ ಉದುರಿಸಲಾದ ಬಾಂಬ್ ಗಿಂತಲೂ ಹೆಚ್ಚು ಶಕ್ತಿಯ ಬಾಂಬ್ ಆಗಿದ್ದರೂ ಏರು ತ‍ಗ್ಗುಗಳಿಂದ ಕೂಡಿದ್ದ ಭೂಪ್ರದೇಶ ಸ್ಫೋಟದ  ಪರಿಣಾಮವನ್ನು ತಗ್ಗಿಸುವಂತಿತ್ತು.

ಸ್ಥಳೀಯ ಕಾಲಮಾನ ಸುಮಾರು ಬೆಳಗಿನ 11 ಕ್ಕಿಂತ ಕೊಂಚ ಮುನ್ನ ಬಾಕ್ ಸ್ಕಾರ್ ನಾಗಸಾಕಿಯ ಆಗಸಕ್ಕೆ ಬಂತು. ಆದರೆ ಅಲ್ಲಿ ಕೊಕುರಾಗಿಂತಲೂ ಹೆಚ್ಚು ದಪ್ಪನೆಯ ಮೋಡ ಇತ್ತು. ಅದೇ ಹೊತ್ತಿನಲ್ಲಿ ವಿಮಾನದ ಇಂಧನ ಇನ್ನೂ ಕಡಿಮೆಯಾಗಿತ್ತು. ಇನ್ನೂ ಹೆಚ್ಚು ಕಾಲ ಆಗಸದಲ್ಲಿ ಹಾರುವಂತಿರಲಿಲ್ಲ. ಆಗ ನಿಗದಿತ ಗುರಿಗಿಂತ ತುಂಬಾ ಉತ್ತರಕ್ಕೆ ಮೋಡಗಳ ನಡುವೆ ಒಂದು ಖಾಲಿ ಜಾಗ ಕಾಣಿಸಿತು. ತಡಮಾಡದೆ ಬೀಹೆನ್ ಬಾಂಬನ್ನು ಉದುರಿಸಿಬಿಟ್ಟ. 11.02 ಕ್ಕೆ ಬಾಂಬು ನೆಲದಿಂದ ಮೇಲಕ್ಕೆ 1650 ಅಡಿ ಎತ್ತರದ ಮಟ್ಟವನ್ನು ತಲಪಿತು. ನಗರ ಕೇಂದ್ರದ ವಾಯುವ್ಯಕ್ಕಿರುವ ಉರಕಾಮಿ ಕಣಿವೆಯ ಮೇಲೆ ಸ್ಫೋಟಿಸಿತು. ಸ್ಫೋಟದ ಆಘಾತ ಅಲೆಗಳಿಗೆ ಬಾಕ್ ಸ್ಕಾರ್ ಒಮ್ಮೆ ತೀವ್ರವಾಗಿ ಅಲುಗಾಡಿತು. ವೀಕ್ಷಣಾ ವಿಮಾನಗಳು ಹತ್ತಾರು ಸಾವಿರ ಅಡಿ ಎತ್ತರಕ್ಕೆ ಏರಿದ ಅಣಬೆ ಮೋಡವನ್ನು ಚಿತ್ರೀಕರಿಸಿದವು.  ಹೊರಟ ತಾಣವಾದ ಟಿನಿಯನ್ ಅನ್ನು ತಲಪುವಷ್ಟು ಇಂಧನ ಇರದ ಕಾರಣ ವಿಮಾನನ್ನು ಒಕಿನಾವಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಬಾಂಬು ಸ್ಫೋಟಕ್ಕೆ ಸಿಲುಕಿದವರ ಸ್ಥಿತಿ

(image courtesy-news.un.org)

ಇದು ಬಾಂಬು ಉದುರಿಸಿದವರ ಕಥನವಾದರೆ, ಬಾಂಬು ಸ್ಫೋಟಕ್ಕೆ ಸಿಲುಕಿದವರ ಸ್ಥಿತಿ ಹೇಗಿತ್ತು? ಅದು ಮಾನವ ಇತಿಹಾಸಲ್ಲಿ ಕಂಡು ಕೇಳರಿಯದ ಎಂತಹ  ನರಕ ಯಾತನೆಯಾಗಿತ್ತು? ಅಣುಬಾಂಬ್ ದಾಳಿಯ ಪ್ರತ್ಯಕ್ಷದರ್ಶಿ ಸಕೂಯಿ ಶಿಮೋಹಿರಾ ಅವರ ಮಾತಿನಲ್ಲೇ ಕೇಳಿ.  “ಅಮೆರಿಕಾದ ಸೇನಾ ಪಡೆಗಳು ನಡೆಸುತ್ತಿದ್ದ ವೈಮಾನಿಕ ದಾಳಿಯಿಂದ ಪಾರಾಗುವ ಸಲುವಾಗಿ ನಾವು ಹೆಚ್ಚಿನ ಸಮಯವನ್ನು ಸೇನಾ ಬಂಕರ್ ಗಳಲ್ಲಿ ಕಳೆಯುತ್ತಿದ್ದೆವು. ಬಹಳ ದಿನಗಳ ನಂತರ ಅಂದರೆ, ಆಗಸ್ಟ್ 8, 1945 ರಂದು ರಾತ್ರಿ ನಾವು ನಮ್ಮ ಮನೆಯಲ್ಲಿ ಮಲಗಿದ್ದೆವು. ಮಾರನೇ ದಿನ ಅಂದರೆ, ಆಗಸ್ಟ್ 9 ರ ಬೆಳಗಿನ ಅಂದಾಜು 7 ಗಂಟೆಯ ಸಮಯ. ಮನೆಯ ಮೇಲೆ ಆಗಸದಲ್ಲಿ ಹಾರಿ ಹೋದ ವಿಮಾನವನ್ನು ನೋಡಿದ ನಮ್ಮ ತಾಯಿ ಅವಸರವಸರವಾಗಿ ನಮ್ಮನ್ನು ಎಬ್ಬಿಸಿ, ಈಗ ಬಾಂಬ್ ದಾಳಿಯಾಗಲೂ ಬಹುದು. ನೀವು ತಕ್ಷಣ ಬಂಕರ್ ಗೆ ಓಡಿ ಅಂದಳು. ಈ ಕಡೆ ಬರಬೇಡಿ, ಏನೂ ತೊಂದರೆ ಇಲ್ಲವಾದರೆ ನಾನೇ ಅಲ್ಲಿಗೆ ಬಂದು ಕರೆದುಕೊಂಡು ಬರುವೆ ಎಂದಳು. ನಾವು ಬಂಕರ್ ನಲ್ಲಿ ಇದ್ದೆವು. ಸುಮಾರು 11 ಗಂಟೆಯ ಸಮಯ. ಹೊರಗಡೆ ಕಿವಿಗಡಚಿಕ್ಕುವ ಭೀಕರ ಸದ್ದು ಕೇಳಿಸಿತು. ನಾನು ಜೋರಾಗಿ ಕಿರಿಚಿದ್ದು ಹೊರತುಪಡಿಸಿದರೆ ಇನ್ನೇನೂ ನೆನಪಿಲ್ಲ. ಪ್ರಜ್ಞೆ ಮರುಕಳಿಸಿದಾಗ ನೋಡುತ್ತೇನೆ, ನಮ್ಮ ಬಂಕರ್ ನಲ್ಲಿದ್ದ ಬಹುತೇಕರ ಕಣ್ಣುಗುಡ್ಡೆಗಳು ಕಿತ್ತು ಹೊರಬಂದು ಜೋತಾಡುತ್ತಿದ್ದವು. ಅದೃಷ್ಟವಶಾತ್ ನಾನು ಮತ್ತು ನನ್ನ ತಂಗಿ ಅಪಾಯದಿಂದ ಪಾರಾಗಿದ್ದೆವು. ತಕ್ಷಣ ಅಮ್ಮನ ನೆನಪಾಯಿತು. ಮನೆಯ ಕಡೆ ಓಡಿದೆವು. ದಾರಿಯ ತುಂಬ ಎಲ್ಲಿ ನೋಡಿದರೂ ಶವಗಳು. ಮನೆಯ ಒಳಗಡೆ ಅಮ್ಮ ಕುಳಿತಿದ್ದಳು. ಅಳುತ್ತಾ ಹೋಗಿ ಆಕೆಯನ್ನು ಮುಟ್ಟಿದೆವು. ಆಕೆಯ ದೇಹ ಬೂದಿಯಾಗಿ ಉದುರಿಹೋಯಿತು. ಆಕೆ ಕುಳಿತಲ್ಲಿಯೇ ಸತ್ತು ಹೋಗಿದ್ದಳು”. ಇದು ಅಣುಬಾಂಬ್ ದಾಳಿಗೆ ಗುರಿಯಾಗಿ ಬದುಕುಳಿದವರ ಪೈಕಿ ಒಬ್ಬರು ಹೇಳಿದ ಕತೆ. ಹಾಗಾದರೆ ಇತರ ಅನೇಕ ಕತೆಗಳು ಹೇಗಿರಬಹುದು? ಊಹಿಸುವುದೂ ಕಷ್ಟ.

ಹಿರೋಶಿಮಾದ ಮೇಲೆ ಅಮೆರಿಕಾ ಸೇನಾ ಪಡೆ ಉದುರಿಸಿದ ಅಣುಬಾಂಬ್ ನಿಂದ ತಕ್ಷಣ ಸತ್ತವರು 70 ಸಾವಿರ ಮಂದಿ. ವರ್ಷದ ಕೊನೆಗೆ ಇದು 1 ಲಕ್ಷವನ್ನು ದಾಟಿತು. ನಗರದ ಮೂರನೇ ಎರಡು ಭಾಗ ಧ್ವಂಸವಾಯಿತು. ಬಾಂಬ್ ಸ್ಫೋಟದ ಪರಿಣಾಮವಾದ ಅಣಬೆಯಂತಹ ಮೋಡ ನೆಲದಿಂದ 12 ಕಿಲೋಮೀಟರ್ ಎತ್ತರ ಆಗಸಕ್ಕೆ ಏರಿತು.

ನಾಗಸಾಕಿಯ ಮೇಲೆ ನಡೆದ ದಾಳಿಯ ಪರಿಣಾಮ ನೆಲದ ಮೇಲಿನ ತಾಪಮಾನ 7000 ಡಿಗ್ರಿ ಸೆಲ್ಶಿಯಸ್ ದಾಟಿತು. ತಕ್ಷಣ 40 ಸಾವಿರ ಮಂದಿ ಸತ್ತರು. ಅಣುವಿಕಿರಣದ ಪರಿಣಾಮದಿಂದ ವರ್ಷದ ಕೊನೆಗಾಗುವಾಗ ಮತ್ತೆ 30 ಸಾವಿರ ಮಂದಿ ಸತ್ತರು. ನಗರದ 40% ಕಟ್ಟಡಗಳು ನಾಮಾವೇಶವಾದವು.

ಯುದ್ಧವೊಂದರಲ್ಲಿ ಕಂಡು ಕೇಳರಿಯದ ವಿನಾಶ ಉಂಟು ಮಾಡಿದ ಮೊದಲ ಅಣುಬಾಂಬ್ ದಾಳಿಯ ಕಥನವಿದು. ಯುದ್ಧಕ್ಕೆ ಹೊರಟವರು ಜಗತ್ತಿನ ಮೇಲೆ ಹಿಡಿತ ಸಾಧಿಸಬೇಕೆಂಬ ವಿಸ್ತರಣಾ ಬಯಕೆಯ ಸಾಮ್ರಾಜ್ಯಶಾಹಿ ಶಕ್ತಿಗಳು. ಸತ್ತವರು ಮಿಲಿಯಗಟ್ಟಲೆ ಮಂದಿ ಮತ್ತು ಅವರಲ್ಲಿ ಬಹುತೇಕರು ಯುದ್ಧದೊಂದಿಗೆ ಯಾವ ಸಂಬಂಧವೂ ಇಲ್ಲದ ಅಮಾಯಕ ನಾಗರಿಕರು !

1939-45 ರ ನಡುವೆ ಆರು ವರ್ಷಗಳ ಕಾಲ ಜರ್ಮನಿ, ಇಟಲಿ, ಜಪಾನ್ ಮತ್ತು ಬ್ರಿಟನ್, ಫ್ರಾನ್ಸ್, ಅಮೆರಿಕಾ, ಸೋವಿಯತ್ ಯೂನಿಯನ್ ನಡುವೆ ನಡೆದ ಘನಘೋರ ಎರಡನೆಯ ಮಹಾಯುದ್ಧದಲ್ಲಿ ಸತ್ತವರು 6.5 ಕೋಟಿ ಜನ. ಇದರಲ್ಲಿ ಬಹುತೇಕರು ನಾಗರಿಕರು. ಎರಡನೆಯ ಮಹಾಯುದ್ಧ ಮತ್ತು ಅದರಲ್ಲೂ ಮುಖ್ಯವಾಗಿ ಜಪಾನ್ ಮೇಲಣ ಅಣುಬಾಂಬ್ ದಾಳಿ ನಮ್ಮನ್ನು ಯುದ್ಧದ ವಿರುದ್ಧ ಚಿಂತಿಸುವಂತೆ ಮಾಡಬೇಕು. ಯುದ್ಧದಲ್ಲಿ ‘ಗೆದ್ದವ ಸೋತ ಸೋತವ ಸತ್ತ’ ಎಂಬ ಮಾತಿದೆ. ಯುದ್ಧ ಎಂದರೆ ಮಹಾ ವಿನಾಶ. ಯುದ್ಧ ಎಂದರೆ ಘೋರ ಸಾವು. ಅದಕ್ಕೆ ಹಿರೋಶಿಮಾ ಮತ್ತು ನಾಗಸಾಕಿಯ ಘಟನೆಗಳು ಜೀವಂತ ಉದಾಹರಣೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಗುಲಾಬಿ ಬಿಳಿಮಲೆ
ಮಂಗಳೂರು ಮೂಲದವರಾದ ಇವರು,
ವೃತ್ತಿಯಿಂದ ಪತ್ರಕರ್ತೆ ಹಾಗು ಪ್ರವೃತ್ತಿಯಿಂದ ಬರಹಗಾರ್ತಿಯಾಗಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು